ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 26 : ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ನಗರದ ಬಹುತೇಕ ದೇವಾಲಯಗಳಲ್ಲಿ ಬುಧವಾರ ವಿಶೇಷವಾಗಿ ಅಲಂಕರಿಸಿ ಪೂಜಿಸಲಾಯಿತು.

ಕೆಳಗೋಟೆಯಲ್ಲಿರುವ ಬೇಡರ ಕಣ್ಣಪ್ಪ ದೇವಸ್ಥಾನದಲ್ಲಿ ಶಿವನಿಗೆ ಪ್ರಿಯವಾದ ಬಿಲ್ವಪತ್ರೆ ಹಾಗೂ ಹೂವುಗಳಿಂದ ಅಲಂಕರಿಸಿ ಪೂಜಿಸಲಾಯಿತು.
ಉಚ್ಚಂಗಿ ಯಲ್ಲಮ್ಮ ದೇವಿ

ಕೋಟೆ ರಸ್ತೆ, ಆನೆ ಬಾಗಿಲು ಸಮೀಪವಿರುವ ಪಾತಾಳೇಶ್ವರ ದೇವಾಲಯದಲ್ಲಿ ಶಿವನನ್ನು ಸಿಂಗರಿಸಿ ಬೆಳಗಿನಿಂದ ರಾತ್ರಿಯಿಡಿ ಭಕ್ತಿಯಿಂದ ಪೂಜೆ ಸಲ್ಲಿಸಲಾಯಿತು.
ಸಿದ್ದಾಪುರದಲ್ಲಿ ಅಭಿಷೇಕ : ಶ್ರೀ ಸಿದ್ದೇಶ್ವರ ಶ್ರೀ ಕಲ್ಲೇಶ್ವರ ಶ್ರೀ ಮಲ್ಲೇಶ್ವರ ಹಾಗೂ ಶ್ರೀ ವೀರಭದ್ರ ಸ್ವಾಮಿ ಪೂಜಾ ಮಹಾಮಂಗಳಾರತಿ ನಡೆಯಿತು.
ಗಾರೆ ಬಾಗಿಲು ಈಶ್ವರ ದೇವಸ್ಥಾನ, ಉಚ್ಚಂಗಿಯಲ್ಲಮ್ಮ, ಹೊಳಲ್ಕೆರೆ ರಸ್ತೆಯಲ್ಲಿರುವ ನೀಲಕಂಠೇಶ್ವರ ದೇವಸ್ಥಾನದಲ್ಲಿ ವರ್ಣರಂಜಿತವಾಗಿ ಅಲಂಕರಿಸಿ ಪೂಜಿಸಲಾಯಿತು.

ನೆತ್ತಿ ಸುಡುವ ಬಿಸಿಲನ್ನು ಲೆಕ್ಕಿಸದೆ ಗಾಯತ್ರಿ ಭವನ್ ಸರ್ಕಲ್‍ನಿಂದ ಹಿಡಿದು ದೇವಸ್ಥಾನದವರೆಗೆ ಸಹಸ್ರಾರು ಭಕ್ತರು ಸರದಿ ಸಾಲಿನಲ್ಲಿ ನಿಂತು ನೀಲಕಂಠೇಶ್ವರ ಸ್ವಾಮಿಯ ದರ್ಶನ ಪಡೆದರು.
ಸಂಜೆ ಏಳು ಗಂಟೆಯ ನಂತರ ಎಲ್ಲಾ ದೇವಸ್ಥಾನಗಳಲ್ಲಿಯೂ ಭಕ್ತರು ಶ್ರದ್ಧಾ ಭಕ್ತಿಗಳಿಂದ, ಶಿವನಿಗೆ ಭಕ್ತಿ ಸಮರ್ಪಿಸಿದರು. ಕೆಲವು ದೇವಾಲಯಗಳಲ್ಲಿ ಭಜನೆ ಏರ್ಪಡಿಸಲಾಗಿದೆ. ಅಲ್ಲಲ್ಲಿ ದೇವಸ್ಥಾನಗಳಲ್ಲಿ ಭಕ್ತರಿಗೆ ಪ್ರಸಾದ ವಿನಿಯೋಗಿಸಲಾಯಿತು.
ಗಾಂಧಿ ವೃತ್ತದ ನಾಲ್ಕು ಕಡೆ ಹೂವು ಹಣ್ಣುಗಳ ವ್ಯಾಪಾರದಿಂದ ಸಂಚಾರ ದಟ್ಟಣೆಯಿಂದ ಕೂಡಿ ವಾಹನಗಳು ಹಾಗೂ ಪಾದಚಾರಿಗಳ ಓಡಾಟಕ್ಕೆ ಕಷ್ಟವಾಗಿತ್ತು,
ಸಂತೆಹೊಂಡದ ರಸ್ತೆ ಒಂದು ಬದಿಯಲ್ಲಿ ಹಣ್ಣು, ಹೂವು. ಕಬ್ಬು ಮಾರಾಟ ಹಾಗೂ ಮತ್ತೊಂದು ಬದಿಯಲ್ಲಿ ತರಕಾರಿ ಮಾರುಕಟ್ಟೆಯಿರುವುದರಿಂದ ದ್ವಿಚಕ್ರ ವಾಹನ ಸವಾರರು ಕಸರತ್ತು ಮಾಡುವಂತಾಗಿತ್ತು. ಮೊದಲೆ ಕಿಷ್ಕಿಂದೆಯಾಗಿರುವ ಈ ರಸ್ತೆಯಲ್ಲಿ ಬಸ್, ಆಟೋ, ಪಾದಚಾರಿಗಳು ಸಂಚರಿಸಬೇಕಾಗಿರುವುದರಿಂದ ಸಂಚಾರಿ ಪೊಲೀಸರು ಟ್ರಾಫಿಕ್ ಕಂಟ್ರೋಲ್ ಮಾಡುವಲ್ಲಿ ಹೈರಾಣಾಗಿದ್ದರು.


