ಎಂ.ಚಂದ್ರಪ್ಪ ನವರು ಹೊಳಲ್ಕೆರೆ ಕ್ಷೇತ್ರವನ್ನು ಸಾಕಷ್ಟು ಅಭಿವೃದ್ದಿಪಡಿಸಿದ್ದಾರೆ : ಸಚಿವ ಡಿ.ಸುಧಾಕರ್

suddionenews
2 Min Read

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಹೊಳಲ್ಕೆರೆ, ಜುಲೈ.01 : ಸರ್ಕಾರದ ಸೌಲಭ್ಯಗಳನ್ನು ಜನಾಮಾನ್ಯರಿಗೆ ತಲುಪಿಸುವ ಸದುದ್ದೇಶದಿಂದ ರಾಜ್ಯ ಸರ್ಕಾರ ಜನಸ್ಪಂದನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.

ಜಿಲ್ಲಾಡಳಿತದ ವತಿಯಿಂದ ಚಿತ್ರಹಳ್ಳಿ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಜನಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜನಸ್ಪಂದನದ ಮೂಲಕ ಚಿತ್ರಹಳ್ಳಿ ಭಾಗದ ಜನರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಲಿದೆ. ಮುರಾರ್ಜಿ ದೇಸಾಯಿ ವಸತಿ ಶಾಲೆಯ ಹೆಣ್ಣು ಮಕ್ಕಳು ಹಾಗೂ ಸ್ವಸಹಾಯ ಸಂಘದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಜನಸ್ಪಂದನದಲ್ಲಿ ಪಾಲ್ಗೊಂಡಿರುವುದು ಅತ್ಯಂತ ಸಂತೋಷದ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಜನಸಾಮಾನ್ಯರ ಸಮಸ್ಯೆಗಳಿಗೆ ಹೆಚ್ಚಿನ ಒತ್ತು ಕೊಡುತ್ತಿದೆ. ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿ ಮಟ್ಟಕ್ಕೂ ಜನಸ್ಪಂದನ ಕಾರ್ಯಕ್ರಮವನ್ನು ಕೊಂಡೊಯ್ಯಲಾಗುವುದು. ಅದಕ್ಕಾಗಿ ಅಗತ್ಯ ಕಾರ್ಯಕ್ರಮಗಳನ್ನು ರೂಪಿಸುವುದಾಗಿ ಹೇಳಿದ ಸಚಿವ ಡಿ.ಸುಧಾಕರ್ ಐದು ಬಾರಿ ಶಾಸಕರಾಗಿರುವ ಡಾ.ಎಂ.ಚಂದ್ರಪ್ಪ ಹೊಳಲ್ಕೆರೆ ಕ್ಷೇತ್ರವನ್ನು ಸಾಕಷ್ಟು ಅಭಿವೃದ್ದಿಪಡಿಸಿದ್ದಾರೆಂದು ಶ್ಲಾಘಿಸಿದರು.

ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಮಾತನಾಡಿ ಕ್ಷೇತ್ರಾದ್ಯಂತ ಯಾವುದೇ ಹಳ್ಳಿಗಳಿಗೆ ಹೋಗಲಿ ಯಾರಿಂದಲೂ ನಾನು ಹೇಳಿಸಿಕೊಳ್ಳದೆ ಎಲ್ಲೆಲ್ಲಿ ಏನೇನು ಸಮಸ್ಯೆಯಿದೆ ಎನ್ನುವುದನ್ನು ತಿಳಿದುಕೊಂಡು ಅಭಿವೃದ್ದಿಪಡಿಸಿದ್ದೇನೆ. ಸರ್ಕಾರ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಬೇಕೆನ್ನುವ ಉದ್ದೇಶವಿಟ್ಟುಕೊಂಡು ಜನಸ್ಪಂದನ ಕಾರ್ಯಕ್ರಮವನ್ನು ಮೊದಲಿನಿಂದಲೂ ಮಾಡಿಕೊಂಡು ಬರುತ್ತಿದೆ. ಮೊದಲನೆ ಬಾರಿಗೆ ನಾನು ಶಾಸಕನಾದಾಗ ಭರಮಸಾಗರದಲ್ಲಿ ಓಡಾಡಲು ಗುಣಮಟ್ಟದ ರಸ್ತೆಗಳಿರಲಿಲ್ಲ. ಐದು ವರ್ಷಗಳಲ್ಲಿ ಎಲ್ಲಾ ಹಳ್ಳಿಗಳಲ್ಲಿ ಉತ್ತಮ ರಸ್ತೆಗಳನ್ನು ನಿರ್ಮಾಣ ಮಾಡಿದ್ದರ ಫಲವಾಗಿ ರಸ್ತೆ ರಾಜ ಎಂಬ ಬಿರುದು ನೀಡಿ ಎರಡನೆ ಬಾರಿಗೂ ಗೆಲ್ಲಿಸಿದರೆಂದು ಸ್ಮರಿಸಿದರು.

ಹೊಳಲ್ಕೆರೆ ತಾಲ್ಲೂಕಿನಲ್ಲಿರುವಷ್ಟು ವಸತಿ ಶಾಲೆ, ಹಾಸ್ಟೆಲ್‍ಗಳಲ್ಲೂ ರಾಜ್ಯದಲ್ಲಿ ಎಲ್ಲಿಯೂ ಇಲ್ಲ. ಸರ್ಕಾರಿ ಶಾಲೆಗೆ ಬರುವ ಮಕ್ಕಳಿಗೆ ತೊಂದರೆಯಾಗಬಾರದೆಂದು ಸ್ವಂತ ಖರ್ಚಿನಿಂದ ಬಸ್‍ಗಳ ಅನುಕೂಲ ಒದಗಿಸಿದ್ದೇನೆ. ಡ್ರೈವರ್‍ಗೆ ಸಂಬಳ ನೀಡಿ ಡೀಸೆಲ್ ಹಾಕಿಸಲಾಗುತ್ತಿದೆ. ಮಕ್ಕಳು ಶಿಕ್ಷಣವಂತರಾಗಲೆಂದು ಸರ್ಕಾರ ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಮಧ್ಯಾಹ್ನದ ಬಿಸಿಯೂಟ ಎಲ್ಲವನ್ನು ಕೊಡುತ್ತಿದೆ. ಆರ್ಥಿಕವಾಗಿ ಬಲಶಾಲಿಗಳಾಗಬೇಕಾದರೆ ಪೋಷಕರು ತಮ್ಮ ಮಕ್ಕಳಿಗೆ ಕಡ್ಢಾಯವಾಗಿ ಶಿಕ್ಷಣ ಕೊಡಿಸಬೇಕೆಂದು ಹೇಳಿದರು.

ಜಿಲ್ಲಾಧಿಕಾರಿ ವೆಂಕಟೇಶ್, ಹೊಳಲ್ಕೆರೆ ತಹಶೀಲ್ದಾರ್ ಬೀಬಿ ಫಾತಿಮ, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು ವೇದಿಕೆಯಲ್ಲಿದ್ದರು.
ಅರ್ಹ ಫಲಾನುಭವಿಗಳಿಗೆ ಸರ್ಕಾರದ ವಿವಿಧ ಸವಲತ್ತುಗಳನ್ನು ಜನಸ್ಪಂದನದಲ್ಲಿ ವಿತರಿಸಲಾಯಿತು.

Share This Article
Leave a Comment

Leave a Reply

Your email address will not be published. Required fields are marked *