ಗದಗ: ತುಂಗಾ ನದಿ ಉತ್ತರ ಕರ್ನಾಟಕ ಭಾಗದ ಮೂರು ಜಿಲ್ಲೆಯ ಜನರಿಗೆ ಬಹಳ ಮುಖ್ಯವಾಗಿ ಬೇಕಾದಂತ ನದಿಯಾಗಿದೆ. ಇಲ್ಲಿನ ಜನ ಇದೇ ನದಿಯ ನೀರನ್ನೇ ನಂಬಿಕೊಂಡು ಕೂತಿದ್ದಾರೆ. ಆದರೆ ಈಗ ಈ ನದಿ ನೀರು ಮಲೀನವಾಗಿದೆ. ನೀರಿನ ಬಣ್ಣವೇ ಬದಲಾಗಿದೆ. ನೀರು ಸಂಪೂರ್ಣವಾಗಿ ಹಸಿರು ಬಣ್ಣಕ್ಕೆ ತಿರುಗಿದ್ದು, ಗದಗ ಜಿಲ್ಲೆಯ ಜನರು ಆತಂಕಕ್ಕೀಡಾಗಿದ್ದಾರೆ. ತುಂಗೆಯ ನೀರು ಈಗ ಬರೀ ನೀರಲ್ಲ, ವಿಷಕಾರಿ ನೀರಾಗಿ ಬದಲಾಗಿದೆ.
ಈಗಾಗಲೇ ಈ ನೀರನ್ನ ಕುಡಿದ ಜನರಲ್ಲಿ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಕಳೆದ ಒಂದು ವಾರದಿಂದ ನದಿ ನೀರು ಈ ರೀತಿ ಹಸಿರು ಬಣ್ಣಕ್ಕೆ ತಿರುಗಿದೆ. ಜನರೆಲ್ಲ ಆರಂಭದಲ್ಲಿ ಇದು ಪಾಚಿ ಕಟ್ಟಿರಬಹುದು , ಹೀಗಾಗಿ ಹಸಿರು ಬಣ್ಣಕ್ಕೆ ತಿರುಗಿದೆ ಎಂದೇ ಭಾವಿಸಿದ್ದರು. ಆದರೆ ನೀರು ಮತ್ತೆ ಮಾಮೂಲಿ ಬಣ್ಣಕ್ಕೆ ತಿರುಗಲೇ ಇಲ್ಲ. ಆ ನೀರು ಕುಡಿದವರು ಕೂಡ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಇದರಿಂದ ಅಕ್ಕ ಪಕ್ಕದ ಗ್ರಾಮದ ಜನ ಆತಂಕಗೊಂಡಿದ್ದು, ದನ, ಕರುಗಳನ್ನು ಕೂಡ ಬಿಡುತ್ತಿಲ್ಲ.
ಜನ ಕೂಡ ನೀರನ್ನು ಕುಡಿಯಲು ಹೆದರುತ್ತಿದ್ದಾರೆ. ಗದಗ, ಕೊಪ್ಪಳ, ವಿಜಯನಗರ ಜಿಲ್ಲೆಯ ಸುಮಾರು 40 ಕ್ಕೂ ಹೆಚ್ಚು ಅಧಿಕಾರಿ ಗ್ರಾಮಗಳಿಗೆ ನೀರು ಪೂರೈಕೆ ಮಾಡಲಾಗುತ್ತದೆ. ಈ ನೀರು ಕುಡಿದು ಜನರು ಅನಾರೋಗ್ಯದಿಂದ ಬಳಲುತ್ತಿದ್ದಾರೆಂದು ಜನ ಆಕ್ರೋಶ ಹೊರ ಹಾಕಿದ್ದಾರೆ. ಗಂಗಾಪುರ ಬಳಿ ಇರುವ ವಿಜಯನಗರ ಶುಗರ್ ಫ್ಯಾಕ್ಟರಿ ಕೆಮಿಕಲ್ ನೀರನ್ನು ನದಿಗೆ ಬಿಟ್ಟಿರುವ ಕಾರಣ ನದಿಯ ನೀರು ಕಲುಷಿತಗೊಂಡಿದೆ ಎಂದು ಜನ ಆಕ್ರೋಶ ಹೊರ ಹಾಕಿದ್ದಾರೆ.