ಚಿತ್ರದುರ್ಗ: ಜನಾರ್ದನ ರೆಡ್ಡಿ ಬಿಜೆಪಿಯಲ್ಲಿ ಟಿಕೆಟ್ ಸಿಗದ ಹಿನ್ನೆಲೆ ಸ್ವಂತ ಪಕ್ಷವನ್ನು ಶುರು ಮಾಡಿ, ಅದರಿಂದ ಸ್ಪರ್ಧೆ ಮಾಡುವುದಾಗಿ ಅಧಿಜೃತ ಘೋಷಣೆ ಮಾಡಿ ಆಗಿದೆ. ಇದೀಗ ಒಬ್ಬೊಬ್ಬರಾಗಿಯೇ ಬಿಜೆಪಿಯ ಟಿಕೆಟ್ ಆಕಾಂಕ್ಷಿಗಳು ರೆಡ್ಡಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಇದೀಗ ಗನ್ನಾಯಕನಹಳ್ಳಿ ಹೆಚ್ ಮಹೇಶ್ ರೆಡ್ಡಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಇಂದು ಗಂಗಾವತಿಯಲ್ಲಿರುವ ರೆಡ್ಡಿ ಪಕ್ಷದ ಕಛೇರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹಿರಿಯೂರಿನ ಹಲವಾರು ಕಾರ್ಯಕರ್ತರೊಂದಿಗೆ ಮಹೇಶ್ ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಪಕ್ಷದ ಶಾಲು ಹಾಕಿ ರೆಡ್ಡಿ ಸ್ವಾಗತಿಸಿದ್ದಾರೆ. ಇಷ್ಟು ದಿನ ಈಗಾಗಲೇ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವೆ ಎಂದು ಕ್ಷೇತ್ರ ಪ್ರಚಾರದಲ್ಲಿದ್ದರು. ಜೊತೆಗೆ ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಯೂ ಆಗಿದ್ದರು. ದಿಢೀರನೇ ರೆಡ್ಡಿ ಪಕ್ಷ ಸೇರ್ಪಡೆಯಾಗಿದ್ದಾರೆ. ಹಿರಿಯೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ನಡೆಸಲಿದ್ದಾರೆ.

ಬಿಜೆಪಿಯಿಂದ ಟಿಕೆಟ್ ಸಿಗುವ ನಿರೀಕ್ಷೆ ಮಹೇಶ್ ಅವರಿಗೆ ಇತ್ತು. ಆದರೆ ಬಿಜೆಪಿಯಿಂದ ಯಾವುದೇ ಸ್ಪಂದನೆ ವ್ಯಕ್ತವಾಗದ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಜನಾರ್ಧನ ರೆಡ್ಡಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಇಂದು ಅಧಿಕೃತವಾಗಿ ಮಹೇಶ್ ರೆಡ್ಡಿ ಪಕ್ಷ ಸೇರಿದ್ದಾರೆ. ಪಕ್ಷ ಸೇರ್ಪಡೆ ಬಗ್ಗೆ ಮಾತನಾಡಿರುವ ಮಹೇಶ್ ಅವರು, ” ಇದೇ ತಿಂಗಳ 11 ರಂದು ನಮ್ಮ ಪಕ್ಷದ ನಾಯಕರಾದ ಜನಾರ್ಧನ ರೆಡ್ಡಿಯವರ ಹುಟ್ಟು ಹಬ್ಬ ಇರುವುದರಿಂದ ನಾವು ಇಂದು ಭೇಟಿಯಾಗಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿದ್ದೇವೆ. ನಮ್ಮ ನಾಯಕ ರೆಡ್ಡಿಯವ ಪಕ್ಷದ ಸಿದ್ಧಾಂತ, ನಾಯಕರ ತಾಳ್ಮೆ, ವರ್ಚಸ್ಸು, ಅನುಭವ, ಮೆಚ್ಚುಗೆ ವ್ಯಕ್ತಪಡಿಸಿ ಪಕ್ಷವನ್ನು ಸೇರಿಕೊಂಡೆವು. ನಾಯಕರು ಸಹ ನಮ್ಮನ್ನು ತುಂಬು ಹೃದಯದಿಂದ ಸ್ವಾಗತಿಸಿದ್ದಾರೆ. ಹಿರಿಯೂರಿನಲ್ಲಿ ಪಕ್ಷದ ಕಛೇರಿ ಪ್ರಾರಂಭಿಸುವಂತೆ ಸೂಚಿಸಿದ್ದಾರೆ. ಶೀಘ್ರದಲ್ಲೇ ಕ್ಷೇತ್ರದಲ್ಲಿ ಬಹಿರಂಗ ಸಭೆ ಏರ್ಪಡಿಸಲು ತಿಳಿಸಿದ್ದಾರೆ. ಆ ಬಹಿರಂಗ ಸಭೆಯನ್ನು ಕ್ಷೇತ್ರದ ಮತದಾರರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅಂದು ಬಹಿರಂಗ ಸಭೆಯಲ್ಲಿ ಇನ್ನೂ ಅನೇಕ ಪಕ್ಷದ ಮುಖಂಡರು, ಕಾರ್ಯಕರ್ತರು ನಮ್ಮ ಪಕ್ಷ ಸೇರಲಿದ್ದಾರೆ. ಈ ಬಾರಿ ಸ್ಥಳೀಯ ಅಭ್ಯರ್ಥಿಗೆ ಮತದಾರರು ಆಶಿರ್ವಾದ ಮಾಡಲಿದ್ದಾರೆ ಎಂದು ಮಹೇಶ್ ತಿಳಿಸಿದರು.

