ಮೊಳಕಾಲ್ಮುರಿನ ಶ್ರೀ ರಾಘವೇಂದ್ರ ಸ್ವಾಮಿ ಮಠದ ಸಂಪೂರ್ಣ ಮಾಹಿತಿ !

0 Min Read

 

ಮೊಳಕಾಲ್ಮೂರು ಪಟ್ಟಣದ  ಉತ್ತರಭಾಗದ ಈಶ್ವರ ದೇವಾಲಯದ  ಬಳಿಯಲ್ಲಿ 2010 ರಲ್ಲಿ ನಿರ್ಮಾಣವಾಗಿರುವ

ಶ್ರೀ ರಾಘವೇಂದ್ರ ಸ್ವಾಮಿಗಳ  ಮಠವು ಭಕ್ತರನ್ನು ಸೆಳೆಯುವ ಒಂದು ಆಧ್ಯಾತ್ಮಿಕ ಶ್ರದ್ಧಾಕೇಂದ್ರವಾಗಿದೆ.
2010ರಲ್ಲಿ ಮಂತ್ರಾಲಯದ ಪೀಠಾಧ್ಯಕ್ಷರಾಗಿದ್ದ ಶ್ರೀ ಸುಯತೀಂದ್ರ ತೀರ್ಥರಿಂದ ಲೋಕಾರ್ಪಣೆಗೊಂಡ ಇಲ್ಲಿನ ಬೃಂದಾವನವು ದಿನದಿಂದ ದಿನಕ್ಕೆ ಭಕ್ತರನ್ನು ತನ್ನತ್ತ  ಸೆಳೆಯುತ್ತಿದೆ. ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠ ಹಾಗೂ ಬೃಂದಾವನ ಸನ್ನಿಧಿಯು ಭಕ್ತರ ಶ್ರದ್ಧಾಕೇಂದ್ರವಾಗಿದೆ.

ವಾಹನಗಳ ಭರಾಟೆ, ಜನರ ಗೌಜುಗದ್ದಲವಿಲ್ಲದ, ಬೆಟ್ಟದ ತಪ್ಪಲಿನಲ್ಲಿ ರಮಣೀಯ ಪರಿಸರದ ಶಾಂತವಾದ ವಾತಾವರಣದಲ್ಲಿ ಮಠವಿದೆ. ಮಳೆಗಾಲದ ನಂತರ ಇಲ್ಲಿನ ಪರಿಸರವು ಹಸಿರಿನಿಂದ ತುಂಬಿದ್ದು, ಇಲ್ಲಿನ ವಾತಾವರಣವು ನಯನ
ಮನೋಹರವಾಗಿರುತ್ತದೆ.

ಈ ಮಠದ ಸ್ಥಾಪನೆ ಮಾಡುವ ಹಿಂದೆ ಇಲ್ಲಿನ ಭಕ್ತರು ರಾಯರ ದರ್ಶನ ಪಡೆಯಬೇಕೆಂದರೆ ಬೇರೆ ಊರುಗಳಿಗೆ ತೆರಳಬೇಕಾಗಿತ್ತು.
ಇದನ್ನು ಅರಿತ ಇಲ್ಲಿನ ಜೋಡಿದಾರ್ ಕುಟುಂಬದ ದಿವಂಗತ ಶ್ರೀನಿವಾಸಮೂರ್ತಿ ಹಾಗೂ ದಿವಂಗತ ಶಾರದಮ್ಮ ದಂಪತಿಗಳ ಮಕ್ಕಳು  ತಾವು ಹುಟ್ಟಿ ಬೆಳೆದ ಈ ಊರಲ್ಲಿ ರಾಯರ ಒಂದು ಬೃಂದಾವನ ಹಾಗೂ ಮಠ ಮಾಡಬೇಕೆಂದು ಸಂಕಲ್ಪಿಸಿ ಅದರಂತೆ ಮೊಳಕಾಲ್ಮೂರಿನಲ್ಲಿ ಸ್ಥಾಪಿಸಿದರು.

ಈ ಮಠದ ನಿರ್ಮಾಣಕ್ಕೆ ಒಂದೂವರೆ ಕೋಟಿ ರೂಪಾಯಿ ವೆಚ್ಚವಾಗಿದ್ದು, ಇದರ ನಿರ್ಮಾಣಕ್ಕೆ ಕುಟುಂಬದವರ  ಜೊತೆಗೆ ಹಿತೈಷಿಗಳು ಹಾಗೂ ಬಂಧುಗಳು ಸಹಕರಿಸಿದ್ದಾರೆ. ಶಿವರಾತ್ರಿ ದಿನದಂದು ರಾಯರ ವೃಂದಾವನ ಪ್ರತಿಷ್ಠಾಪನೆ ಆದ ಕಾರಣಕ್ಕೆ ಪ್ರತಿವರ್ಷ ಅಂದು  ಪ್ರತಿಷ್ಠಾಪನೋತ್ಸವವನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ.

ಮಂತ್ರಾಲಯದಲ್ಲಿ 48 ದಿನಗಳನ್ನು ಪೂಜಿಸಿದ ಮೃತ್ತಿಕೆಯನು ತಂದು ಇಲ್ಲಿ ಬೃಂದಾವನವನ್ನು ಪ್ರತಿಷ್ಠಾಪಿಸಲಾಗಿದೆ.
ಮಂತ್ರಾಲಯದ ಪೂಜಾ ವಿಧಿವಿಧಾನಗಳನ್ನು ಇಲ್ಲಿ ಅನುಸರಿಸಲಾಗುತ್ತಿದೆ. ಪ್ರತಿ ಗುರುವಾರ ಬೆಳಿಗ್ಗೆಯಿಂದ ಸಂಜೆಯವರೆಗೂ ಮೊಳಕಾಲ್ಮೂರು, ಸೀಮಾಂಧ್ರದ ರಾಯದುರ್ಗ  ಹಾಗೂ ಸುತ್ತಮುತ್ತಲ ಗ್ರಾಮದ  ಭಕ್ತರು ಆಗಮಿಸಿ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆಯುತ್ತಾರೆ.

ಪ್ರತಿ ಗುರುವಾರದ ದಿನ ಸಂಜೆ 7 ರಿಂದ 8.30 ವರೆಗೆ ರಾಘವೇಂದ್ರ ಸ್ವಾಮಿಗಳ ರಥೋತ್ಸವ, ಪಲ್ಲಕ್ಕಿ ಉತ್ಸವ, ಬೃಂದಾವನದ ವಿಶೇಷ ಪೂಜೆ ಜರುಗುತ್ತದೆ.

ಪ್ರತಿ ತಿಂಗಳ ಪೌರ್ಣಮಿಯ ದಿನ ಇಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆಯನ್ನು ಮಾಡಲಾಗುತ್ತದೆ.
ಶ್ರಾವಣ ಮಾಸದಲ್ಲಿ ಮೂರುದಿನಗಳ ಕಾಲ ರಾಘವೇಂದ್ರ ಸ್ವಾಮಿಗಳು ಬೃಂದಾವನಸ್ಥರಾದ ನೆನಪಿಗೆ ಆರಾಧನಾ ಮಹೋತ್ಸವ ಹಾಗೂ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗುತ್ತದೆ. ಇದರ ಜೊತೆಯಲ್ಲಿ ವರ್ಷದ 365 ದಿನಗಳು ಪ್ರತಿ ದಿನ ಮಧ್ಯಾಹ್ನ ಭಕ್ತಾಧಿಗಳಿಗೆ ತೀರ್ಥ ಪ್ರಸಾದದ ವ್ಯವಸ್ಥೆ ಇರುತ್ತದೆ.

ಇದರ ಜೊತೆಗೆ ಮಠದ ಆವರಣದಲ್ಲಿ ಬೇರೆ ಊರಿನಿಂದ ಬರುವ ಭಕ್ತರಿಗೆ ಉಳಿದುಕೊಳ್ಳಲು ವಸತಿಗೃಹ ಲಭ್ಯವಿದೆ. ಮಠದ ವತಿಯಿಂದ ಕಲ್ಯಾಣ ಮಂಟಪ ನಿರ್ಮಿಸಲಾಗಿದ್ದು, ಮದುವೆ ಮುಂತಾದ ಶುಭ ಸಮಾರಂಭಗಳು ನಡೆಸಲು ವ್ಯವಸ್ಥೆ ಇರುತ್ತವೆ.
ಇದರ ಹತ್ತಿರದಲ್ಲಿಯೇ ಗೋಶಾಲೆ ನಿರ್ಮಿಸಲಾಗಿದ್ದು, ಪ್ರಸ್ತುತ 14 ಗೋವುಗಳು ಇಲ್ಲಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ವಿಸ್ತರಿಸುವ ಯೋಜನೆ ಇದೆ.

ಶ್ರೀರಾಘವೇಂದ್ರ ಸ್ವಾಮಿಗಳ ಮಠ, ಕೋಟೆ ಬಡಾವಣೆ, ಮೊಳಕಾಲ್ಮೂರು, ಚಿತ್ರದುರ್ಗ ಜಿಲ್ಲೆ. ದೂ.9845032598

 

ಮಾಹಿತಿ : ಡಾ.ಸಂತೋಷ್ ಹೊಳಲ್ಕೆರೆ

ದಂತ ವೈದ್ಯರು, ಲೇಖಕರು

ಚಿತ್ರದುರ್ಗ-577501

ಮೊ.ನಂ: 9342466936

Share This Article
Leave a Comment

Leave a Reply

Your email address will not be published. Required fields are marked *