ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದಿನಕ್ಕೊಂದು ಹೊಸ ಬೆಳವಣಿಗೆಗಳು ನಡೆಯುತ್ತಿದ್ದು, ಇದೀಗ ಪ್ರಕರಣದ 14ನೇ ಆರೋಪಿ ಪ್ರದೋಷ್ ಸಲ್ಲಿಸಿರುವ ಕ್ಷಮಾದಾನ ಅರ್ಜಿ ಮತ್ತಷ್ಟು ಕುತೂಹಲ ಮೂಡಿಸಿದೆ. ಪ್ರಕರಣದಲ್ಲಿ ತನ್ನ ಪಾತ್ರದ ಬಗ್ಗೆ ಪ್ರದೋಷ್ ನ್ಯಾಯಾಲಯದ ಮುಂದೆ ಹಲವು ಸಂಗತಿಗಳನ್ನು ಉಲ್ಲೇಖಿಸಿದ್ದು, ತಾನು ಹತ್ಯೆಯನ್ನು ತಡೆಯಲು ಪ್ರಯತ್ನಿಸಿದ್ದಾಗಿ ಹೇಳಿಕೊಂಡಿದ್ದಾನೆ.
ಪ್ರದೋಷ್ ತನ್ನ ಅರ್ಜಿಯಲ್ಲಿ, “ನನ್ನಿಂದ ಯಾವುದೇ ತಪ್ಪಾಗಿಲ್ಲ. ನಾನು ಹಲ್ಲೆ ತಡೆಯಲು ಪ್ರಯತ್ನಿಸಿದರೂ ದರ್ಶನ್ ಹಾಗೂ ಇತರರು ನನ್ನ ಮಾತು ಕೇಳಲಿಲ್ಲ” ಎಂದು ಹೇಳಿಕೊಂಡಿದ್ದಾನೆ. ರೇಣುಕಾಸ್ವಾಮಿ ಮೇಲೆ ನಡೆದ ಹಲ್ಲೆಯ ಸಂದರ್ಭದಲ್ಲಿ ತಾನು ಅಲ್ಲಿದ್ದರೂ ಅದನ್ನು ತಡೆಯಲು ಸಾಧ್ಯವಾಗಲಿಲ್ಲ ಎಂದು ಅರ್ಜಿಯಲ್ಲಿ ವಿವರಿಸಿರುವುದಾಗಿ ವರದಿಯಾಗಿದೆ.
ಪ್ರದೋಷ್ ಹೇಳಿಕೆಯ ಪ್ರಕಾರ, ರೇಣುಕಾಸ್ವಾಮಿ ಮೇಲೆ ದರ್ಶನ್ ಸೇರಿದಂತೆ ಕೆಲವರು ತೀವ್ರವಾಗಿ ಹಲ್ಲೆ ನಡೆಸಿದರು. ಹಲ್ಲೆ ನಿಲ್ಲಿಸುವಂತೆ ತಾನು ಮನವಿ ಮಾಡಿದ್ದರೂ ಯಾರೂ ಕೇಳಲಿಲ್ಲ ಎಂದು ಆತ ಆರೋಪಿಸಿದ್ದಾನೆ. ಹಲ್ಲೆಯ ವೇಳೆ ಸಿಗರೇಟ್‌ನಿಂದ ಸುಟ್ಟಿರುವುದು ಸೇರಿದಂತೆ ರೇಣುಕಾಸ್ವಾಮಿಗೆ ಚಿತ್ರಹಿಂಸೆ ನೀಡಲಾಗಿದೆ ಎಂದೂ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ರೇಣುಕಾಸ್ವಾಮಿಯ ಮೊಬೈಲ್ ಪರಿಶೀಲಿಸಿದ ಸಂದರ್ಭದಲ್ಲಿ ಪವಿತ್ರಾ ಗೌಡ ಸೇರಿದಂತೆ ಕೆಲವು ಮಹಿಳೆಯರಿಗೆ ಆತ ಅಶ್ಲೀಲ ಸಂದೇಶ ಕಳುಹಿಸಿದ್ದಾನೆ ಎಂಬುದು ಗೊತ್ತಾಯಿತು. ಇದರಿಂದ ಅಲ್ಲಿದ್ದವರು ಮತ್ತಷ್ಟು ಆಕ್ರೋಶಗೊಂಡರು ಎಂದು ಪ್ರದೋಷ್ ತನ್ನ ಹೇಳಿಕೆಯಲ್ಲಿ ತಿಳಿಸಿರುವುದಾಗಿ ವರದಿಯಾಗಿದೆ. ಹಲ್ಲೆಯಿಂದ ನರಳುತ್ತಿದ್ದ ರೇಣುಕಾಸ್ವಾಮಿಗೆ ತಾನು ಊಟ ಮತ್ತು ನೀರು ನೀಡಿದ್ದೆ. ಆದರೆ ಪರಿಸ್ಥಿತಿ ತನ್ನ ನಿಯಂತ್ರಣಕ್ಕೆ ಮೀರಿತ್ತು ಎಂದು ಪ್ರದೋಷ್ ಹೇಳಿಕೊಂಡಿದ್ದಾನೆ.

ಘಟನೆಯ ಬಳಿಕ ಚಾಲಕ ರವಿಶಂಕರ್ ಬಂದು ರೇಣುಕಾಸ್ವಾಮಿ ಮೃತಪಟ್ಟಿರುವುದಾಗಿ ತಿಳಿಸಿದಾಗ ದರ್ಶನ್ ಆತಂಕಗೊಂಡಿದ್ದರು ಎಂದು ಪ್ರದೋಷ್ ಅರ್ಜಿಯಲ್ಲಿ ಹೇಳಿಕೊಂಡಿದ್ದಾನೆ. ಕೊಲೆ ಪ್ರಕರಣದಿಂದ ಪಾರಾಗಲು ಸಹಾಯ ಮಾಡದಿದ್ದರೆ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ದರ್ಶನ್ ಹೇಳಿದ್ದರಿಂದ ಭಯಗೊಂಡು ಶವ ವಿಲೇವಾರಿ ಹಾಗೂ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನದಲ್ಲಿ ತಾನು ಸಹಕರಿಸಬೇಕಾಯಿತು ಎಂದು ಪ್ರದೋಷ್ ನ್ಯಾಯಾಲಯಕ್ಕೆ ತಿಳಿಸಿರುವುದಾಗಿ ವರದಿಯಾಗಿದೆ.
ಜೈಲಿಗೆ ಹೋದ ಬಳಿಕವೂ ತಮಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಲಾಗಿದೆ ಎಂದು ಪ್ರದೋಷ್ ಆರೋಪಿಸಿದ್ದಾನೆ. ಪ್ರಕರಣದಲ್ಲಿ ತನ್ನ ನೇರ ಪಾತ್ರವಿಲ್ಲ, ಪರಿಸ್ಥಿತಿಯ ಕಾರಣದಿಂದಾಗಿ ಕೆಲ ಕಾರ್ಯಗಳಲ್ಲಿ ಸಹಕರಿಸಬೇಕಾಯಿತು ಎಂದು ಹೇಳಿಕೊಂಡಿರುವ ಆತ, ತನ್ನ ಬಳಿ ಇರುವ ಎಲ್ಲ ಮಾಹಿತಿಯನ್ನು ನ್ಯಾಯಾಲಯದ ಮುಂದೆ ಬಹಿರಂಗಪಡಿಸಲು ಸಿದ್ಧನಿದ್ದೇನೆ ಎಂದು ತಿಳಿಸಿದ್ದಾನೆ.
ಈ ಹಿನ್ನೆಲೆಯಲ್ಲಿ ತನ್ನನ್ನು ಕ್ಷಮಾದಾನ ನೀಡಿ ಬಿಡುಗಡೆ ಮಾಡಬೇಕು ಎಂದು ಪ್ರದೋಷ್ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾನೆ. ಅವರ ಅರ್ಜಿಯ ವಿಚಾರಣೆಯ ಬಳಿಕ ನ್ಯಾಯಾಲಯ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ಇದೀಗ ಕುತೂಹಲ ಮೂಡಿಸಿದೆ.










