ಕಲಬುರಗಿ : ಎಷ್ಟೇ ಶತಮಾನಗಳು ಕಳೆದರು ಮಾನವನ ಮನಸ್ಸು, ಜಾತಿಯ ವಿಚಾರ ಮಾತ್ರ ಬದಲಾಗುವ ಸಾಧ್ಯತೆ ಕಡಿಮೆ ಇದೆ ಎನ್ನಿಸುತ್ತದೆ. ಸದ್ಯಕ್ಕೆ ಓದುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಪ್ರಪಂಚದ ಜ್ಞಾನ ಹೆಚ್ಚಾದಷ್ಟು, ಜಾತಿ ವ್ಯಾಮೋಹವೂ ಹೆಚ್ಚಾಗುತ್ತಿರುವುದು ಕಾಣುತ್ತಿದೆ. ಕಲಬುರಗಿಯಲ್ಲೂ ಅನ್ಯಜಾತಿಯ ಹುಡುಗಿ ಮದುವೆಯಾದ ಎಂಬ ಕಾರಣಕ್ಕೆ ಹುಡುಗ ಅಪ್ಪ ಪ್ರಾಣ ಬಿಟ್ಟಿದ್ದಾರೆ.
60 ವರ್ಷದ ದಶರಥ ಪೂಜಾರಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ ವ್ಯಕ್ತಿ. ಚಿತ್ತಾಪುರ ತಾಲೂಕಿನ ಚಾಮನೂರು ಗ್ರಾಮದವರು. ಅದೇ ಗ್ರಾಮದ ದ್ಯಾವಪ್ಪನ ಪುತ್ರಿ ಸಂಗೀತಾಳನ್ನು ದಶರಥ ಪೂಜಾರಿ ಮಗ ಸೂರ್ಯಕಾಂತ್ ಪ್ರೀತಿಸಿ, ಮದುವೆಯಾಗಿದ್ದರು. ಮದುವೆಯಾದ ಬಳಿಕ ಗ್ರಾಮಕ್ಕೂ ಬಂದಿದ್ದರು. ಮಾರನೇ ದಿನ ದ್ಯಾವಪ್ಪನ ಮಕ್ಕಳು ದಶರಥ ಕುಟುಂಬಸ್ಥರ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿದ್ದಾರೆ.
ವಾಡಿ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ಸಂಬಂಧ ದೂರು ದಾಖಲಾಗಿತ್ತು. ಬಳಿಕ ದಶರಥ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಹತ್ತು ದಿನಗಳ ಸಾವು ನೋವಿನ ಹೋರಾಟದ ಬಳಿಕ ದಶರಥ ಇಂದು ಕೊನೆಯುಸಿರೆಳೆದಿದ್ದಾರೆ. ಆಸ್ಪತ್ರೆಯ ಮುಂದೆ ಕುಟುಂಬಸ್ಥರ ರೋಧನೆ ಮುಗಿಲು ಮುಟ್ಟಿದೆ.