ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜುಲೈ. 29 : ನಡೆ, ನುಡಿಗಳು ಒಂದಾದಾಗ ಮಾತ್ರ ಸಂಘಟನೆಗೆ ಶಕ್ತಿ ಬರುತ್ತದೆಂದು ಸಾಣೆಹಳ್ಳಿಯ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತ.ರಾ.ಸು.ರಂಗಮಂದಿರದಲ್ಲಿ ಸೋಮವಾರ ನಡೆದ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಜನಸಂಖ್ಯೆ ತೋರಿಸಿದರೆ ಸಂಘಟನೆಗೆ ಶಕ್ತಿ ಬರುವುದಿಲ್ಲ. ಇಷ್ಟಲಿಂಗ ದೀಕ್ಷೆ ಶಿವಯೋಗ ಸಾಧನೆ ಮೂಲಕ ಹನ್ನೆರಡನೆ ಶತಮಾನದಲ್ಲಿ ಬಸವಣ್ಣ ಹೋರಾಟಕ್ಕೆ ಶಕ್ತಿ ಪಡೆದುಕೊಂಡರು. ಅಸಮಾನತೆ ನಿವಾರಣೆಯಾಗಿ ಸಮ ಸಮಾಜ ಕಟ್ಟುವ ಸಂಕಲ್ಪ ಮನಸ್ಸಿನಲ್ಲಿ ಮೂಡಬೇಕು. ಎಲ್ಲರನ್ನು ಸಮಾನವಾಗಿ ಕಂಡವರು ಭಕ್ತಿ ಭಂಡಾರಿ ಬಸವಣ್ಣನವರು. ಬಸವ ಪರಂಪರೆಯಿಂದ ಬಂದ ನಾವುಗಳು ಬಸವಣ್ಣನವರ ಆಚಾರ ವಿಚಾರ ತತ್ವಗಳನ್ನು ಮೈಗೂಡಿಸಿಕೊಂಡರೆ ಲಿಂಗಾಯತ ಧರ್ಮ ಸ್ವತಂತ್ರವಾಗಿ ಉಳಿಯಲು ಸಾಧ್ಯ. ಇಲ್ಲದಿದ್ದರೆ ಹೋರಾಟಕ್ಕೆ ಜಯ ಸಿಗುವುದಿಲ್ಲ ಎಂದರು.
ಈ ಹಿಂದೆಯೇ ಜಿಲ್ಲೆಯಲ್ಲಿ ಸಂಘಟನೆಯಾಗಬೇಕಿತ್ತು. ಒಬ್ಬೊಬ್ಬರು ಇಬ್ಬರು ಸದಸ್ಯರನ್ನು ಮಾಡಿ. ಆಚಾರ ವಿಚಾರವಿಟ್ಟುಕೊಳ್ಳಿ. ಸಾತ್ವಿಕರು, ಸಜ್ಜನರ ಮನಸ್ಸು ನೋಯಿಸುವವರು ಬೆಂದು ಹೋಗುತ್ತಾರೆಂದು ತಿಳಿಸಿದರು.
ನಿವೃತ್ತ ಪ್ರಾಧ್ಯಾಪಕ ಹಾಗೂ ಆರ್ಥಿಕ ಚಿಂತಕ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ಮಾತನಾಡುತ್ತ ಸಕಲ ವಿಸ್ತಾರಗಳಲ್ಲಿ ಲಿಂಗಾಯತರನ್ನು ತೆಗೆದುಕೊಂಡು ಹೋಗುವ ಹೊಣೆಗಾರಿಕೆ ಎಲ್ಲರ ಮೇಲಿದೆ. ಬಸವಾದಿ ಶರಣರ ಆಶಯವಾಗಿರುವ ಜಾಗತಿಕ ಲಿಂಗಾಯತ ಧರ್ಮ ಸಾಂವಿಧಾನಿಕವಾಗಿ ಮನ್ನಣೆ ಪಡೆಯಬೇಕು. ಜಾಗತಿಕ ಲಿಂಗಾಯತ ಮಹಾಸಭಾ ಲಿಂಗಾಯತರನ್ನು ವಿಂಗಡಿಸುವ ಕೆಲಸ ಮಾಡುತ್ತಿದೆ ಎನ್ನುವ ತಪ್ಪು ಕಲ್ಪನೆಯಿರುವುದನ್ನು ಹೋಗಲಾಡಿಸಬೇಕು. ಜಾಗತಿಕ ಲಿಂಗಾಯತ ಧರ್ಮವನ್ನು ಸ್ವತಂತ್ರ ಧರ್ಮವನ್ನಾಗಿಸುವಂತೆ ರಾಜ್ಯದಿಂದ ಕೇಂದ್ರಕ್ಕೆ ಶಿಫಾರಸ್ಸು ಹೋಗಿದೆ. ಆದರೆ ಕೇಂದ್ರ ಸರ್ಕಾರ ಅಸ್ಪಷ್ಟ ಹಿಂಬರಹದೊಂದಿಗೆ ವಾಪಸ್ ಕಳಿಸಿದೆ. ಎರಡನೆ ಬಾರಿಗೆ ವರದಿ ಸಿದ್ದಪಡಿಸಿ ಕೇಂದ್ರಕ್ಕೆ ರವಾನಿಸಬೇಕಿದೆ ಎಂದು ಹೇಳಿದರು.
ಒಳಪಂಗಡಗಳು ತನ್ನದೆ ಆದ ಅಸ್ಮಿತೆಯನ್ನು ಮಾಡಿಕೊಂಡಿವೆ. ಜಾಗತಿಕ ಲಿಂಗಾಯತ ಮಹಾಸಭಾ ಯಾವುದೇ ಸಮುದಾಯಕ್ಕೆ ಪ್ರತಿಸ್ಪರ್ಧಿಯಲ್ಲ. ಎಲ್ಲರೊಂದಿಗೆ ಬೆಸೆಯುವ ಕೆಲಸವಾಗಬೇಕೆ ವಿನಃ ಛಿದ್ರಗೊಳಿಸುವ ಕೆಲಸವಾಗಬಾರದೆಂದರು.
ಮುರುಘರಾಜೇಂದ್ರ ಬೃಹನ್ಮಠದ ಡಾ.ಜಯಬಸವಕುಮಾರ ಸ್ವಾಮೀಜಿ ಮಾತನಾಡಿ ವ್ಯಕ್ತಿಯ ವ್ಯಕ್ತಿತ್ವ ನಿರ್ಧರಿಸುವುದು ಪ್ರಜ್ಞೆಯಿಂದಲ್ಲ. ಅಸ್ತಿತ್ವದಿಂದ. ಪ್ರಜ್ಞೆ ಪ್ರಬುದ್ದಕ್ಕಿಂತಲೂ ಅಸ್ತಿತ್ವದಲ್ಲಿದಯೇ ಎನ್ನುವ ಚರ್ಚೆಯಾಗಬೇಕಿದೆ. ಲಿಂಗಾಯತ ಧರ್ಮ ಹನ್ನೆರಡನೆ ಶತಮಾನದಲ್ಲಿಯೇ ಅಸ್ತಿತ್ವದಲ್ಲಿತ್ತು. ಸಾಂವಿಧಾನಿಕ ಅಸ್ತಿತ್ವ ಮುಖ್ಯ. ಯಾರು ತನಗಾಗಿ ಜೀವಿಸುತ್ತಾರೋ ಅವರು ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ. ಜವಾಬ್ದಾರಿ ತೆಗೆದುಕೊಳ್ಳುವವರು ತನಗಾಗಿ ಜೀವಿಸುವುದಿಲ್ಲ.
ಜಾಗತಿಕ ಲಿಂಗಾಯತ ಮಹಾಸಭಾ ಎಂದಿಗೂ ತನಗಾಗಿ ಬದುಕುವುದಿಲ್ಲ. ಸತ್ಯದಿಂದ ಬದುಕುವವರನ್ನು ದೂರವಿಡುತ್ತೇವೆ. ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಉಚಿತವಾಗಿ ಅಕ್ಕಿ ಕೊಟ್ಟ ಸಂದರ್ಭದಲ್ಲಿ ಅಕ್ಕಿ ಕೊಡುವ ಬದಲು ದುಡಿಯುವ ಕೈಗಳಿಗೆ ಕೆಲಸ ಕೊಡಿ ಎಂದು ದಿಟ್ಟತನದಿಂದ ಹೇಳಿದವರು ಸಾಣೆಹಳ್ಳಿಯ ಡಾ.ಪಂಡಿತಾರಾಧ್ಯ ಸ್ವಾಮಿಗಳು ಎನ್ನುವುದನ್ನು ನೆನಪಿಸಿಕೊಂಡರು.
ಬಸವಣ್ಣನವರ ವಿಚಾರ ಬಂದಾಗ ಸಾಂವಿಧಾನಿಕ ಅಸ್ತಿತ್ವ ಪಡೆದುಕೊಳ್ಳುವ ಎದೆಗಾರಿಕೆ ಬೇಕು. ವಿಶ್ವದಲ್ಲಿ ಕಾಯಕ ಸಮಾಜ ಯಾವುದಾದರೂ ಇದ್ದರೆ ಅದು ಲಿಂಗಾಯಿತ ಸಮಾಜ. ಲಿಂಗಾಯತ ಸಮಾಜವನ್ನು ಎಲ್ಲಿಯತನಕ ಜಾತಿ ಧ್ಯೋತಕವಾಗಿ ಬಳಸುತ್ತೇವೆಯೋ ಅದು ದ್ರೋಹ ಎಂದರು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ಜಾಗತಿಕ ಲಿಂಗಾಯತ ಮಹಾಸಭಾ ಬೆಳಗಾಂ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ರೊಟ್ಟಿ ೨೦೧೮ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ಹುಟ್ಟಿಕೊಂಡ ಜಾಗತಿಕ ಲಿಂಗಾಯತ ಮಹಾಸಭಾ ರಾಜ್ಯದ ೨೦ ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಿದೆ. ಹದಿನೆಂಟು ಇಪ್ಪತ್ತು ರಾಷ್ಟ್ರಗಳಲ್ಲಿ ಸದಸ್ಯರುಗಳಿದ್ದಾರೆ. ರಾಜ್ಯದಲ್ಲಿ ಇಪ್ಪತ್ತು ಸಾವಿರ ಸದಸ್ಯರುಗಳಿದ್ದು, ೨೦೧೭-೧೮ ರ ಬೃಹತ್ ಹೋರಾಟದ ಫಲವಾಗಿ ನಾಗಮೋಹನ್‌ದಾಸ್ ವರದಿ ಜಾರಿಯಾಗಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಕಳಿಸಿದೆ. ಕೇಂದ್ರ ವರದಿಯನ್ನು ತಿರಸ್ಕರಿಸಿ ರಾಜ್ಯಕ್ಕೆ ಹಿಂದಿರುಗಿಸಿದೆ. ಎರಡನೆ ಹಂತದ ಹೋರಾಟ ಆರಂಭಿಸಬೇಕಿದೆ. ಇದಕ್ಕೆ ಎಲ್ಲರ ಸಹಕಾರ ಬೇಕು ಎಂದು ಕೋರಿದರು.
ದಾಖಲೆಗಳ ಆಧಾರದ ಮೇಲೆ ಮೂವತ್ತು ಪುಟಗಳ ಮನವಿ ಸಿದ್ದವಾಗಿದೆ. ಹನ್ನೆರಡನೆ ಶತಮಾನದ ಸ್ವತಂತ್ರ ಧರ್ಮಕ್ಕೆ ಈಗ ಸಾಂವಿಧಾನಿಕ ಮಾನ್ಯತೆ ಸಿಗಬೇಕಿದೆ. ಆಗ ಮಾತ್ರ ಅಲ್ಪಸಂಖ್ಯಾತರಿಗೆ ಸಿಗಬೇಕಾದ ಸ್ಥಾನಮಾನಕ್ಕೆ ನಾವುಗಳು ಅರ್ಹರಾಗುತ್ತೇವೆಂದರು.
ಬಸವಮಂಟಪದ ಮಾತೆ ದಾನೇಶ್ವರಿ, ಜಾಗತಿಕ ಲಿಂಗಾಯತ ಮಹಾಸಭಾ ಕೊಪ್ಪಳ ಜಿಲ್ಲಾ ಘಟಕದ ಅಧ್ಯಕ್ಷ ಹನುಮೇಶ ಕಲಮಂಗಿ, ದಾವಣಗೆರೆ ಜಿಲ್ಲಾ ಘಟಕದ ಅಧ್ಯಕ್ಷ ರುದ್ರಮುನಿಸ್ವಾಮಿ, ದಾವಣಗೆರೆ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಕುಸುಮ ಲೋಕೇಶ್ ಇವರುಗಳು ವೇದಿಕೆಯಲ್ಲಿದ್ದರು.
ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷರಾಗಿ ಜೆ.ಡಿ.ಕೆಂಚವೀರಪ್ಪ, ಉಪಾಧ್ಯಕ್ಷರುಗಳಾಗಿ ಜಿ.ಚಿದಾನಂದಪ್ಪ, ಶಿವಲಿಂಗಪ್ಪ, ರುದ್ರಮುನಿ, ಪ್ರಧಾನ ಕಾರ್ಯದರ್ಶಿಯಾಗಿ ನಂದೀಶ ಜಿ.ಟಿ. ಸಂಘಟನಾ ಕಾರ್ಯದರ್ಶಿಯಾಗಿ ಬಸವರಾಜ್ ಕಟ್ಟಿ, ಖಜಾಂಚಿಯಾಗಿ ವಾಗೀಶ್‌ಬಾಬು, ನಿರ್ದೇಶಕರುಗಳಾಗಿ ಎಲ್.ಬಸವರಾಜಪ್ಪ ಅಳಗವಾಡಿ, ಸಿದ್ದಪ್ಪ ಹಳಿಯೂರು, ಆರ್.ಪಾರ್ವತಮ್ಮ, ಕೆ.ಸಿ.ಗಂಗಾಧರ್, ಎನ್.ವೀರಣ್ಣ ಹೊಸಹಳ್ಳಿ ಇವರುಗಳು ಪದಗ್ರಹಣ ಸ್ವೀಕರಿಸಿದರು.
ತೋಟಪ್ಪ ಉತ್ತಂಗಿ ವಚನ ಗಾಯನ ಮೂಲಕ ಪ್ರಾರ್ಥಿಸಿದರು. ಶ್ರೀಮತಿ ಶೈಲಜಾ ಆರ್.ಬಾಬು ಸ್ವಾಗತಿಸಿದರು. ಧನಂಜಯ ಎ.ಬಿ.ವಂದಿಸಿದರು. ನಂದೀಶ ಜಿ.ಟಿ.ನಿರೂಪಿಸಿದರು.