ಚಿತ್ರದುರ್ಗ. ಫೆ.19: ಛತ್ರಪತಿ ಶಿವಾಜಿ ಮಹಾರಾಜರು ಉತ್ತಮ ಆಡಳಿತ ಸುಧಾರಣಾ ನೀತಿಗಳನ್ನು ಜಾರಿಗೊಳಿಸುವ ಮೂಲಕ ಶ್ರೇಷ್ಠ ಆಡಳಿತಗಾರರಾಗಿದ್ದರು ಎಂದು ಉಪವಿಭಾಗಾಧಿಕಾರಿ ಡಾ.ವೆಂಕಟೇಶ್ ನಾಯ್ಕ್ ಹೇಳಿದರು.
ನಗರದ ತರಾಸು ರಂಗಮಂದಿರದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಣೆ ಸಮಾರಂಭದಲ್ಲಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ಶಿವಾಜಿ ಮಹಾರಾಜರ ಆಡಳಿತ ವ್ಯವಸ್ಥೆ ಬಹಳ ಪರಿಣಾಮಕಾರಿಯಾಗಿತ್ತು. ರಾಷ್ಟ್ರನಿರ್ಮಾಣ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಹಿಂದೂ ಧರ್ಮದ ಪರವಾಗಿ, ಸಮುದಾಯದ ರಕ್ಷಣೆಗೆಗಾಗಿ ಹೋರಾಡಿದ ಮಹನೀಯರು ಎಂದು ಹೇಳಿದರು.
ಶಿವಾಜಿ ಅವರು ತಾಯಿಗೆ ತಕ್ಕ ಮಗ, ಗುರುವಿಗೆ ತಕ್ಕ ಶಿಷ್ಯರಾಗಿ ತಮ್ಮ ಇಡೀ ಜೀವನವನ್ನು ಬಹಳ ಅರ್ಥಪೂರ್ಣವಾಗಿ ಬದುಕಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ. ಉತ್ತಮ ಹೋರಾಟಗಾರರಾಗಿದ್ದ ಶಿವಾಜಿ ಮಹಾರಾಜರು ಸಮಾಜಮುಖಿಯಾಗಿ, ರಾಷ್ಟ್ರ ನಿರ್ಮಾಣ ಹಾಗೂ ಸಮಾಜದ ಪರವಾಗಿ ಹೋರಾಡಿದ ರಾಜರಿಗೆ ರಾಜರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಿವಾಜಿ ಮಹಾರಾಜರ ತತ್ವಾದರ್ಶ, ಸಿದ್ದಾಂತ, ಹೋರಾಟದ ಗುಣಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಅವರ ಕೊಡುಗೆಗಳನ್ನು ಸ್ಮರಿಸುತ್ತಾ, ಅವುಗಳನ್ನು ನಮ್ಮ ಮಕ್ಕಳಿಗೆ, ಮುಂದಿನ ಪೀಳಿಗೆಗೆ ಕೊಂಡ್ಯೊಯುವ ಕೆಲಸ ಮಾಡೋಣ ಎಂದು ಹೇಳಿದರು.
ಚಿತ್ರದುರ್ಗ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಧ್ಯಾಪಕ ಡಾ.ಸಿ.ಚನ್ನಕೇಶವ ಮಾತನಾಡಿ, ಮಹನೀಯರ ಜಯಂತಿ ಜಾತಿಗೆ ಸೀಮಿತವಲ್ಲ. ಜಾತಿಯನ್ನು ದೂರ ಮಾಡಿ ಮಹನೀಯರ ವ್ಯಕ್ತಿತ್ವನ್ನು, ಗುಣ, ತತ್ವಾದರ್ಶಗಳನ್ನು ತಿಳಿದುಕೊಳ್ಳಬೇಕು ಎಂಬ ಸದುದ್ದೇಶದಿಂದ ಮಹನೀಯರ ಜಯಂತಿಗಳನ್ನು ಆಚರಿಸಲಾಗುತ್ತಿದ್ದು, ಜಾತಿಯನ್ನು ಮೀರಿ ಜಯಂತಿ ಆಚರಣೆ ಮಾಡಬೇಕಿದೆ. ಆಗ ಮಾತ್ರ ಮಹನೀಯರ ಜಯಂತಿ ಅರ್ಥಪೂರ್ಣವಾಗಲಿದೆ ಎಂದು ಅಭಿಪ್ರಾಯಪಟ್ಟರು.
16-17ನೇ ಶತಮಾನದಲ್ಲಿ ಜನಿಸಿದ ಛತ್ರಪತಿ ಶಿವಾಜಿ ಅವರು ಪ್ರಸ್ತುತ 21ನೇ ಶತಮಾನದಲ್ಲಿಯೂ ಸಹ ಅವರ ಜಯಂತಿ ಅಚರಿಸುತ್ತೇವೆ ಎಂದರೆ ಶಿವಾಜಿ ಮಹಾರಾಜರು ಮಾಡಿದ ತ್ಯಾಗ, ಬಲಿದಾನ, ಶೌರ್ಯ ನೆನಪಿಸಿಕೊಳ್ಳಬೇಕಿದೆ. ಮರಾಠ ಸಾಮ್ರಾಜ್ಯದ ಸಂಸ್ಥಾಪಕ, ಹಿಂದೂ ಧರ್ಮದ ರಕ್ಷಕ ಶಿವಾಜಿ ಅವರು ಕಷ್ಟದಲ್ಲಿರುವ ಜನರ ಕಲ್ಯಾಣಕ್ಕಾಗಿ ಬದುಕಿ ಬಂದ ಮಹಾನ್ ವ್ಯಕ್ತಿ ಶಿವಾಜಿ ಎಂದರೆ ತಪ್ಪಾಗಲಾರದು ಎಂದು ಹೇಳಿದರು.
ಶಿವಾಜಿ ತಾಯಿ ಜೀಜಾಬಾಯಿ ಅವರು ಸದ್ಗುಣ ಸಂಪನ್ನ ಮಹಿಳೆ. ದೈವಭಕ್ತೆ, ವಿದ್ಯಾವಂತೆ ಹಾಗೂ ಆಳವಾದ ಧಾರ್ಮಿಕ ಮತ್ತು ಮಹತ್ವಾಕಾಂಕ್ಷೆಯ ಮಹಿಳೆಯಾಗಿದ್ದು, ಶಿವಾಜಿಯ ಮೇಲೆ ಗಾಢವಾದ ಪ್ರಭಾವ ಬೀರಿದಳು. ಶಿವಾಜಿಗೆ ಚಿಕ್ಕ ವಯಸ್ಸಿನಲ್ಲಿ ರಾಮಾಯಣ, ಮಹಾಭಾರತದ ಕಥೆಗಳನ್ನು, ಪುರಾಣಗಳನ್ನು ಹೇಳುತ್ತಾ ಅವನಲ್ಲಿ ಉದಾತ್ತ ಆದರ್ಶಗಳನ್ನು ಬಿತ್ತಿದಳು. ಹಿಂದೂ ಧರ್ಮ ಹಾಗೂ ಸಂಸ್ಕøತಿಯ ಬಗ್ಗೆ ಅಭಿಮಾನ ಮೂಡಿಸಿದಳು. ಎಂ.ಜಿ. ರಾನಡೆಯವರ ಪ್ರಕಾರ ಮಹಾಪುರುಷರ ಜೀವನ ರೂಪಿಸುವಲ್ಲಿ ತಾಯಿಯವರ ಪಾತ್ರ ಅಧಿಕವಾಗಿದ್ದಲ್ಲಿ, ಶಿವಾಜಿಯ ಜೀವನ ರೂಪಿಸುವಲ್ಲಿ ಜೀಜಾಬಾಯಿಯವರ ಪಾತ್ರ ಹಿರಿದಾದುದು’ ಎಂದು ಹೇಳಿದ್ದಾರೆ ಎಂದರು.
ಗ್ರಾಂಟ್ ಡಫ್ ಎಂಬುವವು ಬರೆದಂತೆ “ಶಿವಾಜಿಯ ಧೈರ್ಯ, ಸಾಹಸ ಪ್ರವೃತ್ತಿ, ಅನನ್ಯ ರಾಷ್ಟ್ರಪ್ರೇಮ, ಹಿಂದೂ ಸಂಸ್ಕøತಿಯ ರಕ್ಷಕನಾಗಿ, ಹಿಂದೂಗಳ ಅವತಾರ ಪುರುಷನಾಗಿ ಅವನ ಚರಿತ್ರೆಯು ಹಿಂದೂಗಳಿಗೆ ಒಂದು ವೀರ ಕಾವ್ಯವಾಗಿದೆ ಎಂದು ಬಣ್ಣಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ, ಚಿತ್ರದುರ್ಗ ಮರಾಠ ವಿದ್ಯಾವರ್ಧಕ ಸಂಘ ಅಧ್ಯಕ್ಷ ಸುರೇಶ್ ರಾವ್ ಜಾದವ್, ಕಾರ್ಯದರ್ಶಿ ಜೆ.ಗೋಪಾಲರಾವ್ ಜಾದವ್, ಜೀಜಾಮಾತಾ ಮಹಿಳಾ ಮಂಡಳಿ ಜಿ.ಉಷಾಬಾಯಿ ಜಾದವ್, ಕಾರ್ಯದರ್ಶಿ ಶಾರದಾ ಬಾಯಿ ಸೇರಿದಂತೆ ಮರಾಠ ಸಮಾಜದ ಮುಖಂಡರು ಇದ್ದರು. ರಂಗನಿರ್ದೇಶಕ ಕೆಪಿಎಂ ಗಣೇಶಯ್ಯ ನಿರೂಪಿಸಿದರು. ತ್ರಿವೇಣಿ ಮತ್ತು ಸಂಗಡಿಗರು ಗೀತಗಾಯನ ನಡೆಸಿಕೊಟ್ಟರು.

