ಮಹಾತ್ಮರನ್ನ ಜಾತಿಗೆ ಸೀಮಿತ ಮಾಡಬಾರದು : ಡಾ.ಬಸವಕುಮಾರ ಸ್ವಾಮಿಗಳವರು

2 Min Read

ಚಿತ್ರದುರ್ಗ, ನ.18 : ಯಾರು ಜಾತಿ ವ್ಯವಸ್ಥೆಯನ್ನು ದಿಕ್ಕರಿಸಿ ಸಮಾ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿ, ಆದರ್ಶ ಪಥದ ದರ್ಶನವನ್ನು ಮಾಡಿಸಿದ ದಾರ್ಶನಿಕರನ್ನು ಆಯಾ ಜಾತಿ ವ್ಯವಸ್ಥೆಗೆ ಕಟ್ಟಿ ಹಾಕುತ್ತಿರುವುದು ಆದರ್ಶ ಸಮಾಜ ನಿರ್ಮಾತೃಗಳಿಗೆ ಮಾಡುತ್ತಿರುವ  ಘೋರ ಅನ್ಯಾಯವಲ್ಲದೆ ಮತ್ತೇನು ಎಂದು ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಹಾಗೂ ಎಸ್ ಜೆ ಎಂ ವಿದ್ಯಾಪೀಠದ ಆಡಳಿತ ಮಂಡಳಿಯ ಸದಸ್ಯರಾದ ಡಾ.ಬಸವಕುಮಾರ ಸ್ವಾಮಿಗಳವರು ವಿಷಾದ ವ್ಯಕ್ತಪಡಿಸಿದರು.

 

ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಕರ್ತೃ ಮುರುಗಿಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಲೀಲಾ ವಿಶ್ರಾಂತಿ ತಾಣದ ಮುಂಭಾಗದಲ್ಲಿ ನಡೆದ ದಾಸ -ಸಂತ ಶ್ರೇಷ್ಠ ಕನಕದಾಸರ ಜಯಂತಿಯ ನೇತೃತ್ವ ವಹಿಸಿ  ಮಾತನಾಡಿದ ಶ್ರೀಗಳು, ವಿಶ್ವ ಸಂತರನ್ನ, ದಾರ್ಶನಿಕರನ್ನ ವಿಶ್ವವಿಭೂತಿ ಪುರುಷರನ್ನ ಒಂದೊಂದು ಜಾತಿಗೆ ಹಣೆ ಪಟ್ಟಿ ಕಟ್ಟುತ್ತಾ ಹೋದರೆ ಹೇಗೆ ಎಂದು ಪ್ರಶ್ನಿಸಿದ ಶ್ರೀಗಳು ಅದರಿಂದ ಅವರನ್ನು ಹೊರತರದ ಹೊರತು ಸಮಗ್ರ ಸಮಾಜದ ಬೆಳವಣಿಗೆಗೆ ಕಂಟಕಪ್ರಾಯ. ವ್ಯವಸ್ಥೆ ಕಟ್ಟಲಿಕ್ಕೆ, ಸಂಘಟನೆ ದೃಷ್ಟಿಯಿಂದ ನಾವು ಮಹಾತ್ಮರನ್ನ ಜಾತಿಗೆ ಸೀಮಿತ ಮಾಡಬಾರದು.  ಅವರ ತತ್ತ್ವಾದರ್ಶಗಳನ್ನು ಸಾರುವುದರೊಂದಿಗೆ  ಅವರ ಕನಸುಗಳನ್ನು ನನಸು ಮಾಡಬೇಕಾಗಿದೆ ಮತ್ತು ಜಾತಿ ಸಂಕೋಲೆಯಿಂದ ಬಿಡುಗಡೆಗೊಳಿಸಬೇಕಾದ ಅನಿವಾರ್ಯವೂ ಬಂದೊದಗಿದೆ ಎಂದರು.

 

ವಚನ ಸಾಹಿತ್ಯದ ನಂತರ ದಾಸ ಸಾಹಿತ್ಯ ಸಮಾಜದ ಸಾಮರಸ್ಯಕ್ಕೋಸ್ಕರವಾಗಿ ಶ್ರಮಿಸಿದೆ. ಕನಕ-ಪುರಂದರ ಕೀರ್ತನೆಗಳು ಶ್ರೇಷ್ಠ ಮಟ್ಟದ್ದಾಗಿವೆ. ಕನಕದಾಸರ ಕೀರ್ತನೆಗಳಂತೂ ಸಮಾಜಕ್ಕೆ ಉತ್ತಮ ಸಂದೇಶ ನೀಡಿವೆ. ಮನುಷ್ಯನಿಗೆ ಹುಟ್ಟಿನಿಂದ ಕುಲ ಬಂದದ್ದಲ್ಲ. ಹುಟ್ಟಿದ ನಂತರ ಇವ ಯಾವ ಕುಲದವ ಎಂದು ಬೇರ್ಪಡಿಸುವ ಹಂತದಲ್ಲಿ ಇಂದಿನ ಸಮಾಜವಿದೆ. ನಿಸರ್ಗ ಅರ್ಥಾತ್ ಭಗವಂತನ ದೃಷ್ಟಿಯಲ್ಲಿ ಯಾವ ಬೇಧವೂ ಇಲ್ಲ. ನಾವೀಗ ಸ್ವಾರ್ಥಕ್ಕಾಗಿ ಜಾತಿ ಸೃಷ್ಟಿಸಿಕೊಂಡು ಬುದ್ಧ, ಬಸವಣ್ಣ, ಗಾಂಧೀಜಿ, ಅಂಬೇಡ್ಕರ್ ಮಹಾವೀರ ,ಏಸು, ಪೈಗಂಬರ್, ನಾನಕರಂತ ಇನ್ನುಳಿದ  ಮಹಾನ್ ಮೇರು ವ್ಯಕ್ತಿತ್ವಗಳನ್ನು ಇಂದಿನ ಆಧುನಿಕ ಸಮಾಜ ಜಾತಿಗೆ ಸೀಮಿತ ಮಾಡುತ್ತಿರುವುದು ಸಮಾಜದ ದುರಂತವೇ ಸರಿ. ಇಂದಿನ ಯುವ ಪೀಳಿಗೆ ಇಂತಹ ಅಸಮಾನತೆಯ ಮಾರ್ಗ ಇತರೆ ಇದ್ಯಾವುದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ, ಗಮನ ಕೊಡದೆ ಆದರ್ಶ ಯಾವುದು ಎಂದರಿತು ಆ ಮಾರ್ಗದಲ್ಲಿ ಸಾಗಬೇಕೆಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಶ್ರೀಮಠದ ನೌಕರರು, ಸಾರ್ವಜನಿಕರು, ವಿದ್ಯಾರ್ಥಿಗಳು  ಉಪಸ್ಥಿತರಿದ್ದರು. ಶ್ರೀಮಠದ ವಿದ್ಯಾರ್ಥಿಗಳು ವಚನ ತತ್ವಪದಗಳನ್ನು ಹಾಡಿದರು. ವಿಜಯದೇವರು ಸ್ವಾಗತಿಸಿದರು. ಅಧ್ಯಾಪಕ ನವೀನ್ ಮಾಸ್ಕಲ್ ಕಾರ್ಯಕ್ರಮ ನಿರ್ವಹಿಸಿದರು. ಪ್ರಾಧ್ಯಾಪಕ ಆನಂದ್  ಎಸ್.‌ ಶರಣು ಸಮರ್ಪಣೆ ಮಾಡಿದರು.

Share This Article
Leave a Comment

Leave a Reply

Your email address will not be published. Required fields are marked *