ಬೆಂಗಳೂರು: ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಸೇರಿರುವ ಶಾಸಕ ಮಾಡಾಳು ವಿರೂಪಾಕ್ಷಪ್ಪರನ್ನು ಹತ್ತು ದಿನ ನ್ಯಾಯಂಗ ಬಂಧನಕ್ಕೆ ನೀಡಲಾಗಿದೆ. ನಗರದ ಜನಪ್ರತಿನಿಧಿಗಳ ನ್ಯಾಯಾಲಯ ಈ ಆದೇಶ ಹೊರಡಿಸಿದೆ.
ನ್ಯಾಯಮೂರ್ತಿಗಳಾದ ಜಯಂತ್ ಕುಮಾರ್ ನೇತೃತ್ವದ ಪೀಠವೂ ಈ ಆದೇಶ ಹೊರಡಿಸಿದೆ. ಏಪ್ರಿಲ್ 11ರ ತನಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮಾಡಾಳು ವಿರೂಪಾಕ್ಷಪ್ಪ ಅವರ ಪುತ್ರ ಪ್ರಶಾಂತ್ ಲಂಚ ಸ್ವೀಕರಿಸುವಾಗಲೇ ಲೋಕಾಯುಕ್ತ ಪೊಲೀಸರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ಆ ಪ್ರಕರಣದ ಎ1 ಆರೋಪಿಯಾಗಿದ್ದರು ಮಾಡಾಳು ವಿರೂಪಾಕ್ಷಪ್ಪ.
ಪೊಲೀಸರಿಗೆ ಸಿಗದೆ, ಕೋರ್ಟ್ ಜಾಮೀನು ಮಂಜೂರು ಮಾಡಿದ ಮೇಲೆ ರಾಜಾರೋಷವಾಗಿ, ಮೆರವಣಿಗೆ ಮೂಲಕ ಕಾಣಿಸಿಕೊಂಡಿದ್ದರು. ಬಳಿಕ ಜಾಮೀನು ರದ್ದಾಗಿತ್ತು. ಈ ಹಿನ್ನೆಲೆ ಮಾರ್ಚ್ 28 ರಂದು ಮಾಡಾಳು ವಿರೂಪಾಕ್ಷಪ್ಪ ಅವರನ್ನು ಅರೆಸ್ಟ್ ಮಾಡಲಾಗಿತ್ತು. ಇಂದಿಗೆ ಅವರ ನ್ಯಾಯಾಂಗ ಬಂಧನದ ಅವಧಿ ಮುಕ್ತಾಯವಾಗಿತ್ತು. ಇಂದು ಪೊಲೀಸರು ಕೋರ್ಟ್ ಗೆ ಹಾಜರು ಪಡಿಸಿದ್ದರು. ನ್ಯಾಯಾಧೀಶರು ಇಂದು ವಿಚಾರಣೆ ನಡೆಸಿ, ಹತ್ತು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.