ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್.27 : ನಾಳೆ ವರ್ಷದ ಕೊನೆಯ ಚಂದ್ರಗ್ರಹಣ ಭಾರತದ ಕೆಲವು ಭಾಗಗಳಲ್ಲಿ ಮಾತ್ರ ಗೋಚರಿಸುತ್ತದೆ. ಈ ಗ್ರಹಣ ನಡೆಯುವುದರಿಂದ ಯಾವುದೇ ಭಯ, ಆತಂಕ ಬೇಡ. ಕುತೂಹಲದಿಂದ ಖಗೋಳ ವಿಸ್ಮಯವನ್ನು ನೋಡಿ ಆನಂದಿಸಿ” ಎಂದು ಖ್ಯಾತ ಹವ್ಯಾಸಿ ಖಗೋಳ ವೀಕ್ಷಕ ಎಚ್.ಎಸ್.ಟಿ.ಸ್ವಾಮಿ ತಿಳಿಸಿದ್ದಾರೆ.
ಈ ಗ್ರಹಣವು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಅಂದರೆ ಯುರೋಪ್, ಆಫ್ರಿಕಾ, ಆಸ್ಟ್ರೇಲಿಯಾ, ಏಷ್ಯಾ, ಮತ್ತು ಹಿಂದೂ ಮಹಾಸಾಗರದ ಪ್ರದೇಶಗಳಲ್ಲಿ ಗೋಚರಿಸಲಿದೆ. ಭೂಮಿಯು ಚಂದ್ರ ಮತ್ತು ಸೂರ್ಯನ ಮಧ್ಯೆ ಬಂದು, ಕೇವಲ ಶೇ 6 ರಷ್ಟು ಪ್ರಮಾಣ ಭೂಮಿಯ ನೆರಳು ಚಂದ್ರನ ಮೇಲೆ ಉಂಟಾಗುವುದರಿಂದ ಗ್ರಹಣ ಉಂಟಾಗುವುದೇ ವಿನಃ ಬೇರೇನೂ ಅಲ್ಲ.
ಭಾರತೀಯ ಕಾಲಮಾನ ರಾತ್ರಿ 1.05 ಕ್ಕೆ ಪ್ರಾರಂಭವಾಗಿ 2.25 ಕ್ಕೆ ಕೊನೆಗೊಳ್ಳುತ್ತದೆ. ನೀರು, ಆಹಾರ ಸೇವನೆ ಮಾಡದೇ ಇರುವುದು ಒಳ್ಳೆಯದಲ್ಲ. ಯಾವುದೇ ರೀತಿಯ ಪರಿಣಾಮ ಬೀರುವ ಸಾಧ್ಯತೆ ಇಲ್ಲ. ಮೂಢನಂಬಿಕೆಗಳಿಗೆ ಕಿವಿಗೊಡಬೇಡಿ ಎಂದು ಎಚ್.ಎಸ್.ಟಿ.ಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.