ಸುದ್ದಿಒನ್ ವೆಬ್ ಡೆಸ್ಕ್
ಗುಜರಾತ್‌ನ ಮೊರ್ಬಿ ಜಿಲ್ಲೆಯಲ್ಲಿ ಮಚ್ಚು ನದಿಯ ಮೇಲಿನ ತೂಗು ಸೇತುವೆ ಕುಸಿದು 140 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಸಾಕಷ್ಟು ಮಂದಿ ನಾಪತ್ತೆಯಾಗಿದ್ದು, ಅಧಿಕಾರಿಗಳು ರಕ್ಷಣಾ ಕ್ರಮ ಕೈಗೊಂಡಿದ್ದಾರೆ. ಈ ದುರಂತ ಘಟನೆಯಿಂದ ಇಡೀ ದೇಶವೇ ಬೆಚ್ಚಿಬಿದ್ದಿದೆ. ಆದರೆ, ಈ ಹಿಂದೆಯೂ ಇಂತಹ ದುರಂತ ಘಟನೆಗಳು ನಡೆದಿವೆ. ನೂರಾರು ಜನರು ಕಾಲ್ತುಳಿತ ಮತ್ತು ನೈಸರ್ಗಿಕ ವಿಕೋಪಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಮೊರ್ಬಿ ದುರಂತದ ಈ ಸಮಯದಲ್ಲಿ ಅಂತಹ ಕೆಲವು ಘಟನೆಗಳನ್ನು ಮೆಲುಕು ಹಾಕೋಣ. ಇನ್ನೆಂದೂ ಇಂತಹ ದುರಂತಗಳು ಸಂಭವಿಸದಿರಲಿ ಎಂದು ನಾವೆಲ್ಲರೂ ಪ್ರಾರ್ಥಿಸೋಣ.
2022, ಜನವರಿ 1: ಜಮ್ಮು ಮತ್ತು ಕಾಶ್ಮೀರದ ಮಾತಾ ವೈಷ್ಣೋ ದೇವಿ ದೇವಸ್ಥಾನದಲ್ಲಿ ಉಂಟಾದ ಕಾಲ್ತುಳಿತದಲ್ಲಿ 12 ಮಂದಿ ಸಾವನ್ನಪ್ಪಿ ಸಾಕಷ್ಟು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.
2016, ಏಪ್ರಿಲ್ 10: ಕೇರಳದ ಕೊಲ್ಲಂ ಬಳಿಯ ದೇವಾಲಯ ಸಂಕೀರ್ಣದಲ್ಲಿ ಭಾರಿ ಸ್ಫೋಟ ಸಂಭವಿಸಿ 110 ಮಂದಿ ಸಾವನ್ನಪ್ಪಿ, 280 ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದರು. ದೇವಸ್ಥಾನದ ಆಶ್ರಯದಲ್ಲಿ ಸಿಡಿಮದ್ದು ಪ್ರದರ್ಶನ ನಡೆಯುತ್ತಿದ್ದಾಗ ಈ ಅವಘಡ ಸಂಭವಿಸಿತ್ತು.
2016, ಮಾರ್ಚ್ 31: ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದಲ್ಲಿ ನಿರ್ಮಾಣ ಹಂತದಲ್ಲಿದ್ದ ವಿವೇಕಾನಂದ ಮೇಲ್ಸೇತುವೆ ಕುಸಿದು ಬಿದ್ದು 27 ಮಂದಿ ಸಾವನ್ನಪ್ಪಿ, 80 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
2014, ಅಕ್ಟೋಬರ್ 3: ಬಿಹಾರದ ರಾಜಧಾನಿ ಪಾಟ್ನಾದಲ್ಲಿ ದಸರಾ ಆಚರಣೆ ವೇಳೆ ಗಾಂಧಿ ಮೈದಾನದಲ್ಲಿ ರಾವಣ ದಹನದ ವೇಳೆ ಕಾಲ್ತುಳಿತ ಉಂಟಾಗಿ ಒಟ್ಟು 32 ಮಂದಿ ಪ್ರಾಣ ಕಳೆದುಕೊಂಡಿದ್ದರು.
2013, ಅಕ್ಟೋಬರ್ 13 : ಮಧ್ಯಪ್ರದೇಶದ ದಾತಿಯಾ ಜಿಲ್ಲೆಯ ರತನ್‌ಗಢ ದೇವಸ್ಥಾನದಲ್ಲಿ ನವರಾತ್ರಿ ಆಚರಣೆಯ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿತ್ತು. ಈ ದುರಂತದಲ್ಲಿ 115 ಮಂದಿ ಸಾವನ್ನಪ್ಪಿ, 100 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ನದಿಯ ಸೇತುವೆ ಕುಸಿಯುವ ಭೀತಿ ಎದುರಾಗಿದೆ ಎಂಬ ಸುಳ್ಳು ಸುದ್ದಿ ಹಬ್ಬಿದ್ದು, ಈ ಕಾಲ್ತುಳಿತಕ್ಕೆ ಕಾರಣವಾಗಿತ್ತು.
2013, ಫೆಬ್ರವರಿ 10: ಕುಂಭಮೇಳದ ವೇಳೆ ಉತ್ತರ ಪ್ರದೇಶದ ಅಲಹಾಬಾದ್ ರೈಲು ನಿಲ್ದಾಣದಲ್ಲಿ ಕಾಲ್ತುಳಿತ ಸಂಭವಿಸಿ 36 ಮಂದಿ ಸಾವನ್ನಪ್ಪಿದ್ದರು.
2012, ನವೆಂಬರ್ 19: ಬಿಹಾರದ ರಾಜಧಾನಿ ಪಾಟ್ನಾದ ಗಂಗಾನದಿಯ ಅದಾಲತ್ ಘಾಟ್‌ನಲ್ಲಿ ಚಾಟ್ ಪೂಜೆ ವೇಳೆ ಕಾಲ್ತುಳಿತ ಸಂಭವಿಸಿ 20 ಮಂದಿ ಪ್ರಾಣ ಕಳೆದುಕೊಂಡಿದ್ದರು.
2011, ಜನವರಿ 14: ಕೇರಳದ ಶಬರಿಮಲೆ ದೇವಸ್ಥಾನದಲ್ಲಿ ಕಾಲ್ತುಳಿತದಲ್ಲಿ 106 ಭಕ್ತರು ಪ್ರಾಣ ಕಳೆದುಕೊಂಡರು. 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
2010, ಮಾರ್ಚ್ 4: ಉತ್ತರ ಪ್ರದೇಶದ ಪ್ರತಾಪಗಢ ಜಿಲ್ಲೆಯ ರಾಮ ಜಾನಕಿ ದೇವಸ್ಥಾನದಲ್ಲಿ ಕಾಲ್ತುಳಿತ ಸಂಭವಿಸಿ
63 ಜನರು ಸಾವನ್ನಪ್ಪಿದ್ದರು.
2008, ಸೆಪ್ಟೆಂಬರ್ 30: ರಾಜಸ್ಥಾನದ ಜೋಧಪುರದ ಚಾಮುಂಡಾ ದೇವಿ ದೇವಸ್ಥಾನದಲ್ಲಿ ಬಾಂಬ್ ಸ್ಫೋಟಗೊಂಡು ಕಾಲ್ತುಳಿತಕ್ಕೆ 250 ಜನರು ಸಾವನ್ನಪ್ಪಿದ್ದರು. 160ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
2008, ಆಗಸ್ಟ್ 3: ಹಿಮಾಚಲ ಪ್ರದೇಶದ ಬಿಲಾಸ್‌ಪುರ ಜಿಲ್ಲೆಯ ನೈನಾ ದೇವಿ ದೇವಸ್ಥಾನದಲ್ಲಿ ಭೂಕುಸಿತ ಸಂಭವಿಸಿ ಉಂಟಾದ ಕಾಲ್ತುಳಿತದಲ್ಲಿ 162 ಜನರು ಸಾವನ್ನಪ್ಪಿದ್ದರು. 47 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
2005, ಜನವರಿ 25: ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಮಂಧರ ದೇವಿ ದೇವಸ್ಥಾನದಲ್ಲಿ ಕಾಲ್ತುಳಿತದಲ್ಲಿ 340 ಭಕ್ತರು ಸಾವನ್ನಪ್ಪಿದ್ದರು. ನೂರಾರು ಮಂದಿ ಗಾಯಗೊಂಡಿದ್ದರು.
1997, ಜೂನ್ 13: ದೆಹಲಿಯ ದೇಸರಾಜ ಧಾನಿಯಲ್ಲಿರುವ ಉಫಾಹರ್ ಥಿಯೇಟರ್‌ನಲ್ಲಿ ಬಾಲಿವುಡ್ ಚಲನಚಿತ್ರ ‘ಬಾರ್ಡರ್’ ಪ್ರದರ್ಶನದ ವೇಳೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿತ್ತು. ಈ ಅಪಘಾತದಲ್ಲಿ 59 ಮಂದಿ ಸಾವನ್ನಪ್ಪಿದ್ದರು. 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
1997, ಫೆಬ್ರವರಿ 23: ಒಡಿಶಾದ ಬರಿಪಾಡಾ ಜಿಲ್ಲೆಯಲ್ಲಿ ನಾಯಕರ ಸಭೆಯಲ್ಲಿ ಬೆಂಕಿ ಕಾಣಿಸಿಕೊಂಡು ಕಾಲ್ತುಳಿತಕ್ಕೆ ಕಾರಣವಾಯಿತು. ಇದರಿಂದ 206 ಮಂದಿ ಪ್ರಾಣ ಕಳೆದುಕೊಂಡು, 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
1954, ಫೆಬ್ರವರಿ 3: ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆದ ಮಹಾ ಕುಂಭಮೇಳದಲ್ಲಿ ಕಾಲ್ತುಳಿತ ಸಂಭವಿಸಿತು. ಈ ದುರಂತ ಘಟನೆಯಲ್ಲಿ 800ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಭಾರತದ ಸ್ವಾತಂತ್ರ್ಯದ ನಂತರ ನಡೆದ ಮೊದಲ ಕುಂಭಮೇಳವಾಗಿದ್ದರಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.