ಮಾದಾರ ಚನ್ನಯ್ಯ ಸ್ವಾಮೀಜಿಗಳು ದೀಕ್ಷೆ ತೊಟ್ಟು 20 ವರ್ಷ,ಜೂ.20 ರಂದು ಮುರುಘಾ ಶರಣರಿಗೆ ಗೌರವ ಸಲ್ಲಿಕೆ

suddionenews
2 Min Read

ಚಿತ್ರದುರ್ಗ : ಪೀಠಾಧ್ಯಕ್ಷರಾಗಿ ದೀಕ್ಷೆ ಸ್ವೀಕರಿಸಿ 20 ವರ್ಷಗಳಾದ ಹಿನ್ನೆಲೆಯಲ್ಲಿ ಜೂ.20 ರಂದು ಸಾಂಕೇತಿಕವಾಗಿ ಮುರುಘಾ ಶರಣರಿಗೆ ಗೌರವ ಸಮರ್ಪಣೆ ಮಾಡಲಾಗುತ್ತದೆ. ಮುಂದೆ ಧಾರವಾಡ ಅಥವಾ ಚಿತ್ರದುರ್ಗದಲ್ಲಿ ದೊಡ್ಡ ಮಟ್ಟದ ಕಾರ್ಯಕ್ರಮ ಆಯೋಜಿಸಲಾಗುತ್ತದೆ ಎಂದು ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು.

ನಗರದ ಹೊರವಲಯದ ಮಾದಾರ ಚನ್ನಯ್ಯ ಗುರುಪೀಠದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಇದೇ ಜೂ. 20ರಂದು ಶಿವಶರಣ ಡಾ.ಶಿವಮೂರ್ತಿ ಮುರುಘಾ ಶರಣರಿಗೆ ವಿಶೇಷ ಗೌರವ ಸಲ್ಲಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಇಲಾಖೆ ಕೇಂದ್ರ ಸಚಿವ ನಾರಾಯಣಸ್ವಾಮಿ ಅವರು, ಮಧ್ಯಾಹ್ನ 12 ಗಂಟೆಗೆ ಈ ಕಾರ್ಯಕ್ರಮ ನಡೆಯಲಿದೆ ಎಂದಿದ್ದಾರೆ.

ಕಳೆದ 20 ವರ್ಷಗಳ ಹಿಂದೆ ಡಾ.ಶಿವಮೂರ್ತಿ ಮುರುಘಾ ಶರಣದಿಂದ ಸಂಸ್ಕಾರ ಪಡೆದ ಮಾದಾರ ಸ್ವಾಮೀಜಿಗಳು ಸಾಮಾಜಿಕವಾಗಿ ಶೋಷಿತರಾಗಿರುವ ಮಾದಿಗ ಸಮುದಾಯಕ್ಕಾಗಿ ಕೆಲಸ ಮಾಡಿದ್ದಾರೆ. ಇದರ ಅಂಗವಾಗಿ ಕಾರ್ಯಕ್ರಮ ನಡೆಸುತ್ತಿದ್ದಾರೆ.

ನಗರದ ಮಾದಾರ ಚನ್ನಯ್ಯ ಗುರುಪೀಠಾಧ್ಯಕ್ಷರಾದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿಗಳು ದೀಕ್ಷೆ ತೊಟ್ಟು 20 ವರ್ಷ ಪೂರ್ಣವಾಗಲಿದೆ. ಅಲ್ಲಿಂದ ಇಲ್ಲಿಯ ತನಕ ಪರಿಪೂರ್ಣರಾಗಿರುವ ಮಾದಾರ ಸ್ವಾಮೀಜಿಗಳು ಶೋಷಿತ ತಳ ಸಮುದಾಯವಾದ ಮಾದಿಗ ಸಮಾಜಕ್ಕೆ ಜನ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಸಾಕಷ್ಟು ಕ್ರಾಂತಿ ಮಾಡಿದ್ದಾರೆ. ಮಾದಿಗ ಸಮಾಜ ಸೇರಿದಂತೆ ಇತರೆ ಮಾದಿಗ ಒಳ ಜಾತಿಗಳ ಒಗ್ಗೂಡಿಸಲು ಸ್ವಾಮೀಜಿಗಳು ಅವಿರತವಾಗಿ ಶ್ರಮಿಸಿದ್ದಾರೆ. ನಾಡಿನ ಉದ್ದಗಲಕ್ಕೂ ಸಂಚರಿಸಿ ಸಮಾಜ ಕಟ್ಟುವ ಕಾರ್ಯವನ್ನು ಮಾಡಿದ್ದಾರೆಂದು ಸಚಿವರು ತಿಳಿಸಿದರು.

ಕಳೆದ 20 ವರ್ಷಗಳಿಂದ ಮಾದಿಗ ಸಮಾಜಕ್ಕೆ ಉತ್ತಮವಾದ ನೆಲೆ ಒದಗಿಸುವ ನಿಟ್ಟಿನಲ್ಲಿ ಮತ್ತು ಸಮಗ್ರ ಬೆಳವಣಿಗೆ ದೃಷ್ಠಿಯಿಂದ ಸ್ವಾಮೀಜಿಗಳು ಮೇಲ್ಜಾತಿಗಳೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದಾರೆ. ವಿಶೇಷವಾಗಿ ಪೇಜಾವರ ಶ್ರೀಗಳು, ಆದಿಚುಂಚನಗಿರಿ ಸ್ವಾಮೀಜಿಗಳೊಂದಿಗೆ ಉತ್ತಮ ಒಡನಾಟ ಹೊಂದಿರುವ ಮಾದಾರ ಸ್ವಾಮೀಜಿಗಳು ಇಡೀ ರಾಜ್ಯ ಸುತ್ತಿ ಸಮಾಜ ಸಂಘಟಿಸುವ ಕಾರ್ಯ ಮಾಡಿರುವುದು ಅತ್ಯಂತ ಶ್ಲಾಘನೀಯವಾದ ಕಾರ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.

ರಾಜ್ಯ ಬಿಜೆಪಿ ಸರ್ಕಾರ ಕೂಡ ಹಿಂದುಳಿದ ದಲಿತ ಮಾದಿಗ ಸಮಾಜದ ಮಠಕ್ಕೆ ಹೆಚ್ಚಿನ ಸಹಕಾರ ನೀಡಿದೆ. ಯಡಿಯೂರಪ್ಪನವರು ಸಿಎಂ ಆಗಿದ್ದಾಗ ಬೆಂಗಳೂರಿನಲ್ಲಿ ಅರ್ಧ ಎಕರೆ ಜಾಗ ನೀಡಿ 5 ಕೋಟಿ ರೂ.ಆರ್ಥಿಕ ಸಹಾಯ ಮಾಡಿದರು. ಗೋವಿಂದ ಕಾರಜೋಳ, ಬಸವರಾಜ ಬೊಮ್ಮಾಯಿ, ಈಶ್ವರಪ್ಪನವರು ಶ್ರೀಮಠಕ್ಕೆ ಸಾಕಷ್ಟು ಸಹಾಯ ಮಾಡಿದ್ದಾರೆ. ಕಾರವಾರದಲ್ಲಿ 4 ಎಕರೆ ಜಮೀನು, ಧಾರವಾಡ ಸಮೀಪ 81.23 ಎಕರೆ ಜಮೀನು ನೀಡಿ ಶೈಕ್ಷಣಿಕವಾಗಿ ದೊಡ್ಡ ಕ್ರಾಂತಿ ಮಾಡುವಂತೆ ಸೂಚಿಸಿದ್ದಾರೆ ಎಂದರು.

ಶ್ರೀಮಾದಾರ ಚನ್ನಯ್ಯ ಗುರುಪೀಠಕ್ಕೆ ವಿಶೇಷವಾಗಿ ಮಾಜಿ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ, ಮಾಜಿ ಕೇಂದ್ರ ಸಚಿವ ಮುನಿಯಪ್ಪ ಸೇರಿದಂತೆ ಮಾದಿಗ ಸಮಾಜ ಇತರೆ ಜನಪ್ರತಿನಿಧಿಗಳು ಮತ್ತು ಬೇರೆ ಜಾತಿ, ಜನಾಂಗಗಳ ಜನಪ್ರತಿನಿಧಿಗಳು ಶ್ರೀಮಠದ ಸಂಪರ್ಕ ಇಟ್ಟುಕೊಂಡಿದ್ದಾರೆ, ಮಾದಾರ ಗುರುಪೀಠಕ್ಕೆ ನೀಡಿರುವ ಜಮೀನಿನ ಅಭಿವೃದ್ಧಿ ಆದರೆ ದಕ್ಷಿಣ ಭಾರತಕ್ಕೆ ಅದು ಹೆಬ್ಬಾಗಿಲಾಗಲಿದೆ. ಈ ಮೂಲಕ ಮಾದಿಗ ಜನಾಂಗದ ಶೈಕ್ಷಣಿಕ ಕ್ರಾಂತಿಗೆ ರಹದಾರಿ ಆಗಲಿದೆ ಎಂದು ಸಚಿವ ನಾರಾಯಣಸ್ವಾಮಿ ವಿಶ್ವಾಸ ವ್ಯಕ್ತ ಪಡಿಸಿದರು.

ಹಾವೇರಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಟಹಾಲೇನಹಳ್ಳಿ ಪರಮೇಶ್ವರಪ್ಪ ಸೇರಿದಂತೆ ಮತ್ತಿತರ ಭಕ್ತರು ಹಾಜರಿದ್ದರು.

Share This Article
Leave a Comment

Leave a Reply

Your email address will not be published. Required fields are marked *