ತುಮಕೂರು: ಜಿಲ್ಲಾ ಉಸ್ತುವಾರಿ ಹಂಚಿಕೆ ಬಗ್ಗೆ ಸಚಿವರು ಅಸಮಾಧಾನ ಹೊರಹಾಕಿದ್ದಾರೆ, ಅವರ ಬೆಂಬಲಿಗರು ಅಸಮಾಧಾನಗೊಂಡಿದ್ದಾರೆ. ಯಾರು ಯಾರಿಗೂ ಈ ಸಂಬಂಧ ಸಮಾಧಾನವೇ ಇದ್ದಂತೆ ಕಾಣುತ್ತಿಲ್ಲ. ಇದೀಗ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಅವರ ಕೈ ತಪ್ಪಿದ್ದಕ್ಕೆ ಶಾಸಕ ಮಸಾಲೆ ಜಯರಾಮ್ ಅಸಮಾಧಾನ ಹೊರಹಾಕಿದ್ದಾರೆ.
ನಗರದಲ್ಲಿ ಮಾತನಾಡಿದ ಬಿಜೆಪಿ ಶಾಸಕ ಮಸಾಲೆ ಜಯರಾಮ್, ಬಿಜೆಪಿ ಸರ್ಕಾರ ಇವತ್ತು ಅಧಿಕಾರಕ್ಕೆ ಬರೋದಕ್ಕೆ ಮಾಧುಸ್ವಾಮಿ ಕೊಡುಗೆ ಅಪಾರವಾಗಿದೆ. ಸದನದಲ್ಲಿ ವಿಪಕ್ಷನಾಯಕರಿಗೆ ಚಾಟಿ ಬೀಸಿ ಉತ್ತರ ಕೊಡೋ ಏಕೈಕ ವ್ಯಕ್ತಿ ಅಂದ್ರೆ ಅದು ಮಾಧುಸ್ವಾಮಿ. ಸರ್ಕಾರವನ್ನ ಸಮರ್ಥನೆ ಮಾಡಿಕೊಳ್ಳಲು ಮಾತ್ರ ಮಾಧುಸ್ವಾಮಿ ಬೇಕು. ಆದ್ರೆ ಜಿಲ್ಲಾ ಉಸ್ತುವಾರಿಗೆ ಮಾತ್ರ ಬೇಡವಾ ? ಎಂದು ಪ್ರಶ್ನಿಸಿದ್ದಾರೆ.
ಸರ್ಕಾರ ಅವರಿಗೆ ಬೇರೆ ಉಸ್ತುವಾರಿ ಕೊಡೋದಕ್ಕೆ ಪ್ರಯತ್ನಿಸಿದೆ. ಆದ್ರೆ ಈ ಮಧ್ಯೆ ನಾನು ನಮ್ಮ ಸರ್ಕಾರ, ಸಿಎಂಗೆ ಮನವಿ ಮತ್ತು ಆಗ್ರಹ ಮಾಡ್ತೇನೆ. ತುಮಕೂರು ಜಿಲ್ಲಾ ಉಸ್ತುವಾರಿ ಮುಂದುವರೆಸಲು ಪತ್ರ ಬರೆಯುತ್ತೇನೆ. ಮಾಧುಸ್ವಾಮಿ ಅವರು ಜಿಲ್ಲೆಯ ಅಭಿವೃದ್ಧಿ ಹಾಗೂ ನೀರಾವರಿ ಕಾಳಜಿ ಇರೋ ವ್ಯಕ್ತಿಯಾಗಿದ್ದಾರೆ ಹೀಗಾಗಿ ತುಮಕೂರು ಉಸ್ತುವಾರಿ ಸಚಿವರನ್ನಾಗಿಯೇ ಮಾಡಬೇಕೆಂದು ಆಗ್ರಹಿಸಿದ್ದಾರೆ.