ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜನವರಿ.24 : ಹಿಂದುಳಿದ ಶೋಷಿತ ಸಮುದಾಯದ ಜಾಗೃತಿ ಸಮಾವೇಶಕ್ಕೆ 28 ರಂದು ನಗರಕ್ಕೆ ಆಗಮಿಸುತ್ತಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಎದುರು ಬಲಪ್ರದರ್ಶನ ತೋರಿಸಬೇಕಾಗಿರುವುದರಿಂದ ದಲಿತರು, ಹಿಂದುಳಿದವರು, ಶೋಷಿತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕಾಂಗ್ರೆಸ್ ಮುಖಂಡ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸ್ಪರ್ಧಾಕಾಂಕ್ಷಿ ಜೆ.ಜೆ.ಹಟ್ಟಿಯ ಡಾ.ಬಿ.ತಿಪ್ಪೇಸ್ವಾಮಿ ಮನವಿ ಮಾಡಿದರು.
ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪ್ರವಾಸಿ ಮಂದಿರದಲ್ಲಿ ಬುಧವಾರ ಕರೆದಿದ್ದ ಸಭೆಯಲ್ಲಿ
ಭಾಗವಹಿಸಿ ಮಾತನಾಡಿದರು.
ಲೋಕಸಭಾ ಚುನಾವಣೆ ಹತ್ತಿರದಲ್ಲಿರುವುದರಿಂದ ಶಕ್ತಿ ಪ್ರದರ್ಶಿಸಬೇಕಿದೆ. 25 ರಂದು ಬೆಳಿಗ್ಗೆ 10 ಗಂಟೆಗೆ ಕಾಂಗ್ರೆಸ್ ಕಚೇರಿಯಿಂದ ಬೈಕ್ ರ್ಯಾಲಿ ಹೊರಟು ನಗರದಲ್ಲೆಲ್ಲಾ ಸಂಚರಿಸಲಿದೆ. ಕನಿಷ್ಟ ಐದು ನೂರು ಬೈಕ್‍ಗಳು ರ್ಯಾಲಿಯಲ್ಲಿ ಪಾಲ್ಗೊಳ್ಳಬೇಕು. ಕಾಂತರಾಜು ಆಯೋಗದ ವರದಿ ಜಾರಿಗೆ ಮುಂದಾಗಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬೆಂಬಲವಾಗಿ ನಿಲ್ಲೋಣ. ಒಳಮೀಸಲಾತಿ ವರದಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಿರುವುದರಿಂದ ಶೋಷಿತ ಸಮುದಾಯಗಳ ಜಾಗೃತಿ ಸಮಾವೇಶಕ್ಕೆ ಆಗಮಿಸುತ್ತಿರುವ ಮುಖ್ಯಮಂತ್ರಿಯನ್ನು ಸನ್ಮಾನಿಸೋಣ ಇದಕ್ಕೆ ನಿಮ್ಮೆಲ್ಲರ ಸಹಕಾರ ಬೇಕು ಎಂದು ಕೋರಿದರು.
ಜ.27 ರಂದು ಮತ್ತೆ ಬೈಕ್ ರ್ಯಾಲಿ ನಡೆಸಿ ಶೋಷಿತ ಸಮುದಾಯಗಳ ಜಾಗೃತಿ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸುವಂತೆ ಅರಿವು ಮೂಡಿಸೋಣ. ಮೊಳಕಾಲ್ಮುರುವನಿಂದ ಬಿ.ಜಿ.ಕೆರೆಗೆ ಪಾದಯಾತ್ರೆ ದಿನಕ್ಕೆ ಹದಿನೈದು ಕಿ.ಮೀ. ಒಂದು ದಿನ ವಿಶ್ರಾಂತಿ ಪಡೆದು ನಾಯಕನಹಟ್ಟಿಗೆ ಪಾದಯಾತ್ರೆ ಹೋಗಲಿದೆ. ಐಮಂಗಲ ಹೋಬಳಿ, ಪರಶುರಾಂಪುರ, ಧರ್ಮಪುರ, ಹೊಳಲ್ಕೆರೆ, ಹೊಸದುರ್ಗದಲ್ಲಿ ಪಾದಯಾತ್ರೆ ನಡೆಸಿ ಈ ಬಾರಿಯ ಪಾರ್ಲಿಮೆಂಟ್ ಚುನಾವಣೆಯಲ್ಲಿ ಸ್ಥಳೀಯ ಸ್ಪರ್ಧಾಕಾಂಕ್ಷಿ ನನಗೆ ಟಿಕೇಟ್ ನೀಡುವಂತೆ ಹೈಕಮಾಂಡ್‍ಗೆ ಒತ್ತಾಯಿಸೋಣ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚೌಳೂರು ಪ್ರಕಾಶ್, ತುರುವನೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಡಿ.ಆರ್.ಮಂಜುನಾಥ್, ಗ್ರಾಮ ಪಂಚಾಯಿತಿ ಸದಸ್ಯ ಕೆ.ಮಂಜುನಾಥ್, ಕಿರಣ್‍ಯಾದವ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಿರೇಗುಂಟನೂರು ಶಿವಣ್ಣ, ರಾಜುಯಾದವ್, ರಾಜಶೇಖರ್, ಮಲ್ಲೇಶ್, ಬಿ.ರಾಜಣ್ಣ ಇನ್ನು ಅನೇಕರು ಸಭೆಯಲ್ಲಿ ಭಾಗವಹಿಸಿದ್ದರು.