ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜನವರಿ.15 : ಹನ್ನೊಂದನೆ ವರ್ಷದ ಮಕರ ಸಂಕ್ರಾಂತಿ ಮಹೋತ್ಸವದ ಅಂಗವಾಗಿ ಮಾಸ್ತಮ್ಮದೇವಿಯ ಮೆರವಣಿಗೆ ವಿಜೃಂಭಣೆಯಿಂದ ಸಾಗಿತು.
ಉಚ್ಚಂಗಿಯಲ್ಲಮ್ಮ ದೇವಸ್ಥಾನದಿಂದ ಹೊರಟ ಮಾಸ್ತಮ್ಮದೇವಿ ಮೆರವಣಿಗೆ ಸಣ್ಣಗರಡಿ ಸಮೀಪವಿರುವ ದೇವಸ್ಥಾನಕ್ಕೆ ತಲುಪಿತು.
ಪೂರ್ಣಕುಂಭ ಹೊತ್ತ ನೂರಾರು ಮಹಿಳೆಯರು ಮೆರವಣಿಗೆಯಲ್ಲಿ ಸಾಗಿದರು.
ಡೊಳ್ಳು ತಮಟೆ ಮೆರವಣಿಗೆಯಲ್ಲಿತ್ತು.
ನಗರಸಭೆ ಸದಸ್ಯರುಗಳಾದ ಆರ್.ನಾಗಮ್ಮ, ಭಾಸ್ಕರ್, ಗುತ್ತಿಗೆದಾರ ಕುಮಾರಸ್ವಾಮಿ, ನಗರಸಭೆ ಮಾಜಿ ಅಧ್ಯಕ್ಷ ಸಿ.ಟಿ.ಕೃಷ್ಣಮೂರ್ತಿ, ಮಾಜಿ ಸದಸ್ಯ ಮಹೇಶ್ ಹಾಗೂ ದೇವಸ್ಥಾನದ ಭಕ್ತ ಮಂಡಳಿಯವರು ಮೆರವಣಿಗೆಯಲ್ಲಿದ್ದರು.
ಐತಿಹಾಸಿಕ ಚಿತ್ರದುರ್ಗದ ಬೆಟ್ಟದಲ್ಲಿರುವ ಏಕನಾಥೇಶ್ವರಿ ಅಮ್ಮನನ್ನು ಮಕರ ಸಂಕ್ರಾಂತಿಯಂದು ವಿಶೇಷವಾಗಿ ಅಲಂಕರಿಸಿ ಪೂಜಿಸಲಾಯಿತು.
ಬೃಹಧಾಕಾರವಾದ ಸುಗಂಧರಾಜ ಹಾರ, ಗುಲಾಬಿ, ಕನಕಾಂಬರ, ಸೇವಂತಿಗೆ, ಹಸಿರುಪತ್ರೆ, ಕಣಗಲ ಹೂವಿನಿಂದ ಸಿಂಗರಿಸಿ ಪೂಜಿಸಲಾಯಿತು.
ನೂರಾರು ಭಕ್ತರು ಬೆಟ್ಟವೇರಿ ಏಕನಾಥೇಶ್ವರಿ ಅಮ್ಮನ ದರ್ಶನ ಪಡೆದರು. ಅಲ್ಲಲ್ಲಿ ದೇವಸ್ಥಾನಗಳಲ್ಲಿ ಸಿಹಿ ಪೊಂಗಲ್, ಪುಳಿಯೋಗರೆ, ಎಳ್ಳು-ಬೆಲ್ಲವನ್ನು ಭಕ್ತರಿಗೆ ವಿತರಿಸಲಾಯಿತು.
ನಗರದ ಕೋಟೆ ರಸ್ತೆಯಲ್ಲಿರುವ ಉಚ್ಚಂಗಿಯಲ್ಲಮ್ಮನನ್ನು ಬಗೆ ಬಗೆಯ ಹೂವು ಹಾರ, ಹಸಿರುಪತ್ರೆ ಹಾಗೂ ನಾನಾ ರೀತಿಯ ಹಣ್ಣುಗಳಿಂದ ಕಣ್ಣು ಕೋರೈಸುವಂತೆ ಅಲಂಕರಿಸಲಾಗಿತ್ತು.
ಕಿತ್ತಳೆ, ದ್ರಾಕ್ಷಿ, ಸೇಬು, ಅನಾನಸ್ ಹಣ್ಣುಗಳಿಂದ ಉಚ್ಚಂಗಿಯಲ್ಲಮ್ಮನಿಗೆ ಸಿಂಗರಿಸಲಾಗಿತ್ತು. ಬೆಳಗಿನಿಂದ ಸಂಜೆಯತನಕ ಸಹಸ್ರಾರು ಭಕ್ತರು ಉಚ್ಚಂಗಿಯಲ್ಲಮ್ಮನ ದರ್ಶನ ಪಡೆದು ಶ್ರದ್ದಾಭಕ್ತಿಯನ್ನು ಸಮರ್ಪಿಸಿದರು.
ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಜೋಗಿಮಟ್ಟಿ ರಸ್ತೆಯಲ್ಲಿರುವ ತ್ರಿಪುರ ಸುಂದರಿ ತಿಪ್ಪಿನಘಟ್ಟಮ್ಮನಿಗೆ ವಿಶೇಷವಾಗಿ ಅಲಂಕರಿಸಿ ಪೂಜಿಸಲಾಯಿತು.
ಅಭಿಷೇಕ, ಹೂವಿನ ಅಲಂಕಾರ, ಮಹಾ ಮಂಗಳಾರತಿ ನಂತರ ಭಕ್ತರಿಗೆ ಪ್ರಸಾದ ವಿನಿಯೋಗಿಸಲಾಯಿತು.
ದೇವಸ್ಥಾನದ ಮುಂಭಾಗ ಕಬ್ಬಿನ ಜಲ್ಲೆ ಹಾಗೂ ಬಾಳೆದಿಂಡಿನಿಂದ ಸಿಂಗರಿಸಲಾಗಿತ್ತು. ಬಣ್ಣ ಬಣ್ಣ ಹೂವು ಹಾರ, ದ್ರಾಕ್ಷಿ, ಅನಾನಸ್, ಕಿತ್ತಲೆ ಹಣ್ಣುಗಳಿಂದ ದೇವಸ್ಥಾನದ ಒಳಗಡೆ ಅಲಂಕರಿಸಲಾಗಿತ್ತು.