ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟರ್ ಕೆ.ಎಲ್.ರಾಹುಲ್ ಮನೆಯಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಮನೆಗೆ ಮಹಾಲಕ್ಷ್ಮಿಯ ಆಗಮನವಾಗಿದೆ. ಕೆ.ಎಲ್.ರಾಹುಲ್ ಹಾಗೂ ನಟಿ ಆಥಿಯಾ ಶೆಟ್ಟಿ ಮೊದಲ ಮಗುವನ್ನ ಬರ ಮಾಡಿಕೊಂಡಿದ್ದಾರೆ. ದಂಪತಿಗೆ ಹೆಣ್ಣು ಮಗು ಜನಿಸಿದ್ದು, ಈ ಖುಷಿಯನ್ನ ಕ್ರಿಕೆಟಿಗ ಕೆ.ಎಲ್.ರಾಹುಲ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಹೆಣ್ಣು ಮಗು ಜನಿಸಿದೆ ಎಂದು ಟ್ವೀಟ್ ಮಾಡಿದ ಕೂಡಲೇ ರಿಟ್ವೀಟ್ ಗಳು ಹೆಚ್ಚಾಗಿ ಬಂದಿವೆ. ಆಪ್ತರು, ಸಂಬಂಧಿಕರು, ನಟ, ನಟಿಯರು ಶುಭಕೋರುತ್ತಿದ್ದಾರೆ. ಸದ್ಯ ತಾಯಿ, ಮಗು ಆರೋಗ್ಯದಿಂದ ಇದ್ದು, ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ನಟ ಸುನೀತ್ ಶೆಟ್ಟಿ ತಾತನಾಗಿ ಬಡ್ತಿ ಪಡೆದಿದ್ದಹ, ಮನೆಗೆ ಮೊಮ್ಮಗು ಬಂದ ಸಂತಸ ಇಡೀ ಕುಟುಂಬದಲ್ಲಿ ಮನೆ ಮಾಡಿದೆ. ಎಲ್ಲರೂ ತಾಯಿ ಮಗುವಿಗೆ ಶುಭ ಹಾರೈಸಿದ್ದಾರೆ.

ಆಥಿಯಾ ಹಾಗೂ ಕೆ.ಎಲ್.ರಾಹುಲ್ ಹಲವು ವರ್ಷಗಳಿಂದ ಪ್ರೀತಿಯಲ್ಲಿ ಬಿದ್ದಿದ್ದರು. ಈ ಬಗ್ಗೆ ಸಾಕಷ್ಟು ಸಲ ಕೇಳಿದಾಗಲೂ ಹೌದು ಎಂಬ ಮಾತನ್ನ ಹೇಳಿರಲಿಲ್ಲ. ಹಾಗೇ ಸುನೀಲ್ ಶೆಟ್ಟಿ ಅವರಿಗೂ ಈ ಬಗ್ಗೆ ಸಾಕಷ್ಟು ಬಾರಿ ಪ್ರಶ್ನೆ ಎದುರಾಗಿತ್ತು. ಮಗಳ ಪ್ರೀತಿ ಬಗ್ಗೆ ಸುನಿಲ್ ಶೆಟ್ಟಿ ಕೂಡ ನೇರವಾಗಿ ಯಾವುದನ್ನು ಹೇಳಿರಲಿಲ್ಲ. 2023ರ ಜನವರಿ 23ರಂದು ಮದುವೆಯ ಮುದ್ರೆ ಒತ್ತುವ ಮೂಲಕ ಪ್ರೀತಿಯ ಹಕ್ಕಿಗಳು ಸಂಸಾರ ಶುರು ಮಾಡಿದ್ದರು. ಗುರು ಹಿರಿಯರ ಆಶೀರ್ವಾದದೊಂದಿಗೆ ಮದುವೆಯಾಗಿದ್ದ ಜೋಡಿ, ಇದೀಗ ಪುಟ್ಟ ಕಂದನನ್ನ ಸ್ವಾಗತಿಸಿದೆ. ಕೆ.ಎಲ್.ರಾಹುಲ್ ಡೆಲ್ಲಿ ಕ್ಯಾಪಿಟಲ್ ಪರ ಆಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಈ ಶುಭ ಸುದ್ದಿ ಮತ್ತಷ್ಟು ಸಂತಸವನ್ನ ಹೆಚ್ಚಿಸಿದೆ.


