in ,

ಅಭ್ಯರ್ಥಿಗೆ ಚುನಾವಣಾ ವೆಚ್ಚ ರೂ.40 ಲಕ್ಷ ಮಿತಿ : ರಾಜಕೀಯ ಪಕ್ಷಗಳಿಗೆ ಸುವಿಧಾ ತಂತ್ರಾಂಶ ಕುರಿತು ಮಾಹಿತಿ : ಜಿಲ್ಲಾಧಿಕಾರಿ ಸಭೆ : ಸಂಪೂರ್ಣ ಮಾಹಿತಿ…!

suddione whatsapp group join

 

ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಚಿತ್ರದುರ್ಗ,(ಮಾರ್ಚ್31) : ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ರ ಸಂಬಂಧ ವಿವಿಧ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮೆರವಣಿಗೆ, ಧ್ವನಿವರ್ಧಕ, ರ‌್ಯಾಲಿ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ನಡೆಸಲು ಅನುಮತಿಗಾಗಿ ಚುನಾವಣಾ ಆಯೋಗ ರೂಪಿಸಿರುವ ಸುವಿಧಾ ತಂತ್ರಾಂಶ ಬಳಸುವಂತೆ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅವರು ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿಧಾನಸಭಾ ಚುನಾವಣೆಗೆ ಜಿಲ್ಲೆಯಲ್ಲಿ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದ್ದು, ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸಲು ಬಿಗಿ ಕ್ರಮಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ನೀತಿ ಸಂಹಿತೆ ಕಟ್ಟುನಿಟ್ಟಿನ ಜಾರಿಗಾಗಿ ಸ್ಟ್ಯಾಟಿಕ್ ಸರ್ವೆಲೆನ್ಸ್, ಫ್ಲೈಯಿಂಗ್ ಸ್ಕ್ವಾಡ್, ವಿಎಸ್‍ಟಿ,  ಸೇರಿದಂತೆ ವಿವಿಧ ತಂಡಗಳನ್ನು ರಚಿಸಿ, ಅವರು ಈಗಾಗಲೆ ಕ್ಷೇತ್ರಗಳಲ್ಲಿ ಕರ್ತವ್ಯದಲ್ಲಿ ನಿರತರಾಗಿದ್ದಾರೆ.  ಚುನಾವಣಾ ಅಕ್ರಮ ತಡೆಗಾಗಿ ಜಿಲ್ಲೆಯಾದ್ಯಂತ 35 ಚೆಕ್‍ಪೋಸ್ಟ್‍ಗಳು ಕಾರ್ಯನಿರ್ವಹಿಸುತ್ತಿವೆ.

ಜಿಲ್ಲೆಯು ಮೊಳಕಾಲ್ಮುರು, ಚಳ್ಳಕೆರೆ ಹಾಗೂ ಹಿರಿಯೂರು ತಾಲ್ಲೂಕುಗಳು ಆಂದ್ರಪ್ರದೇಶದ ಅನಂತಪುರ ಜಿಲ್ಲೆಯೊಂದಿಗೆ 150 ಕಿ.ಮೀ ಗಡಿ ಹೊಂದಿದೆ. ಹಾಗಾಗಿ 8 ಕಡೆ ಅಂತರರಾಜ್ಯ ಚೆಕ್‍ಪೋಸ್ಟ್‍ಗಳನ್ನು ಸ್ಥಾಪಿಸಲಾಗಿದೆ. ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ಆರ್.ಪಿ, ಸಿಆರ್‍ಪಿಸಿ, ಐಪಿಸಿ ಅಡಿ ಪ್ರಕರಣ ದಾಖಲು ಮಾಡಲಾಗುತ್ತಿದೆ ಎಂದು ಹೇಳಿದರು.

ಚುನಾವಣಾ ಖರ್ಚು-ವೆಚ್ಚದ ಬಗ್ಗೆ ವೀಡಿಯೋ ಮಾಡಿಕೊಂಡು ಅದರಂತೆ ವೆಚ್ಚ ನಮೂದಿಸಲಾಗುತ್ತದೆ. ಈಗಾಗಲೇ ನಿಗದಿತ ದರಗಳ ವಿವರ ರಾಜಕೀಯ ಪಕ್ಷದವರಿಗೆ ನೀಡಲಾಗಿದ್ದು, ಅದರಂತೆ ವೆಚ್ಚ ನಮೂದಿಸಲಾಗುವುದು. ಪ್ರತಿ ಅಭ್ಯರ್ಥಿಗೆ ಚುನಾವಣಾ ವೆಚ್ಚ ಮಾಡಲು ರೂ.40 ಲಕ್ಷದವರೆಗೆ ಗರಿಷ್ಟ ಮಿತಿ ನಿಗಧಿಪಡಿಸಲಾಗಿದೆ.

ಜಿಲ್ಲೆಯಲ್ಲಿ ನಿಷ್ಪಕ್ಷಪಾತ, ಮುಕ್ತ, ನ್ಯಾಯಸಮ್ಮತ ಚುನಾವಣೆ ನಡೆಸುವ ಗುರಿ ಇದೆ.   ನೀತಿ ಸಂಹಿತೆ ಉಲ್ಲಂಘನೆ ಕುರಿತ ಯಾವುದೇ ದೂರುಗಳಿಲ್ಲದ್ದಲ್ಲಿ ನೇರವಾಗಿ ತಿಳಿಸಿ, ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದರು.

ಚುನಾವಣೆಯಲ್ಲಿ ಮತದಾರರಿಗೆ ಆಮಿಷವೊಡ್ಡುವುದು ಹಾಗೂ ಚುನಾವಣಾ ಅಕ್ರಮದಲ್ಲಿ ಭಾಗಿಯಾಗಿರುವುದು ಕಂಡುಬಂದರೆ ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಲಾಗುವುದು. ಈ ವಿಷಯದ ಕುರಿತಾದ ಮಾಹಿತಿಯನ್ನು ಸಭೆಯಲ್ಲಿ ಭಾಗವಹಿಸಿರುವ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ಸಂಪೂರ್ಣ ಮಾಹಿತಿ ತಲುಪಿಸಬೇಕು ಹಾಗೂ ಮುಕ್ತ, ನ್ಯಾಯಸಮ್ಮತ ಹಾಗೂ ಶಾಂತಿಯುತ ಚುನಾವಣೆ ನಡೆಸಲು ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಜಿಲ್ಲಾಡಳತಕ್ಕೆ ಅಗತ್ಯ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಅಭ್ಯರ್ಥಿಗಳು ವಾಹನ, ಧ್ವನಿವರ್ಧಕ, ಸಭೆ, ಸಮಾರಂಭ, ರ‌್ಯಾಲಿ ಸೇರಿದಂತೆ ವಿವಿಧ ಅನುಮತಿ ಪಡೆಯಲು ಏಕ ಗವಾಕ್ಷಿ ವ್ಯವಸ್ಥೆ “ಸುವಿಧಾ” ತಂತ್ರಾಂಶದಲ್ಲಿ  https://suvidha.eci.gov.in ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಹೇಳಿದರು.

ಜಿಲ್ಲಾ ಚುನಾವಣಾಧಿಕಾರಿಯು ಹೆಲಿಕ್ಯಾಪ್ಟರ್ ಲ್ಯಾಡಿಂಗ್, ಏರ್ ಬಲೋನ್, ವಿಡಿಯೋ ವ್ಯಾನ್‍ಗೆ ಅನುಮತಿ ನೀಡುವ ವ್ಯವಸ್ಥೆ ಇದೆ. ಆಯಾ ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳು ರ್ಯಾಲಿ, ಧ್ವನಿವರ್ಧಕ, ಸಮಾರಂಭ, ವಾಹನಗಳ ಬಳಕೆ ಸೇರಿದಂತೆ ಮತ್ತಿತರೆ ಚಟುವಟಿಕೆಗಳಿಗೆ ಅನುಮತಿ ನೀಡುವರು ಎಂದು ತಿಳಿಸಿದರು.

ಎಂಸಿಎಂಸಿ ಸಮಿತಿಯಿಂದ ಅನುಮತಿ : ಚುನಾವಣೆ ಸಂದರ್ಭದಲ್ಲಿ ವಿದ್ಯುನ್ಮಾನ ಮಾಧ್ಯಮ, ಡಿಜಿಟಲ್ ಮಾಧ್ಯಮ, ವಾಯ್ಸ್ ಮೆಸೇಜ್ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಜಾಹೀರಾತು ಹಾಕಲು ಬಯಸುವ ರಾಜಕೀಯ ಪಕ್ಷ ಅಥವಾ ಅಭ್ಯರ್ಥಿಗಳು ಅನುಸರಿಸಬೇಕಾದ ನಿಯಮಗಳ ಬಗ್ಗೆ ಚುನಾವಣಾ ಆಯೋಗ ಸ್ಪಷ್ಟ ಸೂಚನೆಯನ್ನು ನೀಡಿದ್ದು, ಯಾವುದೇ ಜಾಹೀರಾತುಗಳನ್ನು ಪ್ರಕಟಪಡಿಸುವ ಮುನ್ನ ಜಿಲ್ಲಾ ಮಟ್ಟದ ಎಂ.ಸಿ.ಎಂ.ಸಿ. ಸಮಿತಿಯಿಂದ ಕಡ್ಡಾಯವಾಗಿ ಕ್ಲಿಯರೆನ್ಸ್ ಪ್ರಮಾಣ ಪತ್ರ ಪಡೆದ ನಂತರವೇ ಬಿತ್ತರಿಸಬೇಕು.  ಇದಕ್ಕಾಗಿ ಆಯಾ ಪಕ್ಷ ಅಥವಾ ಅಭ್ಯರ್ಥಿಗಳು ನಿಗದಿತ ನಮೂನೆಯನ್ನು ಜಿಲ್ಲಾ ಪಂಚಾಯತ್ ಆವರಣದ ಸಂಪನ್ಮೂಲ ಕೇಂದ್ರ ಕಟ್ಟಡ, ಮೊದಲನೆ ಮಹಡಿ, ಇಲ್ಲಿ ಪ್ರಾರಂಭಿಸಲಾಗಿರುವ ಎಂಸಿಎಂಸಿ ವಿಭಾಗದಲ್ಲಿ ಉಚಿತವಾಗಿ ಪಡೆಯಬಹುದು.

ಅರ್ಜಿಯೊಂದಿಗೆ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ, ಪ್ರಕಟಿಸಲು ಉದ್ದೇಶಿಸಿರುವ ಜಾಹೀರಾತಿನ ಪ್ರತಿ, ಸಿ.ಡಿ. ಪೆನ್‍ಡ್ರೈವ್, ಸಿಡಿ ಯಲ್ಲಿ ಇರುವ ಭಾಷಣ ಅಥವಾ ಸಂದೇಶದ ಮುದ್ರಿತ ಪ್ರತಿಯನ್ನು ದೃಢೀಕರಿಸಿ ಎರಡು ಸೆಟ್‍ನೊಂದಿಗೆ ಲಗತ್ತಿಸಿ  ಅಭ್ಯರ್ಥಿ ಅಥವಾ ಅಭ್ಯರ್ಥಿಯಿಂದ ಅನುಮತಿ ಪಡೆದ ವ್ಯಕ್ತಿಗಳು ಸಲ್ಲಿಸಿದಲ್ಲಿ, ಅರ್ಜಿಯನ್ನು ಸಮಿತಿಯು ಪರಿಶೀಲಿಸಿ, ಕ್ಲಿಯರೆನ್ಸ್ ಪ್ರಮಾಣ ಪತ್ರ ನೀಡಲು ಕ್ರಮ ವಹಿಸಲಿದೆ.  ಎಂಸಿಎಂಸಿ ಸಮಿತಿಯಿಂದ ಕ್ಲಿಯರೆನ್ಸ್ ಪ್ರಮಾಣಪತ್ರ ಪಡೆಯದೆ ಯಾವುದೇ ಟಿ.ವಿ., ಕೇಬಲ್, ಇ-ಪೇಪರ್, ವೆಬ್‍ಪೋರ್ಟಲ್, ಯುಟ್ಯೂಬ್, ಫೇಸ್‍ಬುಕ್ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತು, ಸ್ಕ್ರೋಲ್ ಮೆಸೇಜ್ ಮತ್ತಿತರ ಜಾಹೀರಾತುಗಳನ್ನು ಪ್ರಸಾರ ಮಾಡುವಂತಿಲ್ಲ.  ತಪ್ಪಿದಲ್ಲಿ, ಚುನಾವಣಾ ಆಯೋಗದ ಸೂಚನೆಯಂತೆ ಕಾನೂನು ಕ್ರಮ ಕೈಗೊಳ್ಳಲಾಗುವುದು.  ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ರಾಜಕೀಯ ಪಕ್ಷಗಳು ಜಿಲ್ಲಾ ಆಡಳಿತದೊಂದಿಗೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿಕೊಂಡರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಇದ್ದರು.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಗ್ರೂಪ್-ಸಿ ಹುದ್ದೆಯ ಸ್ಪರ್ಧಾತ್ಮಕ ಪರೀಕ್ಷೆ, ನಿಷೇಧಾಜ್ಞೆ ಜಾರಿ : ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಆದೇಶ

ನಮ್ಮ ಎಕ್ಸ್‌ಪರ್ಟ್ ಪಿ.ಯು. ಕಾಲೇಜು : ಪ್ರಥಮ ಪಿ.ಯು.ಸಿ. ಪರೀಕ್ಷೆಯಲ್ಲಿ ಶೇ.ನೂರಕ್ಕೆ ನೂರರಷ್ಟು ಫಲಿತಾಂಶ…!