ಬೆಂಗಳೂರು, (ಮಾ.03) : ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ, ಕೆಎಸ್‌ಡಿಎಲ್ ಅಧ್ಯಕ್ಷರೂ ಆಗಿರುವ ಮಾಡಾಳು ವಿರೂಪಾಕ್ಷಪ್ಪ ಅವರ ಪುತ್ರ ಪ್ರಶಾಂತ್ ಮಾಡಾಳ್ ಅವರನ್ನು ಲಂಚ ಪಡೆಯುತ್ತಿದ್ದಾರೆ ಎಂಬ ಖಚಿತವಾದ ಮಾಹಿತಿ ಮೇರೆಗೆ ಲೋಕಾಯುಕ್ತ ಪೊಲೀಸರು ಗುರುವಾರ ಸಂಜೆ ಬಂಧಿಸಿದ್ದಾರೆ.
ಪ್ರಸ್ತುತ ಪ್ರಶಾಂತ್ ಮಾಡಾಳ್ ಅವರು
ರಾಜ್ಯ ಲೆಕ್ಕಪತ್ರ ಇಲಾಖೆಯ ಜಂಟಿ ನಿಯಂತ್ರಕರಾಗಿ ಬೆಂಗಳೂರು ಜಲ ಮಂಡಳಿಯಲ್ಲಿ ಮುಖ್ಯ ಲೆಕ್ಕಾಧಿಕಾರಿ ಹುದ್ದೆಯಲ್ಲಿದ್ದಾರೆ.
ಅವರ ತಂದೆ ಅಧ್ಯಕ್ಷರಾಗಿರುವ ಕೆಎಸ್‌ಡಿಎಲ್ ನಲ್ಲಿ ಟೆಂಡರ್ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಿರುವ ಪ್ರಶಾತ್ ರಾಸಾಯನಿಕ ಸರಬರಾಜು ವೇಳಾಪಟ್ಟಿ ಮತ್ತು ಕಾರ್ಯಾದೇಶ ನೀಡಲು ಗುತ್ತಿಗೆದಾರ ಶ್ರೇಯಸ್ ಅವರಿಗೆ 81 ಲಕ್ಷ ರೂಪಾಯಿಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಈ ಹಿನ್ನೆಲೆಯಲ್ಲಿ ಗುತ್ತಿಗೆದಾರ ಶ್ರೇಯಸ್ ಕಶ್ಯಪ್ ಬೆಂಗಳೂರು ನಗರ ವಿಭಾಗದ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಲೋಕಾಯುಕ್ತದ ಎಸ್‌ಪಿ ಕೆ.ವಿ. ಅಶೋಕ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಗುರುವಾರ ಸಂಜೆ 6.45ರ ವೇಳೆಗೆ ಗುತ್ತಿಗೆದಾರರಿಂದ ₹40 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರು ಪ್ರಶಾಂತ್ ಅವರನ್ನು ಬಂಧಿಸಿದರು.