ಚಿತ್ರದುರ್ಗ ಸೆ. 30: ಜಿಲ್ಲಾಡಳಿತದಿಂದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಕಾರ್ಯಕ್ರಮ ಅ. 02 ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮಕ್ಕೆ ಎಲ್ಲ ಇಲಾಖಾ ಅಧಿಕಾರಿಗಳು, ಸಿಬ್ಬಂದಿಗಳು ತಪ್ಪದೆ ಕಡ್ಡಾಯವಾಗಿ ಹಾಜರಾಗುವಂತೆ ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.
ಬಾಪೂಜಿ ಪ್ರಬಂಧ ಸ್ಪರ್ಧೆ ವಿಜೇತರು : ಮಹಾತ್ಮಾ ಗಾಂಧೀಜಿ ಜಯಂತಿ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಜಿಲ್ಲೆಯ ಪ್ರೌಢಶಾಲೆ, ಪದವಿಪೂರ್ವ ಕಾಲೇಜು ಹಾಗೂ ಪದವಿ/ಸ್ನಾತಕೋತ್ತರ ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಬಾಪೂಜಿ ಪ್ರಬಂಧ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದ್ದು, ಪ್ರೌಢಶಾಲಾ ವಿಭಾಗದಲ್ಲಿ ಚಳ್ಳಕೆರೆ ತಾಲ್ಲೂಕು ಚನ್ನಮ್ಮನಾಗತಿಹಳ್ಳಿಯ ಕೃಷ್ಣ ಪೌಢಶಾಲೆ ವಿದ್ಯಾರ್ಥಿನಿ ಅಕ್ಷತಾ ಹೆಚ್- ಪ್ರಥಮ, ಹೊಸದುರ್ಗ ತಾಲ್ಲೂಕು ಆನಿವಾಳದ ಸ.ಪ.ಪೂ. ಕಾಲೇಜು ವಿದ್ಯಾರ್ಥಿನಿ ಜಮುನಾ- ದ್ವಿತೀಯ ಹಾಗೂ ಹಿರಿಯೂರು ತಾಲ್ಲೂಕು ಯರಬಳ್ಳಿಯ ಸ.ಪ.ಪೂ. ಕಾಲೇಜು ವಿದ್ಯಾರ್ಥಿನಿ ಅಂಕಿತಾ- ತೃತೀಯ ಬಹುಮಾನ ಪಡೆದಿದ್ದಾರೆ.
ಪದವಿಪೂರ್ವ ಕಾಲೇಜು ವಿಭಾಗದಲ್ಲಿ ಚಿತ್ರದುರ್ಗ ತಾಲ್ಲೂಕು ಗಾರೆಹಟ್ಟಿಯ ಬೃಹನ್ಮಠ ಸಂಯುಕ್ತ ಪ.ಪೂ. ಕಾಲೇಜು ವಿದ್ಯಾರ್ಥಿನಿ ನಯನ- ಪ್ರಥಮ, ಎಸ್.ಆರ್.ಎಸ್. ಕಾಲೇಜು ವಿದ್ಯಾರ್ಥಿನಿ ಮಹಾಲಕ್ಷ್ಮಿ- ದ್ವಿತೀಯ ಹಾಗೂ ಚಿತ್ರದುರ್ಗದ ಬಾಲಕರ ಸ.ಪ.ಪೂ. ಕಾಲೇಜು ವಿದ್ಯಾರ್ಥಿ ಉದಯಕಿರಣ್- ತೃತೀಯ ಸ್ಥಾನ ಪಡೆದಿದ್ದಾರೆ.
ಪದವಿ ಕಾಲೇಜು ವಿಭಾಗದಲ್ಲಿ ಸಿರಿಗೆರೆಯ ಎಂ.ಬಿ.ಆರ್. ಪದವಿ ಕಾಲೇಜು ವಿದ್ಯಾರ್ಥಿನಿ ಶ್ರೀರಕ್ಷಾ ಕೆ.ಎಂ.- ಪ್ರಥಮ, ಚಿತ್ರದುರ್ಗದ ಎಸ್.ಜೆ.ಎಂ. ಕಾಲೇಜಿನ ಸಲ್ಮಾ ಎಸ್.- ದ್ವಿತೀಯ ಹಾಗೂ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ರಮ್ಯ ಕೆ.ಟಿ.- ತೃತೀಯ ಬಹುಮಾನ ಪಡೆದಿದ್ದಾರೆ.
ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ರೂ. 3000,, ದ್ವಿತೀಯ-2000 ಹಾಗೂ ತೃತೀಯ ರೂ. 1000 ಗಳ ಬಹುಮಾನ ಮೊತ್ತ ಮತ್ತು ಪ್ರಮಾಣ ಪತ್ರವನ್ನು ವಿಜೇತ ವಿದ್ಯಾರ್ಥಿಗಳಿಗೆ ಅ. 02 ರಂದು ನಡೆಯುವ ಮಹಾತ್ಮಾ ಗಾಂಧೀಜಿ ಜಯಂತಿ ಕಾರ್ಯಕ್ರಮ ಸಂದರ್ಭದಲ್ಲಿ ವಿತರಣೆಯಾಗಲಿದೆ.