ವರದಿ ಮತ್ತು ಫೋಟೋ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ, (ಸುದ್ದಿಒನ್,ಸೆ.16): ಲಿಂಗಾಯತ ಪಂಚಮಸಾಲಿಗಳಿಗೆ 2 ಎ ಮೀಸಲಾತಿಗಾಗಿ ಕಳೆದ ಎರಡು ವರ್ಷಗಳಿಂದಲೂ ನಿರಂತರ ಹೋರಾಟ ಮಾಡಿಕೊಂಡು ಬರುತ್ತಿದ್ದರೂ ರಾಜ್ಯ ಸರ್ಕಾರ ನಮ್ಮನ್ನು ಕಡೆಗಣಿಸುತ್ತಿರುವುದನ್ನು ವಿರೋಧಿಸಿ ಸೆ.20 ರಂದು ಶಿಗ್ಗಾವ್ದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರ ನಿವಾಸದ ಎದುರು ಬೃಹತ್ ಪ್ರತಿಭಟನೆ ನಡೆಸಲಾಗುವುದೆಂದು ಲಿಂಗಾಯತ ಪಂಚಮಸಾಲಿ ಮಹಾಸಭಾ ಕೂಡಲಸಂಗಮ ಪೀಠದ ಜಿಲ್ಲಾಧ್ಯಕ್ಷ ಕೆ.ಸಿ.ಗಂಗಾಧರಪ್ಪ ತಿಳಿಸಿದರು.
ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕೆ.ಸಿ.ಗಂಗಾಧರಪ್ಪ ಲಿಂಗಾಯತ ಪಂಮಸಾಲಿ ಜನಾಂಗಕ್ಕೆ 2 ಎ.ಮೀಸಲಾತಿ ನೀಡುವುದಾಗಿ ನಾಲ್ಕು ಬಾರಿ ಮಾತು ಕೊಟ್ಟು ವಚನ ಭ್ರಷ್ಟರಾಗಿರುವ ರಾಜ್ಯದ ಮುಖ್ಯಮಂತ್ರಿ ನಿವಾಸದ ಮುಂದೆ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಧರಣಿ ನಡೆಸಲಾಗುವುದು. ರಾಜ್ಯಾದ್ಯಂತ ಸ್ವಾಮೀಜಿ ಸುತ್ತಾಡಿ ಜನಾಂಗವನ್ನು ಸಂಘಟಿಸಿ 2 ಎ.ಮೀಸಲಾತಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಮಕ್ಕಳ ಶಿಕ್ಷಣ ಉದ್ಯೋಗಕ್ಕಾಗಿ ಮೀಸಲಾತಿ ನಮಗೆ ಅತ್ಯವಶ್ಯಕವಾಗಿದೆ ಎನ್ನುವುದನ್ನು ರಾಜ್ಯ ಸರ್ಕಾರದ ಗಮನಕ್ಕೆ ತರಲು ಪ್ರತಿಭಟನೆಗೆ ಮುಂದಾಗಿದ್ದೇವೆ. ಒಂದು ವೇಳೆ ರಾಜ್ಯದ ಮುಖ್ಯಮಂತ್ರಿ ನಮಗೆ 2 ಎ.ಮೀಸಲಾತಿ ನೀಡದಿದ್ದರೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗುವುದೆಂದು ಎಚ್ಚರಿಸಿದರು.
ಲಿಂಗಾಯತ ಪಂಚಮಸಾಲಿ ಯುವ ಘಟಕದ ಜಿಲ್ಲಾಧ್ಯಕ್ಷ ಮಂಜುನಾಥ್ ಹೆಚ್.ಎಂ. ಎಸ್.ತಿಪ್ಪೇಸ್ವಾಮಿ, ಕಾರ್ತಿಕ್ ಬಿ.ವಿ.ಕೆ.ಎಸ್. ಎಸ್.ಟಿ.ನವೀನ್ಕುಮಾರ್, ನಾಗರಾಜ್ ನಂದಿಪುರ, ಜಿತೇಂದ್ರ ಹುಲಿಕುಂಟೆ, ಪ್ರಶಾಂತ್ರೆಡ್ಡಿ, ವಿಜಯಕುಮಾರ್, ಮನು ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.