ಚಿತ್ರದುರ್ಗ, (ಮೇ.19): ಎಸೆಸೆಲ್ಸಿ ಪರೀಕ್ಷೆಯಲ್ಲಿ 625 ಕ್ಕೆ 625 ಅಂಕ ಗಳಿಸಿರುವ ವಿಜಯಪುರ ತಾಲ್ಲೂಕಿನ ಜುಮನಾಳ ಸರ್ಕಾರಿ ಪ್ರೌಢಶಾಲೆಯ ಅಮಿತ್ ಮಾದಾರ ಅವರನ್ನು ಶ್ರೀಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅಭಿನಂದಿಸಿದ್ದಾರೆ.
ದೂರವಾಣಿಯ ಮೂಲಕ ವಿದ್ಯಾರ್ಥಿಯನ್ನು ಸಂಪರ್ಕಿಸಿ ಶುಭಾಶಯ ಕೋರಿದ ಶ್ರೀಗಳು ಮುಂದಿನ ವಿದ್ಯಾಭ್ಯಾಸಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಅನುಕೂಲಗಳನ್ನು ಶ್ರೀಮಠದಿಂದ ಕಲ್ಪಿಸುವುದಾಗಿ ತಿಳಿಸಿದ್ದಾರೆ.
ವಿಜಯಪುರ ತಾಲ್ಲೂಕಿನ ಜುಮನಾಳ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿ ಅಮಿತ್ ಮಾದರ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625 ಅಂಕ ಗಳಿಸುವ ಮೂಲಕ ರಾಜ್ಯದ ಟಾಪರ್ ಗಳ ಸಾಲಿನಲ್ಲಿ ಸ್ಥಾನ ಪಡೆದಿದ್ದಾರೆ.
ಅಮಿತ್ ಅವರ ತಂದೆ ಆನಂದ ನಿಧನರಾಗಿದ್ದು, ತಾಯಿ ಮಾದೇವಿ ಕೂಲಿ ಕೆಲಸ ಮಾಡುತ್ತಾ ಕಡು ಬಡತನದಲ್ಲೇ ಮಗನನ್ನು ಕಷ್ಟಪಟ್ಟು ಓದಿಸುತ್ತಿದ್ದಾರೆ. ಅಮಿತ್ ಯೋಗ, ವಾಲಿಬಾಲ್, ಕ್ರಿಕೆಟ್ ಕ್ರಿಡೆಯಲ್ಲಿ ಮುಂಚೂಣಿಯಲ್ಲಿದ್ದು, ಭವಿಷ್ಯದ ವಿದ್ಯಾಭ್ಯಾಸಕ್ಕೆ ದಾನಿಗಳ ನೆರವು ಅಗತ್ಯವಿದೆ ಎಂದು ತಾಯಿ ಮಾದೇವಿ ತಿಳಿಸಿದ್ದಾರೆ.
ಮಾದೇವಿ ಅವರಿಗೆ ಮೂವರು ಗಂಡು ಮಕ್ಕಳು. ಮೊದಲನೇ ಪುತ್ರ ಅಮೋಘ ಸಿದ್ದ ಬಿ.ಇಡಿ, ಎರಡನೇ ಪುತ್ರ ಅಭಿಲಾಷ್ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಮೂವರು ಮಕ್ಕಳನ್ನು ಮಾದೇವಿ ಕೂಲಿ ಮಾಡಿ ವಿದ್ಯಾಭ್ಯಾಸ ಮಾಡಿಸುತ್ತಿದ್ದಾರೆ.