ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್.10 : ಸತ್ಯ, ಅಹಿಂಸೆ, ತ್ಯಾಗದ ಮೂಲಕ ಗಾಂಧಿ ಮಹಾತ್ಮರೆನಿಸಿಕೊಂಡರು ಎಂದು ಖ್ಯಾತ ನ್ಯಾಯವಾದಿ ಹಾಗೂ ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಗೌರವಾಧ್ಯಕ್ಷ ಬಿ.ಕೆ.ರಹಮತ್‍ವುಲ್ಲಾ ಹೇಳಿದರು.
ಮನೆಯಂಗಳದಲ್ಲಿ ಸಾಹಿತ್ಯ ಸಂಸ್ಕøತಿ ವೇದಿಕೆ ವತಿಯಿಂದ ಚಳ್ಳಕೆರೆ ಗೇಟ್ ಹತ್ತಿರ ವಿಘ್ನೇಶ್ವರ ಲೇಔಟ್‍ನಲ್ಲಿರುವ ಎಂ.ಹೊನ್ನೂರ್ ಸಾಹೇಬ್‍ರವರ ನಿವಾಸದಲ್ಲಿ ಗಾಂಧಿಜಯಂತಿ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಮರೆಯಬಾರದ ಮಹಾತ್ಮ ಉಪನ್ಯಾಸ ಮತ್ತು ಕವಿಗೋಷ್ಠಿ ಉದ್ಗಾಟಿಸಿ ಮಾತನಾಡಿದರು.
ಹನ್ನೆರಡನೆ ಶತಮಾನದ ಬಸವಣ್ಣ, ಬುದ್ದ, ಏಸುಕ್ರಿಸ್ತ, ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಇವರುಗಳೆಲ್ಲಾ ಸಮ ಸಮಾಜಕ್ಕಾಗಿ ಹೋರಾಡಿದಂತ ಮಹಾತ್ಮರು. ದೇಶವನ್ನು ಬ್ರಿಟೀಷರ ಗುಲಾಮಗಿರಿಯಿಂದ ಬಿಡಿಸಿಕೊಳ್ಳುವುದಕ್ಕಾಗಿ ಮಹಾತ್ಮಗಾಂಧಿ ಸತ್ಯ ಮತ್ತು ಅಹಿಂಸೆಯ ಮೂಲಕ ಹೋರಾಡಿದರು. ಅಂತಹ ಮಹಾತ್ಮನನ್ನು ಗುಂಡಿಕ್ಕಿ ಕೊಂದ ಗೋಡ್ಸೆಯನ್ನು ವೈಭವಿಕರಿಸುತ್ತಿರುವುದು ಮನಸ್ಸಿಗೆ ಅತೀವ ನೋವುಂಟು ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು.
ದಕ್ಷಿಣ ಆಫ್ರಿಕಾದಲ್ಲಿ ಗಾಂಧಿ ಕರಿಯ ಮತ್ತು ಬಿಳಿಯ ಎನ್ನುವ ವರ್ಣಭೇದದ ವಿರುದ್ದ ಹೋರಾಡಿದರು. ದಯೆಯೆ ಧರ್ಮದ ಮೂಲವಯ್ಯ ಎನ್ನುವುದು ಬಸವಣ್ಣನವರ ಸಂದೇಶವಾಗಿತ್ತು. ಬುದ್ದ, ಏಸುಕ್ರಿಸ್ತ ಇವರುಗಳು ಶಾಂತಿಯ ಧ್ಯೋತಕವಾಗಿದ್ದರು. ಇಂತಹ ಮಹಾತ್ಮರುಗಳ ಫೋಟೋಗಳೆಲ್ಲಾ ಮುಂದೊಂದು ದಿನ ಮರೆಯಾಗಿ ಗಾಂಧಿಯನ್ನು ಕೊಂದ ಗೋಡ್ಸೆಯ ಭಾವಚಿತ್ರ ಬಂದರೂ ಬರಬಹುದು. ಸಮಾನತೆಗಾಗಿ ಹೋರಾಡಿದ ಎಲ್ಲಾ ಮಹಾನ್‍ಪುರುಷರ ಜೀವನ ದುರಂತದಲ್ಲಿ ಅಂತ್ಯಕಂಡಿತು ಎಂದು ವಿಷಾಧಿಸಿದರು.
ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಡಾ.ಹೇಮಂತರಾಜು ಎಸ್.ಎನ್. ಮಾತನಾಡಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಪ್ರಾಣ ತ್ಯಾಗ ಮಾಡಿದ ಮಹಾತ್ಮಗಾಂಧಿ ಹಿಂದಿಗಿಂತಲೂ ಈಗಿನ ಕಾಲಕ್ಕೆ ಹೆಚ್ಚು ಪ್ರಸ್ತುತ. ಹೃದಯವಂತಿಕೆಯಿಂದ ಗಾಂಧಿ ಜಗತ್ತನ್ನು ಗೆದ್ದರು. ವಿರೋಧಾಭಾಸ, ವೈರುದ್ದವನ್ನು ತುಂಬಿಕೊಂಡಿದ್ದರು. ಮನುಕುಲವನ್ನು ಮೇಲೆತ್ತಲು ಹೊರಟ ಮಹಾತ್ಮಗಾಂಧಿ ಹಠವಾದಿಯಾಗಿದ್ದರು. ಪ್ರತಿಪಾದನೆಯ ಮೂಲಾಂಶ ಇಲ್ಲದಿದ್ದರೆ ಗಾಂಧಿಯನ್ನು ಅರ್ಥಮಾಡಿಕೊಳ್ಳುವುದು ಕಷ್ಟ ಎಂದು ಹೇಳಿದರು.
ಭಾರತವನ್ನು ಒಗ್ಗೂಡಿಸುವ ತಾಕತ್ತು ಗಾಂಧಿಯನ್ನು ಬಿಟ್ಟರೆ ಬೇರೆ ಯಾರಲ್ಲಿಯೂ ಇರಲಿಲ್ಲ. ಗಾಂಧಿ ಒಬ್ಬ ಪಕೀರ, ಮಾಂತ್ರಿಕ ಶಕ್ತಿಯಾಗಿದ್ದರು ಎಂದು ಬಣ್ಣಿಸಿದರು.
ಎಂ.ಹೊನ್ನೂರ್ ಸಾಹೇಬ್ ಮಾತನಾಡಿ ಬ್ರಿಟೀಷರ ವಿರುದ್ದ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಪ್ರಾಣ ತ್ಯಾಗ ಮಾಡಿದ ರಾಷ್ಟ್ರಪಿತ ಮಹಾತ್ಮಗಾಂಧಿಜಿಯವರ ಆದರ್ಶಗಳನ್ನು ಎಲ್ಲರೂ ಜೀವನದಲ್ಲಿ ಪರಿಪಾಲನೆ ಮಾಡಬೇಕೆಂದರು.
ಮನೆಯಂಗಳದಲ್ಲಿ ಸಾಹಿತ್ಯ ಸಂಸ್ಕøತಿ ವೇದಿಕೆ ಅಧ್ಯಕ್ಷೆ ಚಾಂದಿನಿ ಖಲೀದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಸತ್ಯ ಮತ್ತು ಅಹಿಂಸೆಯಿಂದ ಪರಿವರ್ತನೆ ತಂದಂತ ಗಾಂಧಿ ಸರಳ ಸ್ವಭಾವದ ಅದ್ಬುತ ಚೇತನ. ಮೌನದಿಂದಲೆ ಬ್ರಿಟೀಷರನ್ನು ದೇಶದಿಂದ ಓಡಿಸಿ ಸ್ವಾತಂತ್ರ್ಯ ತಂದು ಕೊಟ್ಟರು. ಅ.2 ಗಾಂಧಿ ಜಯಂತಿಯಂದು ಮಾತ್ರ ಗಾಂಧಿಯನ್ನು ನೆನಪು ಮಾಡಿಕೊಂಡರೆ ಸಾಲದು ಪ್ರತಿಯೊಬ್ಬರು ಜೀವನದಲ್ಲಿ ಗಾಂಧಿಯಂತೆ ದೇಶಭಕ್ತಿಯನ್ನು ಮೈಗೂಡಿಸಿಕೊಳ್ಳಬೇಕೆಂದು ತಿಳಿಸಿದರು.
ಭೌತಶಾಸ್ತ್ರ ಉಪನ್ಯಾಸಕಿ ಶ್ರೀಮತಿ ರೇಣುಕಾ ಪ್ರಕಾಶ್ ಮಾತನಾಡಿ ಮನೆಯಂಗಳದಲ್ಲಿ ಸಾಹಿತ್ಯ ಸಂಸ್ಕøತಿ ವೇದಿಕೆ ವಿಶೇಷ ಪರಿಕಲ್ಪನೆಯಿಟ್ಟುಕೊಂಡು ಇಂತಹ ಕಾರ್ಯಕ್ರಮಗಳನ್ನು ನೆರೆವೇರಿಸುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಮುಂದಿನ ದಿನಗಳಲ್ಲಿ ಪ್ರತಿ ಮನೆ ಮನೆಗೆ ಹಳ್ಳಿ ಹಳ್ಳಿಗಳಲ್ಲಿಯೂ ತಲುಪಿ ಎಲ್ಲರ ಮನ ಮುಟ್ಟುವಂತಾಗಬೇಕು ಎಂದು ಹಾರೈಸಿದರು.
ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಸಂಸ್ಥಾಪಕ ಅಧ್ಯಕ್ಷೆ ದಯಾ ಪುತ್ತೂರ್ಕರ್ ಮಾತನಾಡುತ್ತ ಚಾಂದಿನಿ ಖಲೀದ್‍ರವರ ಮನೆಯಂಗಳದಲ್ಲಿ ಕಾರ್ಯಕ್ರಮ ಮನಸ್ಸಿಗೆ ಖುಷಿ ಕೊಟ್ಟಿದೆ. ಇದರಿಂದ ಸಾಹಿತ್ಯ, ಕಲೆ, ಸಂಸ್ಕøತಿಯನ್ನು ಎಲ್ಲರಿಗೂ ಪರಿಚಯಿಸಿದಂತಾಗುತ್ತದೆ. ಮನೆ ಮನೆಯಲ್ಲಿ ಸಾಹಿತ್ಯವಾಗಲಿ ಎನ್ನುವುದು ನಮ್ಮ ಉದ್ದೇಶ ಎಂದರು.
ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಅಧ್ಯಕ್ಷ ಶಫಿವುಲ್ಲಾ(ಕುಟೀಶ) ವೇದಿಕೆಯಲ್ಲಿದ್ದರು.
ಶ್ರೀಮತಿ ಶೋಭಾ ಶ್ರೀಮತಿ ಭಾರತಿ ಇವರುಗಳು ಪ್ರಾರ್ಥಿಸಿದರು. ಶ್ರೀಮತಿ ಮೀರಾ ನಾಡಿಗ್ ಸ್ವಾಗತಿಸಿದರು. ಡಾ.ಬಸವರಾಜ್ ಹರ್ತಿ ವಂದಿಸಿದರು. ಪ್ರವೀಣ್ ಬೆಳಗೆರೆ ನಿರೂಪಿಸಿದರು.
ತಿಪ್ಪಮ್ಮ ಕೆ.ಎಸ್. ಸತೀಶ್‍ಕುಮಾರ್, ಶೋಭಾ ಮಲ್ಲಿಕಾರ್ಜುನ್, ಸಾದತ್, ಭಾರತಿ ಎಂ.ಡಿ. ಮೀರಾನಾಡಿಗ್, ನಿರ್ಮಲ ಭಾರದ್ವಾಜ್, ಶಾಂತಮ್ಮ, ಜಯಪ್ರಕಾಶ್ ಇವರುಗಳು ಕವನಗಳನ್ನು ವಾಚಿಸಿದರು.