ಸುದ್ದಿಒನ್ : ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಇಂದಿನಿಂದ ( ಜನವರಿ 13 ರಿಂದ) ಮಹಾ ಕುಂಭಮೇಳ ಆರಂಭವಾಗಲಿದೆ. ಈ ಮಹಾಕುಂಭಮೇಳ ಫೆ.26ಕ್ಕೆ ಮುಕ್ತಾಯವಾಗಲಿದ್ದು, ಒಟ್ಟು 45 ದಿನಗಳ ಕಾಲ ನಡೆಯಲಿದೆ. ಆದರೆ ಈಗ ನಡೆಯಲಿರುವ ಕುಂಭಮೇಳವನ್ನು ಮಹಾ ಕುಂಭಮೇಳ ಎಂದು ಕರೆಯುತ್ತಾರೆ. ಇದು 144 ವರ್ಷಗಳಿಗೊಮ್ಮೆ ಬರುತ್ತದೆ ಎಂದು ಹೇಳಲಾಗುತ್ತದೆ. ಸಾಮಾನ್ಯವಾಗಿ ಅರ್ಧ ಕುಂಭಮೇಳವು 6 ವರ್ಷಕ್ಕೊಮ್ಮೆ ನಡೆಯುತ್ತದೆ, ಪೂರ್ಣ ಕುಂಭಮೇಳವು 12 ವರ್ಷಕ್ಕೊಮ್ಮೆ ನಡೆಯುತ್ತದೆ, ಆದರೆ ಈ ಮಹಾ ಕುಂಭಮೇಳವು 144 ವರ್ಷಗಳಿಗೊಮ್ಮೆ ನಡೆಯುತ್ತದೆ.
ಆದರೆ ಸಾಮಾನ್ಯವಾಗಿ ಕುಂಭಮೇಳಗಳನ್ನು ನಮ್ಮ ದೇಶದಲ್ಲಿ ಕೇವಲ 4 ಸ್ಥಳಗಳಲ್ಲಿ ಆಯೋಜಿಸಲಾಗುತ್ತದೆ. ಉತ್ತರ ಪ್ರದೇಶದ ಪ್ರಯಾಗ್‌ರಾಜ್, ಉತ್ತರಾಖಂಡದ ಹರಿದ್ವಾರ, ಮಧ್ಯಪ್ರದೇಶದ ಉಜ್ಜಯಿನಿ, ಮಹಾರಾಷ್ಟ್ರದ ನಾಸಿಕ್‌ನಲ್ಲಿ ಕುಂಭಮೇಳಗಳನ್ನು ಆಯೋಜಿಸಲಾಗುತ್ತಿದೆ. ಆದರೆ 144 ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭಮೇಳ ಪ್ರಯಾಗರಾಜ್‌ನಲ್ಲಿ ಮಾತ್ರ ನಡೆಯುತ್ತದೆ.
ಸೂರ್ಯ ಮಕರ ರಾಶಿಗೆ ಪ್ರವೇಶಿಸಿದಾಗ ಮಹಾ ಕುಂಭಮೇಳ ಪ್ರಾರಂಭವಾಗುತ್ತದೆ. ಹಿಂದೂ ಧರ್ಮಗ್ರಂಥಗಳ ಪ್ರಕಾರ, ಭೂಮಿಯ ಮೇಲಿನ ಒಂದು ವರ್ಷವು ದೇವರಿಗೆ ಒಂದು ದಿನಕ್ಕೆ ಸಮಾನವಾಗಿದೆ. ಇದರ ಪ್ರಕಾರ 12 ವರ್ಷಗಳ ಕಾಲ ದೇವತೆಗಳು ಮತ್ತು ರಾಕ್ಷಸರ ನಡುವೆ ಯುದ್ಧವಿತ್ತು. ಅದಕ್ಕಾಗಿಯೇ 12 ವರ್ಷಕ್ಕೊಮ್ಮೆ ಪೂರ್ಣಕುಂಭಮೇಳ ನಡೆಯುತ್ತದೆ. ದೇವರಿಗೆ 12 ವರ್ಷಗಳು ಭೂಮಿಯ ಮೇಲಿನ 144 ವರ್ಷಗಳಿಗೆ ಸಮಾನವಾಗಿದೆ. ಅದಕ್ಕಾಗಿಯೇ ಈ 144 ವರ್ಷಗಳಿಗೊಮ್ಮೆ ಮಹಾ ಕುಂಭಮೇಳ ನಡೆಯುತ್ತದೆ. ಈಗ ಇದೇ ಮಹಾ ಕುಂಭಮೇಳ ನಡೆಯುತ್ತಿದೆ. ಮತ್ತು ಈ ಮಹಾ ಕುಂಭಮೇಳವನ್ನು ಪ್ರಯಾಗರಾಜ್‌ನಲ್ಲಿ ಮಾತ್ರ ನಡೆಸಲಾಗುತ್ತದೆ. ಪ್ರಯಾಗರಾಜ್ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮವಾಗಿರುವುದರಿಂದ ಈ ಮಹಾಕುಂಭಮೇಳವನ್ನು ಇಲ್ಲಿ ನಡೆಸಲಾಗುತ್ತದೆ.
ಪ್ರಯಾಗ್ರಾಜ್ ಅಲ್ಲದೆ, ಹರಿದ್ವಾರದ ಗಂಗಾ, ನಾಸಿಕ್‌ನ ಗೋದಾವರಿ ಮತ್ತು ಉಜ್ಜಯಿನಿಯ ಶಿಪ್ರಾದಲ್ಲಿಯೂ ಕುಂಭಮೇಳಗಳು ನಡೆಯುತ್ತವೆ. ಕುಂಭಮೇಳದ ಸಮಯದಲ್ಲಿ ಈ ನದಿಗಳಲ್ಲಿ ಪವಿತ್ರ ಸ್ನಾನ ಮಾಡಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ಹಿಂದೂಗಳ ನಂಬಿಕೆ. ಪುರಾಣಗಳ ಪ್ರಕಾರ, ದೇವತೆಗಳು ಮತ್ತು ರಾಕ್ಷಸರು ಅಮೃತಕ್ಕಾಗಿ ಕ್ಷೀರ ಸಾಗರವನ್ನು ಮಂಥನ ಮಾಡಿದರು. ಅಂದು ಹೊರಬಂದ ಅಮೃತಕ್ಕಾಗಿ 12 ದಿನಗಳ ಕಾಲ ದೇವತೆಗಳು-ರಾಕ್ಷಸರ ನಡುವೆ ಘೋರ ಯುದ್ಧ ನಡೆಯಿತು. ಆಗ ಆ ಅಮೃತ ಕೆಲವು ಹನಿಗಳು ನೆಲದ ಮೇಲೆ ಬಿದ್ದವು ಎಂದು ನಂಬಲಾಗಿದೆ. ಪ್ರಯಾಗರಾಜ್, ಉಜ್ಜಯಿನಿ, ಹರಿದ್ವಾರ ಮತ್ತು ನಾಸಿಕ್ ಗಳಲ್ಲಿ ಅಮೃತದ ಹನಿಗಕಲು ಬಿದ್ದವು. ಆದ್ದರಿಂದ ಈ ನಾಲ್ಕು ಸ್ಥಳಗಳು ಪವಿತ್ರ ತೀರ್ಥಸ್ಥಳಗಳು ಎಂಬ ನಂಬಿಕೆಯಿಂದ ಈ ಸ್ಥಳಗಳಲ್ಲಿ ಕುಂಭಮೇಳ ನಡೆಸಲಾಗುತ್ತದೆ ಎಂದು ನಂಬಲಾಗಿದೆ.
ಪವಿತ್ರ ಸ್ನಾನದ ದಿನಾಂಕಗಳು
ಮಹಾ ಕುಂಭಮೇಳದ ಸಮಯದಲ್ಲಿ ಭಕ್ತರು ಮಾಡುವ ಪವಿತ್ರ ಸ್ನಾನವು ಅತ್ಯಂತ ಮಹತ್ವದ್ದಾಗಿದೆ. 2025 ರ ಮಹಾ ಕುಂಭಮೇಳವು ಪವಿತ್ರ ಸ್ನಾನವನ್ನು ಮಾಡಲು ಕೆಲವು ಪ್ರಮುಖ ದಿನಾಂಕಗಳನ್ನು ಘೋಷಿಸಿದೆ. ಮೊದಲ ಪವಿತ್ರ ಸ್ನಾನವನ್ನು ಜನವರಿ 13 ರಂದು ಪುಷ್ಯ ಹುಣ್ಣಿಮೆಯಂದು ಮಾಡಲಾಗುತ್ತದೆ. ಜನವರಿ 14 ರಂದು ಮಕರ ಸಂಕ್ರಾಂತಿ, ಎರಡನೇ ಪವಿತ್ರ ಸ್ನಾನವನ್ನು ಮಾಡಲಾಗುತ್ತದೆ. ಮತ್ತು ಮೂರನೇ ಪವಿತ್ರ ಸ್ನಾನವನ್ನು ಜನವರಿ 29 ರ ಅಮವಾಸ್ಯೆಯ ದಿನದಂದು ನಡೆಸಲಾಗುತ್ತದೆ. ನಾಲ್ಕನೇ ಪವಿತ್ರ ಸ್ನಾನ ಫೆಬ್ರವರಿ 3 ರಂದು ವಸಂತ ಪಂಚಮಿಯಂದು ನಡೆಯುತ್ತದೆ. ಫೆಬ್ರವರಿ 12 ರಂದು ಮಾಘ ಪೂರ್ಣಿಮೆಯ ದಿನದಂದು ಐದನೇ ಪವಿತ್ರ ಸ್ನಾನ ನಡೆಸಲಾಗುತ್ತದೆ. ಕೊನೆಯ ಮತ್ತು ಆರನೇಯ ಪವಿತ್ರ ಸ್ನಾನ ಮಹಾ ಕುಂಭಮೇಳದ ಕೊನೆಯ ದಿನವು ಫೆಬ್ರವರಿ 26 ರಂದು ಮಹಾ ಶಿವರಾತ್ರಿಯಲ್ಲಿ ಕೊನೆಗೊಳ್ಳುತ್ತದೆ. ಮಹಾ ಕುಂಭಮೇಳದ ಸಮಯದಲ್ಲಿ ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದರಿಂದ ಎಲ್ಲಾ ಪಾಪಗಳು ತೊಳೆದು ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ಹಿಂದೂಗಳು ಬಲವಾಗಿ ನಂಬುತ್ತಾರೆ.