ಚಳ್ಳಕೆರೆ, (ಡಿ.19) : ಸಾಹಿತ್ಯ ಚಿಂತನೆಗಳನ್ನು ಜನಮಧ್ಯದಲ್ಲಿ ಬೆಳೆಸುವ ದೃಷ್ಟಿಯಿಂದ ವಿನೂತನವಾಗಿ ಮನೆಯಂಗಳದಲ್ಲಿ ಸಾಹಿತ್ಯ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುವುದು ಎಂದು ಜಿಲ್ಲಾ ಚಿನ್ಮೂಲಾದ್ರಿ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷೆ ಆರ್. ದಯಾಪುತ್ತೂರ್ಕರ್ ಹೇಳಿದರು.
ನಗರದ ಶಾಂತಿನಗರದಲ್ಲಿನ ಕವಿ ಕೊರ್ಲಕುಂಟೆ ತಿಪ್ಪೇಸ್ವಾಮಿ ಅವರ ನಿವಾಸದಲ್ಲಿ ಭಾನುವಾರ ನಡೆದ ‘ಮನೆಯಂಗಳದಲ್ಲಿ ಸಾಹಿತ್ಯ’ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಚಿನ್ಮೂಲಾದ್ರಿ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಕೊರ್ಲಕುಂಟೆ ಗ್ರಾಮದ ಕನ್ನಡ ರಕ್ಷಣಾ ಮತ್ತು ಸಾಂಸ್ಕೃತಿಕ ವೇದಿಕೆ ಸಹಯೋಗದಲ್ಲಿ ಜಿಲ್ಲೆಯಲ್ಲಿನ ಯುವ ಬರಹಗಾರರನ್ನು ಪ್ರೋತ್ಸಾಹಿಸುವ ಸಲುವಾಗಿ, ಸಾಹಿತ್ಯಾಸಕ್ತರಿರುವ ಮನೆಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಸಾಹಿತ್ಯ ಪ್ರೋತ್ಸಾಹಗಳ ಕೊರತೆಯಿಂದ ಎಲೆಮರೆಯಂತಿರುವ ಬರಹಗಾರರನ್ನು ಸಮಾಜಕ್ಕೆ ಪರಿಚಯಿಸುವ ಅಗತ್ಯವಿದೆ. ಸಂಪನ್ಮೂಲ ಸಾಹಿತ್ಯ ವ್ಯಕ್ತಿ ಭಾಷಾ ಅಭಿವೃದ್ದಿಯ ಸೇವಕ ಇದ್ದಂತೆ. ಯುವ ಬರಹಗಾರರ ಸಾಹಿತ್ಯ ಸಂಗ್ರಹಿಸಿ ಸಂಕಲನ ಪ್ರಕಟಿಸುವ ಚಿಂತನೆ ಮಾಡಲಾಗಿದೆ ಎಂದು ಹೇಳಿದರು.
ಕವಯಿತ್ರಿ ಶೋಭಾ ಮಲ್ಲಿಕಾರ್ಜುನ ಮಾತನಾಡಿ, ಮನೆಯಂಗಳದಲ್ಲಿ ಸಾಹಿತ್ಯ ಕಾರ್ಯಕ್ರಮ ಸಾಹಿತ್ಯ ವಿಚಾರ ಕಾರಂಜಿಯಂತೆ ಮನೆ ಮತ್ತು ಮನ ತಲುಪುವ ಕೆಲಸವಾಗುತ್ತದೆ. ಇದರಿಂದ ಉದಯೋನ್ಮುಖ ಬರಹಗಾರರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾಗಲಿದೆ ಎಂದು ಹೇಳಿದರು.
ಉಪನ್ಯಾಸಕಿ ರೇಣುಕಾ ಪ್ರಕಾಶ್ ಮಾತನಾಡಿ, ಜನ ಸಾಮಾನ್ಯರ ಬದುಕಿನ ಪ್ರತಿಬಿಂಬವೇ ಸಾಹಿತ್ಯ ಎನ್ನುವ ವಿಚಾರ ಜನರಿಗೆ ತಿಳಿಸುವ ಕೆಲಸವಾಗಬೇಕು.
ಮನೆಯಂಗಳದಲ್ಲಿ ಸಾಹಿತ್ಯ ಕುರಿತಾಗಿ ಕತೆ, ಕವನ, ಸೃಜನಶೀಲ ಸಾಹಿತ್ಯ ವಿಚಾರಗಳು ಸಮಾಜದ ಜಾಗೃತಿ ಆಗಲಿದೆ ಎಂದು ಹೇಳಿದರು. ಕವಿ ಕೊರ್ಲಕುಂಟೆ ತಿಪ್ಪೇಸ್ವಾಮಿ ಮಾತನಾಡಿ, ತಾಲೂಕು ಮಟ್ಟದಲ್ಲಿ ಮನೆಯಂಗಳದಲ್ಲಿ ಸಾಹಿತ್ಯ ಕಾರ್ಯಕ್ರಮ ಮುಗಿದ ಬಳಿಕ ಜಿಲ್ಲಾ ಹಂತದಲ್ಲಿ ಸ್ಪರ್ಧಾ ಕವಿಗೋಷ್ಟಿ ಆಯೋಜನೆ ಮಾಡುವ ಮೂಲಕ ಉದಯೋನ್ಮುಖ ಬರಹಗಾರರಲ್ಲಿ ಇನ್ನಷ್ಟು ಸಾಹಿತ್ಯ ಹವ್ಯಾಸ ಬೆಳೆಸಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಕವಿಯಿತ್ರಿ ಡಾ.ಚಂದನಿ ಖಾಲಿದ್, ಪುಷ್ಪವಲ್ಲಿ, ಎಂ. ತುಳಸಿ, ಎನ್. ಸಾವಿತ್ರಮ್ಮ ಮತ್ತಿತರರು ಇದ್ದರು.