ಮೈಸೂರು: ಇಂದು ನಾಡ ಅಧಿದೇವತೆ ತಾಯಿ ಚಾಮುಂಡುಗೆ ಪುಷ್ಪಾರ್ಚನೆ ಮಾಡುವ ಮೂಲಕ ನಾಡ ಹಬ್ಬ ದಸರಾಗೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ ಅವರು ತಾಯಿ ಚಾಮುಂಡಿಗೆ ಪುಷ್ಪಾರ್ಚನೆ ಮಾಡುವ ಮೂಲಕ ದಸರಾಗೆ ಚಾಲನೆ ನೀಡಿದರು. ಬಳಿಕ ಭಾಷಣ ಮಾಡಿದ ಬಾನು ಮುಷ್ತಾಕ ಅವರು, ಹಿಂದಿನ ಮಹಾರಾಜರು ಹಾಗೂ ಮುಸ್ಲಿಮರ ನಡುವೆ ಇದ್ದಂತ ಬಾಂಧವ್ಯದ ಬಗ್ಗೆ ಮಾತನಾಡಿದರು. ಬಾನು ಮುಷ್ತಾಕ ಆಯ್ಕೆಯ ಬಳಿಕ ಸಾಕಷ್ಟು ವಿರೋಧ ಕೇಳಿ ಬಂದಿತ್ತು.
ನನಗೆ ಈಗ ಹೆಮ್ಮೆ ಎನಿಸುವಂತದ್ದು ಮಹಾರಾಜರು, ಅನೇಕ ಅಂಗರಕ್ಷಕರು ಮಹಾರಾಜರಿಗೆ ಇದ್ದರು. ಮಹಾರಾಜರಾದ ಜಯಚಾಮರಾಜೇಂದ್ರ ಒಡೆಯರು ಮುಸ್ಲಿಮರನ್ನು ನಂಬಿ, ಮುಸ್ಕಿಮರನ್ನ ಅನುಮಾನ ಪಡದೆ, ತಮ್ಮ ಅಂಗರಕ್ಷಕ ಸದಸ್ಯರನ್ನಾಗಿ ಮಾಡಿಕೊಂಡು, ಅವರ ಬಗ್ಗೆ ಭರವಸೆ ಇಟ್ಟಂತ ಪ್ರಸಂಗ ನನಗೆ ಬಹಳ ಹೆಮ್ಮೆ ತರುವಂತದ್ದು.
ಸಂಸ್ಕೃತಿ ಅಂದ್ರೆ ಹೃದಯಗಳನ್ನ ಒಟ್ಟುಗೂಡಿಸುವಂತ ಸೇತುವೆ. ಅದು ದ್ವೇಷವನ್ನು ಬೆಳೆಸುವುದಲ್ಲ, ಪ್ರೀತಿಯನ್ನ ಹರಡುವುದೇ ಅದರ ಗುರಿ. ನನ್ನ ಧಾರ್ಮಿಕ ನಂಬಿಕೆಗಳು ನನ್ನ ಜೀವನ ಪಾಠಗಳು, ಯಾವಾಗಲೂ ಹೊದ್ತಿಲ ಗಡಿಯಾಚೆ ದಾಟಿಲ್ಲ. ಅವು ಯಾವತ್ತು ಪ್ರಾಣಿಯನ್ನು, ಮನುಷ್ಯನನ್ನು ನೋಯಿಸಿಲ್ಲ. ಈ ನೆಲದ ಸಂಸ್ಕೃತಿ ನನಗೆ ಕಲಿಸಿದ ಪಾಠ ಅಂದ್ರೆ ಎಲ್ಲರನ್ನು ಒಳಗೊಳ್ಳುವ ಮನಸ್ಸು, ಎಲ್ಲರ ಬದುಕನ್ನು ಗೌರವಿಸುವ ಹೃದಯ. ಇಂದು ಇಡೀ ಜಗತ್ತು ಯುದ್ಧದ ಹಾದಿಯಲ್ಲಿ ನಡೆಯುತ್ತಿರುವಾಗ, ದ್ವೇಷ ರಕ್ತಪಾತದಲ್ಲಿ ಮುಳುಗಿರುವಾಗ ಮೈಸೂರು ದಸರಾ ಕಾರ್ಯಕ್ರಮವು ನಮ್ಮೆಲ್ಲರ ಕಿವಿಯಲ್ಲಿ ಪ್ರತಿಧ್ವನಿಸಲಿ. ಇದು ಶಾಂತಿಯ ಹಬ್ಬ, ಸೌಹಾರ್ದತೆಯ ಹಬ್ಬ. ಇದು ಸರ್ವಜನಾಂಗದ ಶಾಂತಿಯ ತೋಟ ಎಂದು ತಮ್ಮ ಭಾಷಣದಲ್ಲಿ ತಿಳಿಸಿದ್ದಾರೆ.






