ರಕ್ತದಲ್ಲಿ ಕಡಿಮೆ ಸಕ್ಕರೆ ಅಂಶ : ಲಕ್ಷಣಗಳು ಮತ್ತು ತಡೆಯುವ ಕ್ರಮಗಳೇನು : ಡಾ. ಸಂತೋಷ್ ಅವರ ವಿಶೇಷ ಲೇಖನ…!

suddionenews
3 Min Read

 

ಸಾಮಾನ್ಯ ಆರೋಗ್ಯಕರ ವ್ಯಕ್ತಿಗೆ ಸಕ್ಕರೆ ಅಂಶವು ಸದಾ ಕಾಲ 80-120mg / ಪ್ರತಿ dl ( ಡೆಸಿಲೇಟರ್) ಇರಬೇಕು. ಆ ವ್ಯಕ್ತಿಯು ಊಟ ಮಾಡುತ್ತಿರಲಿ, ಮಲಗಿರಲಿ,ಕೆಲಸ ಮಾಡುತ್ತಿರಲಿ ಅಥವಾ ಇನ್ಯಾವುದೇ ದೈಹಿಕ ಚಟುವಟಿಕೆಯಲ್ಲಿ ನಿರತರಾಗಿದ್ದರೂ,ಅಷ್ಟೇ ಪ್ರಮಾಣದಲ್ಲಿ ಸಕ್ಕರೆ ಅಂಶ ಸಮತೋಲಿತ ಮಟ್ಟದಲ್ಲಿ ಇರಬೇಕಾಗುತ್ತದೆ. ಒಂದೊಮ್ಮೆ ಈ ಮಟ್ಟವು ಕಡಿಮೆಯಾದರೆ ವ್ಯಕ್ತಿಯ ಆರೋಗ್ಯಕ್ಕೆ ತೊಂದರೆ ಖಂಡಿತ.

ಇದನ್ನು ನಾವು ಕಡಿಮೆ ಸಕ್ಕರೆ ಅಂಶ ಅಥವಾ ಹೈಪೋಗ್ಲೈಸಿಮಿಯ ಎನ್ನುತ್ತೇವೆ. ಯಾರಿಗಾದರೂ, ಎಲ್ಲಿಯಾದರೂ,ಯಾವುದೇ ಸಮಯದಲ್ಲಿ ಕೂಡ ಆಗಬಹುದಾದ ಸಮಸ್ಯೆ ಇದಾಗಿದೆ. ಸಾಮಾನ್ಯವಾಗಿ ಈ ಕಡಿಮೆ ಸಕ್ಕರೆ ಅಂಶ ಸಮಸ್ಯೆಯು ದೀರ್ಘಕಾಲಿನ ಮಧುಮೇಹ ರೋಗ ಇರುವವರಲ್ಲಿ ಅಥವಾ ದೀರ್ಘಕಾಲಿನ ಉಪವಾಸ ಮಾಡುವವರಲ್ಲಿ ಕಂಡುಬರುತ್ತದೆ.ಇಂತಹ ಪರಿಸ್ಥಿತಿ ಎದುರಿಸದೇ ಇರಲು ಆರೋಗ್ಯವನ್ನು ಸದಾ ಕಾಲ ಕಾಪಾಡಿಕೊಳ್ಳಬೇಕು.

ಉದಾಹರಣೆಗೆ ಹೇಳುವುದಾದರೆ
ಒಂದು ಗಿಡಕ್ಕೆ ನೀರು ಕಡಿಮೆಯೂ ಆಗಬಾರದು, ಹೆಚ್ಚು ಆಗಬಾರದೋ  ಅದೇ ರೀತಿ ನಮ್ಮ ದೇಹಕ್ಕೂ ಕೂಡ ಸಕ್ಕರೆ ಅಂಶ ಕಡಿಮೆಯು ಆಗಬಾರದು, ಹೆಚ್ಚೂ ಆಗಬಾರದು. ಎರಡು ಕೂಡ ಅತ್ಯಂತ ತೊಂದರೆ ಕೊಡುವ ಪರಿಸ್ಥಿತಿಗಳೇ ಆಗಿವೆ. ನಾವು ಸೇವಿಸುವ ಆಹಾರದಿಂದ ಗ್ಲುಕೋಸ್ (ಸಕ್ಕರೆ ಅಂಶ) ರಕ್ತಕ್ಕೆ ಸೇರುತ್ತದೆ. ಈ ಅಂಶ ನಮಗೆ ಕೆಲಸ ಮಾಡಲು ತಾಕತ್ತು, ದೇಹದಲ್ಲಿ ಚೈತನ್ಯ ತರುತ್ತದೆ. ಈ ಅಂಶ ಕೊರತೆಯಾದಾಗ ದೇಹದಲ್ಲಿ ಚೈತನ್ಯ ಇಲ್ಲದಂತಾಗಿ ನಿಶ್ಯಕ್ತಿ,ಸುಸ್ತು ಉಂಟಾಗುತ್ತದೆ.

ದೇಹದಲ್ಲಿ ಸಾಮಾನ್ಯ ಸ್ಥಿತಿ ಖಾಲಿ ಹೊಟ್ಟೆಯಲ್ಲಿ=80-120mg.
* ಊಟ ಮಾಡಿ ಎರಡು ಗಂಟೆಯ ನಂತರ =90-130mg.
* ಕಡಿಮೆ ಶುಗರ್ ಮಟ್ಟ=60mg ಗಿಂತ ಕಡಿಮೆ ಕುಸಿದಾಗ.
* ಹೆಚ್ಚು ಶುಗರ್ ಮಟ್ಟ =130mg ಗಿಂತ ಜಾಸ್ತಿ. (ಖಾಲಿ ಹೊಟ್ಟೆಯಲ್ಲಿ ).
* (ಈ ಸಂಖ್ಯೆಯು ವ್ಯಕ್ತಿಯಿಂದ ವ್ಯಕ್ತಿಗೆ, ರಕ್ತ ಪರೀಕ್ಷಾ ವಿಧಾನಗಳಲ್ಲಿ ಹಿಂದೆ- ಮುಂದೆ ವ್ಯತ್ಯಾಸ ಆಗಬಹುದು.)

ರಕ್ತದ ಅಂಶ 60 mg ಕ್ಕಿಂತ
ಕಡಿಮೆಯಾಗುವುದು.
ಕಾರಣಗಳು:
* ಮಧುಮೇಹಕ್ಕೆ ತೆಗೆದುಕೊಳ್ಳುವ ಔಷಧಿಯಲ್ಲಿ ವ್ಯತ್ಯಾಸ.
* ಇನ್ಸುಲಿನ್ ಪ್ರಮಾಣ ಹೆಚ್ಚು ತೆಗೆದುಕೊಂಡಾಗ.
* ತೀವ್ರ ವ್ಯಾಯಾಮ, ದಿನಗಟ್ಟಲೆ ಉಪವಾಸ ಮಾಡಿರುವಾಗ, ಹೆಚ್ಚು ಮದ್ಯಪಾನ ಮಾಡಿದಾಗ, ಹಾರ್ಮೋನುಗಳಲ್ಲಿ ವ್ಯತ್ಯಾಸ ಅಥವಾ ಅಸಮತೋಲನ.
* ಕೆಲವು ರೋಗಗಳಿಗೆ ತೆಗೆದುಕೊಳ್ಳುವ ಮಾತ್ರೆಗಳ ಅಡ್ಡ ಪರಿಣಾಮಗಳಿಂದ.

ಕಡಿಮೆ ರಕ್ತದ ಅಂಶ ಆಗಿರುವ ಲಕ್ಷಣಗಳು:
* ಸುಸ್ತು,ಕೈ -ಕಾಲುಗಳಲ್ಲಿ ನಡುಕ,
* ತೀವ್ರ ಹಸಿವು,
* ಆಯಾಸ, ತಲೆಸುತ್ತು,
* ದೃಷ್ಟಿ ಮಸುಕಾಗುವುದು.
* ಏಳಲು ಆಗದಿರುವುದು.
* ತೀವ್ರವಾಗಿ ಬೆವರುವುದು.

ತಕ್ಷಣಕ್ಕೆ ಏನು ಮಾಡಬೇಕು?
* ಎಚ್ಚರದ ಸ್ಥಿತಿಯಲ್ಲಿ ಇದ್ದರೆ ತಕ್ಷಣಕ್ಕೆ ಚಾಕಲೇಟು ಜ್ಯೂಸು, ಸಕ್ಕರೆ ಅಂಶದ ನೀರು, ಗ್ಲುಕೋಸ್ ಪುಡಿ ಬಾಯಲ್ಲಿ ಹಾಕಿಕೊಳ್ಳಬೇಕು. ( ಮಧುಮೇಹಿಗಳು ಸಕ್ಕರೆ ಅಂಶ ತೀವ್ರ ಕುಸಿತದ ಅಪಾಯದಲ್ಲಿ ಇರುವ ಕಾರಣಕ್ಕೆ ಸದಾ ಕಾಲ ತಮ್ಮ ಜೇಬಿನಲ್ಲಿ ಒಂದು ಚಾಕ್ಲೆಟ್ ಇಟ್ಟುಕೊಂಡಿರಬೇಕು.)
* ಸ್ವಲ್ಪ ಆರಾಮದ ತಕ್ಷಣ ಊಟ ಮಾಡಬೇಕು.
* ತೀವ್ರ ಸಮಸ್ಯೆ ಇದ್ದಾಗ ಅಗತ್ಯ ವೈದ್ಯಕೀಯ ನೆರವು ಪಡೆಯಬೇಕು.
* ಸಮತೋಲಿತ ಆಹಾರ ಪ್ರತಿದಿನ ನಿಮ್ಮ ದಿನಚರಿಯಲ್ಲಿರಬೇಕು.
* ಇನ್ಸುಲಿನ್ ಮಟ್ಟ ಎಂದಿಗೂ ಅಗತ್ಯಕ್ಕಿಂತ ಹೆಚ್ಚಾಗಿ ತೆಗೆದುಕೊಳ್ಳಬಾರದು.

ತಡೆಯುವ ಕ್ರಮ:
* ಮಧುಮೇಹಿಗಳಲ್ಲಿ ಆಗಾಗ ಈ ಸಮಸ್ಯೆ ಬರಬಹುದಾದ ಕಾರಣಕ್ಕೆ ನಿಮ್ಮ ಇನ್ಸುಲಿನ್ ಮಟ್ಟವನ್ನು ಸಮತೋಲನ ಜೊತೆಗೆ ಸಕ್ಕರೆ ಅಂಶ ತೀವ್ರ ಇಳಿಕೆ ಆಗದಂತೆ ನೋಡಿಕೊಳ್ಳುತ್ತಿರಬೇಕು.
* ನಿಯಮಿತವಾಗಿ ಊಟ ಹಾಗೂ ಸಮತೋಲಿತ ಆಹಾರ ಸೇವನೆ ಮಾಡಬೇಕು.
* ದಿನಗಟ್ಟಲೆ ಎಂದಿಗೂ ಉಪವಾಸ ಮಾಡಬಾರದು.
* ಆಗಾಗ ಸಕ್ಕರೆ ಅಂಶಗಳ ಪರೀಕ್ಷೆಯನ್ನು ಮಾಡಿಸಿಕೊಳ್ಳುತ್ತಿರಬೇಕು.
* ನಿಯಮಿತವಾಗಿ ವ್ಯಾಯಾಮ, ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು.
* ತೀವ್ರ ಸಕ್ಕರೆ ಅಂಶ ಏರಿಕೆ ಆಗಿರುವುದನ್ನು ನಿಯಂತ್ರಿಸಲು ಹೆಚ್ಚು ಮಾತ್ರೆಗಳ ಸೇವನೆಯನ್ನು ಎಂದಿಗೂ ಮಾಡದೆ ಹಂತಹಂತವಾಗಿ ಅದರ ಮಟ್ಟವನ್ನು ಇಳಿಕೆ ಆಗುವಂತೆ ನೋಡಿಕೊಳ್ಳಬೇಕು.
* ತಿಳಿಸಿದ ಮಟ್ಟಕ್ಕಿಂತ ಹೆಚ್ಚು ಇನ್ಸುಲಿನ್ ಎಂದಿಗೂ ತೆಗೆದುಕೊಳ್ಳಬಾರದು.
* ಮೇಲೆ ತಿಳಿಸಿದ ಲಕ್ಷಣಗಳಿಂದ ಸಕ್ಕರೆಯ ಅಂಶ ಇಳಿಕೆಯಾಗುತ್ತಿದೆ ಎಂದು ಅನಿಸಿದರೆ ತಕ್ಷಣವೇ ಸಕ್ಕರೆ ಅಂಶ ಏರಿಕೆ ಆಗುವಂತಹ ಆಹಾರ, ಚಾಕಲೇಟ್ ಬಾಯಲ್ಲಿ ಹಾಕಿಕೊಳ್ಳುವುದು/ ಸೇವನೆ ಮಾಡಬೇಕು.
*

Share This Article