ಹೊಸದಿಲ್ಲಿ: ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) 2023ರ ಹೊಸ ವರ್ಷದ ಮೊದಲ ದಿನವೇ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ಹೆಚ್ಚಿಸುವ ಮೂಲಕ ಗ್ರಾಹಕರಿಗೆ ದೊಡ್ಡ ಶಾಕ್ ನೀಡಿವೆ.
ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು 25 ರೂ.ವರೆಗೆ ಹೆಚ್ಚಿಸಿದ್ದಾರೆ. ಆದರೆ ಗೃಹಬಳಕೆಯ ಸಿಲಿಂಡರ್‌ಗಳ ದರಗಳನ್ನು ಹೆಚ್ಚಿಸಿಲ್ಲ ಮತ್ತು ಅವುಗಳ ಪ್ರಸ್ತುತ ಬೆಲೆಗೆ ಮಾರಾಟ ಮಾಡಲಾಗುತ್ತದೆ.
ಕಳೆದ ವರ್ಷಾಂತ್ಯದಲ್ಲಿ ಸತತ ಇಳಿಕೆ ಕಂಡಿದ್ದ ಗ್ಯಾಸ್ ಬೆಲಯ ಡಿಸೆಂಬರ್‌ನಲ್ಲಿ ಯಾವುದೇ ಬದಲಾವಣೆಯಾಗದಿದ್ದರೂ, ಇದೀಗ ಜನವರಿ 1ರಂದು ಬಿಗ್ ಶಾಕ್ ನೀಡಿದೆ. ಜೂನ್‌ನಿಂದ ಏಳು ಬಾರಿ ದರ ಇಳಿಕೆ ಮಾಡಿದ್ದ ತೈಲ ಕಂಪನಿಗಳು ಇದೀಗ ದರ ಹೆಚ್ಚಿಸಿವೆ. ಇದರಿಂದ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಏರಿಕೆಯಾಗಿದೆ. ಈ ಮಟ್ಟಿಗೆ ಹೊಸ ದರಗಳನ್ನು ಪ್ರಕಟಿಸಲಾಗಿದೆ.
ಪ್ರಸ್ತುತ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ರೂ.25ರಷ್ಟು ಏರಿಕೆಯಾಗಿದ್ದು ರೂ.1769ಕ್ಕೆ ತಲುಪಿದೆ. ಮುಂಬೈನಲ್ಲಿ ರೂ. 1721ಕ್ಕೆ ತಲುಪಿದೆ. ಮತ್ತು ಕೋಲ್ಕತ್ತಾದಲ್ಲಿ, 19 ಕೆಜಿ ವಾಣಿಜ್ಯ ಸಿಲಿಂಡರ್ ದರ ರೂ.1870 ಆಗಿದೆ. ಚೆನ್ನೈನಲ್ಲೂ 19 ಕೆಜಿಯ ವಾಣಿಜ್ಯ ಸಿಲಿಂಡರ್ ಬೆಲೆ 1917 ರೂ.ಆಗಿದೆ.
ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆ ಏರಿಸಿರುವ ತೈಲ ಮಾರುಕಟ್ಟೆ ಕಂಪನಿಗಳು ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಮಾಡದಿರುವುದು ಜನಸಾಮಾನ್ಯರಿಗೆ ಕೊಂಚ ಸಮಾಧಾನ ತಂದಿದೆ. ಗೃಹಬಳಕೆಯ ಗ್ಯಾಸ್ ಸಿಲಿಂಡರ್ ದರವನ್ನು ಕೊನೆಯದಾಗಿ ಜುಲೈನಲ್ಲಿ ಹೆಚ್ಚಿಸಲಾಗಿತ್ತು. ಅಂದಿನಿಂದ ಇಂದಿನವರೆಗೂ ಯಾವುದೇ ಬದಲಾವಣೆ ಕಂಡುಬಂದಿಲ್ಲ.
ಸಾಮಾನ್ಯವಾಗಿ ತೈಲ ಮಾರುಕಟ್ಟೆ ಕಂಪನಿಗಳು ಅಂತರಾಷ್ಟ್ರೀಯ ತೈಲ ಬೆಲೆಗೆ ಅನುಗುಣವಾಗಿ ದರಗಳನ್ನು ಪರಿಷ್ಕರಿಸುತ್ತವೆ. ಇವುಗಳನ್ನು ಹೆಚ್ಚಾಗಿ ಪ್ರತಿ ತಿಂಗಳ ಒಂದನೇ ದಿನಾಂಕದಂದು ನಡೆಸಲಾಗುತ್ತದೆ. ಡಿಸೆಂಬರ್‌ನಲ್ಲಿ ಬೆಲೆಗಳನ್ನು ಪರಿಷ್ಕರಿಸಲಾಗಿಲ್ಲ. ಅಕ್ಟೋಬರ್‌ನಲ್ಲಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯಲ್ಲಿ ಇಳಿಕೆಯಾಗಿತ್ತು.