ಹೊಸದುರ್ಗ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಲಿಂಗಮೂರ್ತಿ ನಾಮಪತ್ರ ಸಲ್ಲಿಕೆ

1 Min Read

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಹೊಸದುರ್ಗ, (ಏ.19) : ಹೊಸದುರ್ಗ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಲಿಂಗಮೂರ್ತಿ ಬುಧವಾರ ಅಪಾರ ಜನಸ್ತೋಮದ ಹಾಗೂ ಅಭಿಮಾನಿಗಳ ನಡುವೆ ಮೆರವಣಿಗೆ ನಡೆಸಿ ತಾಲ್ಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.

ಪಟ್ಟಣದ ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಲಿಂಗಮೂರ್ತಿ ದೇಶದ ಪ್ರಧಾನಿ ನರೇಂದ್ರಮೋದಿ, ರಾಜ್ಯದ ಮುಖ್ಯಮಂತ್ರಿ ಬಸವರಾಜ್‍ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಪಾರದರ್ಶಕ ಆಡಳಿತವನ್ನು ಮೆಚ್ಚಿ ಜನ ಸಾಗರೋಪಾದಿಯಲ್ಲಿ ಆಗಮಿಸಿ ನನ್ನ ಬೆಂಬಲಕ್ಕೆ ನಿಂತಿರುವುದನ್ನು ನೋಡಿದರೆ ಒಂದು ಲಕ್ಷಕ್ಕಿಂತ ಅಧಿಕ ಬಹುಮತಗಳಿಂದ ಗೆಲ್ಲುತ್ತೇನೆಂಬ ವಿಶ್ವಾಸ ವ್ಯಕ್ತಪಡಿಸಿದರು.

ವ್ಯಕ್ತಿಗಿಂತ ಪಕ್ಷ ದೊಡ್ಡದು. ಪಕ್ಷಕ್ಕಿಂತ ದೇಶ ದೊಡ್ಡದು ಎನ್ನುವ ಸಿದ್ದಾಂತದ ಮೇಲೆ ನಿಂತಿರುವ ಬಿಜೆಪಿ. ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ ಅನೇಕ ಅಭಿವೃದ್ದಿ ಯೋಜನೆಗಳನ್ನು ಕೊಡುಗೆಯಾಗಿ ನೀಡಿದೆ. ಹಾಗಾಗಿ ಬಂಡಾಯಕ್ಕೆ ಇಲ್ಲಿ ಬೆಲೆಯಿಲ್ಲ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಕ್ಕೆ ಮೀಸಲಾತಿ ಹೆಚ್ಚಳ, ಸದಾಶಿವ ಆಯೋಗದ ವರದಿಯನ್ವಯ ಒಳ ಮೀಸಲಾತಿ ಜಾರಿ, ಕಾಡುಗೊಲ್ಲರಿಗೆ ಅಭಿವೃದ್ದಿಗೆ ನಿಗಮ, ಭೋವಿ ಅಭಿವೃದ್ದಿ ನಿಗಮ ಹೀಗೆ ಹತ್ತು ಹಲವಾರು ಜನಪ್ರಿಯ ಯೋಜನೆಗಳೆ ಈ ಬಾರಿಯ ಚುನಾವಣೆಯಲ್ಲಿ ಪಕ್ಷಕ್ಕೆ ಶ್ರೀರಕ್ಷೆಯಾಗಲಿದೆ ಎಂದು ಹೇಳಿದರು.

ಮೆರವಣಿಗೆಯುದ್ದಕ್ಕೂ ನೆರೆದಿದ್ದ ಸಹಸ್ರಾರು ಕಾರ್ಯಕರ್ತರು ಹಾಗೂ ಅಭಿಮಾನಿಗಳು ಕೈಯಲ್ಲಿ ಬಿಜೆಪಿ. ಭಾವುಟಗಳನ್ನಿಡಿದು ಅಭ್ಯರ್ಥಿ ಲಿಂಗಮೂರ್ತಿ ಪರ ಜೈಕಾರಗಳನ್ನು ಕೂಗಿದರು.

ನಂದಿಕೋಲು, ವೀರಗಾಸೆ, ನಾಸಿಕ್‍ಡೋಲು, ಡೊಳ್ಳು, ತಮಟೆ, ಉರುಮೆ ಸದ್ದಿಗೆ ಮೆರವಣಿಗೆಯಲ್ಲಿದ್ದ ಅಪಾರ ಜನಸ್ತೋಮ ಕುಣಿದು ಕುಪ್ಪಳಿಸಿತು.

ಬಿಜೆಪಿ.ಜಿಲ್ಲಾಧ್ಯಕ್ಷ ಎ.ಮುರಳಿ, ಮಂಡಲ ಅಧ್ಯಕ್ಷ ಗೂಳಿಹಟ್ಟಿ ಜಗದೀಶ್, ಹೆಬ್ಬಳ್ಳಿ ಓಂಕಾರಣ್ಣ, ಹೆಬ್ಬಳ್ಳಿ ಮಲ್ಲಿಕಾರ್ಜುನ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರುಗಳಾದ ಗುರುಸ್ವಾಮಿ, ಲಕ್ಷ್ಮಣ್, ಪರಶುರಾಮಪ್ಪ, ಹನುಮಂತಪ್ಪ, ಅಜ್ಜಪ್ಪ, ಮೀನಾಕ್ಷಿ ನಂದೀಶ್, ಬಿಜೆಪಿ.ಮುಖಂಡರುಗಳಾದ ಡಾ.ಜಯರಾಂ ನಾಯ್ಕ, ಕೋಡಿಹಳ್ಳಿ ತಮ್ಮಣ್ಣ, ಕೆ.ಎಸ್.ಕಲ್ಮಠ್, ರಾಜೇಶ್ ಬುರುಡೆಕಟ್ಟೆ, ಬಸವರಾಜ್ ತುಂಬಿನಕೆರೆ, ಆರ್.ಡಿ.ಸೀತಾರಾಂ, ಪಂಪ ಇನ್ನು ಅನೇಕರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *