ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಮಾರ್ಚ್.04 : ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆ ಖಂಡಿಸಿ ಮಾ. 6 ರಂದು ಬೆಳಿಗ್ಗೆ 10-30 ಕ್ಕೆ ಒನಕೆ ಓಬವ್ವ ವೃತ್ತದಲ್ಲಿ ಮಹಾ ಪಂಚಾಯಿತಿ ಸಮಾವೇಶ ನಡೆಸಲಾಗುವುದೆಂದು ಸಾಮಾಜಿಕ ಚಿಂತಕ ಜೆ.ಯಾದವರೆಡ್ಡಿ ತಿಳಿಸಿದರು.
ಪ್ರವಾಸಿ ಮಂದಿರದಲ್ಲಿ ಭಾನುವಾರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹರಿಯಾಣ, ಪಂಜಾಬ್ ರೈತರ ಜೊತೆ 120 ಸಂಘಟನೆಗಳವರು ಸೇರಿಕೊಂಡು ದೆಹಲಿಯಲ್ಲಿ ನ್ಯಾಯಯುತವಾದ ಬೇಡಿಕೆ ಈಡೇರಿಸುವಂತೆ ಚಳುವಳಿ ನಡೆಸುತ್ತಿರುವವರನ್ನು ಕೇಂದ್ರ ಸರ್ಕಾರ ಕ್ರಿಮಿನಲ್‍ಗಳ ತರ ನೋಡುತ್ತಿರುವುದು ಸರಿಯಲ್ಲ. ರೈತ ವಿರೋಧಿ ಮೂರು ಕರಾಳ ಮಸೂದೆಗಳನ್ನು ಹಿಂದಕ್ಕೆ ಪಡೆಯುವಂತೆ ಈ ಹಿಂದೆ ದೆಹಲಿಯಲ್ಲಿ ರೈತರು ಒಂದು ವರ್ಷಗಳ ಕಾಲ ಚಳುವಳಿ ನಡೆಸಿದಾಗ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡುವುದಾಗಿ ಭರವಸೆ ನೀಡಿದ್ದು, ಇನ್ನು ಈಡೇರಿಲ್ಲ. ಈಗ ರೈತರು ನಡೆಸುತ್ತಿರುವ ಹೋರಾಟಕ್ಕೆ ತಾರ್ತಿಕ ಅಂತ್ಯ ಕಾಣಿಸುವ ಬದಲು ಜಲಪಿರಂಗಿ, ಅಶ್ರಯವಾಯು, ರಬ್ಬರ್ ಗುಂಡು ಹಾರಿಸಿ ರೈತರನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ಪ್ರಜಾಪ್ರಭುತ್ವದಲ್ಲಿ ನ್ಯಾಯ ಕೇಳುವ ಹಕ್ಕು ಎಲ್ಲರಿಗೂ ಇದೆ. ನರೇಂದ್ರ ಮೋದಿ ಅಧಿಕಾರಕ್ಕೆ ಬಂದಾಗಿನಿಂದಲೂ ದೇಶದಲ್ಲಿ ಯಾರು ನೆಮ್ಮದಿಯಿಂದ ಇಲ್ಲ. ಬರಗಾಲ ಎದುರಾಗಿದೆ. ಜನ-ಜಾನುವಾರುಗಳಿಗೆ ನೀರಿನ ಕೊರತೆಯಿದೆ. ಯುವ ಪೀಳಿಗೆಗೆ ಉದ್ಯೋಗವಿಲ್ಲ. ಹತ್ತೊಂಬತ್ತು ವಿ.ವಿ.ಗಳಲ್ಲಿ ಖಾಯಂ ಉದ್ಯೋಗಿಗಳಿಲ್ಲ. ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ಪ್ರತಿಷ್ಠಿತ ನೂರು ವಿಶ್ವವಿದ್ಯಾನಿಲಯಗಳಲ್ಲಿ ನಮ್ಮ ದೇಶದಲ್ಲಿ ಒಂದು ಇಲ್ಲದಿರುವುದು ಬೇಸರದ ಸಂಗತಿ ಎಂದು ವಿಷಾಧಿಸಿದರು. ಶಿಕ್ಷಣ, ಆರೋಗ್ಯ ಹಾಳಾಗಿದೆ. ರೈಲ್ವೆ, ಬಿ.ಎಸ್.ಎನ್.ಎಲ್. ಎಲ್ಲವೂ ಖಾಸಗೀಕರಣವಾಗುತ್ತಿದೆ. ಹಸಿವಿನಲ್ಲಿ ಭಾರತ 111 ನೇ ಸ್ಥಾನದಲ್ಲಿದೆ ಎಂದರು.
ಎಲ್ಲಾ ವರ್ಗ ನರಳುತ್ತಿದೆ. ಕಾರ್ಮಿಕರು, ವಿದ್ಯಾರ್ಥಿಗಳು, ರೈತರು, ತೊಂದರೆ ಅನುಭವಿಸುತ್ತಿದ್ದಾರೆ. ಹಾಗಾಗಿ ಮಾ.6 ರಂದು ನಡೆಯುವ ಸಮಾವೇಶದಲ್ಲಿ ಸಮಾಜಮುಖಿ ಚಿಂತಕರು, ಪ್ರಗತಿಪರ ಹೋರಾಟಗಾರರು, ರೈತ ಮುಖಂಡರುಗಳು ಭಾಗವಹಿಸಲಿದ್ದಾರೆಂದರು.
ಸಿ.ಕೆ.ಗೌಸ್‍ಪೀರ್, ಟಿ.ಶಫಿವುಲ್ಲಾ, ಶಿವಕುಮಾರ್, ಧನಂಜಯ ಹಂಪಯ್ಯನಮಾಳಿಗೆ, ಪುರಷೋತ್ತಮ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.