ಲಕ್ನೋದ ಹೋಟೆಲ್‌ನಲ್ಲಿ ಸಂಭವಿಸಿದ ಬೆಂಕಿಯಲ್ಲಿ ನಿವಾಸಿಗಳು ಸಿಲುಕಿಕೊಂಡಿದ್ದಾರೆ. ಹೋಟೆಲ್ ಲಕ್ನೋದ ಹಜರತ್‌ಗಂಜ್ ಪ್ರದೇಶದಲ್ಲಿದೆ. ಸ್ಥಳೀಯ ಮೂಲಗಳ ಪ್ರಕಾರ, ಸೋಮವಾರ ಬೆಳಗ್ಗೆ ಗೋಮತಿ ನದಿಯ ಬಳಿಯ ಐಷಾರಾಮಿ ಹೋಟೆಲ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದೆ. ಬೆಂಕಿ ನಂದಿಸುವ ಕೆಲಸ ನಡೆಯುತ್ತಿದ್ದು, ಈಗಾಗಲೇ ಘಟನೆಯಲ್ಲಿ ಇಬ್ಬರು ಬಲಿಯಾಗಿದ್ದಾರೆ. 18 ಜನರನ್ನು ಸ್ಥಳಾಂತರ ಮಾಡಲಾಗಿದೆ. ಹೋಟೆಲ್‌ನಲ್ಲಿಯೇ ಇನ್ನು 15 ಮಂದಿ ಸಿಲುಕಿದ್ದಾರೆ.
ಡಾ.ಶ್ಯಾಮ ಪ್ರಸಾದ್ ಮುಖರ್ಜಿ (ಸಿವಿಲ್) ಆಸ್ಪತ್ರೆಗೆ ಇಲ್ಲಿಯವರೆಗೆ 9 ಜನರನ್ನು ದಾಖಲಿಸಲಾಗಿದೆ. ಸಿವಿಲ್ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ.ಆರ್.ಪಿ.ಸಿಂಗ್ ಮಾತನಾಡಿ, “ಇಲ್ಲಿಯವರೆಗೆ 7 ಜನರನ್ನು ದಾಖಲಿಸಲಾಗಿದೆ. ಇಬ್ಬರು ಸಾವನ್ನಪ್ಪಿದ್ದಾರೆ.” ಎಂದಿದ್ದಾರೆ.
ಇನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗಾಯಾಳುಗಳು ದಾಖಲಾಗಿರುವ ಆಸ್ಪತ್ರೆಗೆ ತಲುಪಿದ್ದಾರೆ. ಲಕ್ನೋದ ಲೆವಾನಾ ಹೋಟೆಲ್‌ನಲ್ಲಿ ಸಂಭವಿಸಿದ ಬೆಂಕಿಯ ಬಗ್ಗೆ ಅವರು ಮಾಹಿತಿ ಪಡೆದಿದ್ದಾರೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಜಿಲ್ಲಾಡಳಿತದ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚಿಸಿದ್ದಾರೆ. ಇದರೊಂದಿಗೆ ಜಿಲ್ಲಾಧಿಕಾರಿಗಳು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಆಗಮಿಸಿ ಪರಿಹಾರ ಮತ್ತು ರಕ್ಷಣಾ ಕಾರ್ಯವನ್ನು ಚುರುಕುಗೊಳಿಸುವಂತೆ ಸೂಚನೆ ನೀಡಿದರು. ಮೂರು ಅಂತಸ್ತಿನ ಕಟ್ಟಡದಲ್ಲಿ ಇನ್ನೂ ಐದಾರು ಮಂದಿ ಸಿಲುಕಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಲಕ್ನೋ ಹೋಟೆಲ್ ನಗರದ ಹೃದಯಭಾಗದಲ್ಲಿದೆ. ಸಿಕಂದರ್ ಬಾಗ್, ಚತ್ತರ್ ಮಂಜಿಲ್ ಅರಮನೆ ಮತ್ತು ನವಾಬ್ ವಾಜಿದ್ ಅಲಿ ಶಾ ಝೂಲಾಜಿಕಲ್ ಗಾರ್ಡನ್ ಇಲ್ಲಿಂದ ಬಹಳ ಹತ್ತಿರದಲ್ಲಿದೆ.