ವರದಿ ಮತ್ತು ಫೋಟೋ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ, ಸುದ್ದಿಒನ್, (ಅ.07): ಪಕ್ಷದ ವರಿಷ್ಠರು ನನ್ನ ಮೇಲೆ ನಂಬಿಕೆಯಿಟ್ಟು ಜವಾಬ್ದಾರಿ ನೀಡಿದ್ದಾರೆ. ಜಿಲ್ಲೆಯಾದ್ಯಂತ ಪ್ರವಾಸ ಮಾಡಿ ಪಕ್ಷವನ್ನು ಸಂಘಟಿಸುವುದಾಗಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಬಿ.ಕಾಂತರಾಜ್ ಭರವಸೆ ನೀಡಿದರು.
ಜೆಡಿಎಸ್.ಉಪಾಧ್ಯಕ್ಷರಾಗಿ ನೇಮಕಗೊಂಡಿರುವ ಬಿ.ಕಾಂತರಾಜ್‍ರವರು ಜೆಡಿಎಸ್ ಕಚೇರಿಯಲ್ಲಿ ಶುಕ್ರವಾರ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಜೆಡಿಎಸ್.ವರಿಷ್ಠರಾದ ಹೆಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇವರುಗಳು ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದ ನನ್ನನ್ನು ರಾಜ್ಯ ಉಪಾಧ್ಯಕ್ಷನಾಗಿ ನೇಮಕಗೊಳಿಸಿ ಅಪಾರ ನಿರೀಕ್ಷೆಯಿಟ್ಟುಕೊಂಡಿದ್ದಾರೆ. ಜನತಾ ಪರಿವಾರವೆಂದರೆ ದೇಶದಲ್ಲಿಯೇ ಹೆಸರುಗಳಿಸಿರುವ ಪಕ್ಷ. ಕುಮಾರಣ್ಣ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ನೀಡಿದ ಯೋಜನೆಗಳನ್ನು ಜನತೆಗೆ ತಲುಪಿಸಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಎಲ್ಲರೂ ಸೇರಿ ಕೆಲಸ ಮಾಡೋಣ ಎಂದು ತಿಳಿಸಿದರು.
ಇಪ್ಪತ್ತು ವರ್ಷದ ನಂತರ ರಾಜ್ಯದಲ್ಲಿ ಜೆಡಿಎಸ್.ಅಧಿಕಾರ ಹಿಡಿಯಲು ಕಾಲ ಪಕ್ವವಾಗಿದೆ. ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಪಕ್ಷದ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ. ನಾಯಕ ಸಮುದಾಯಕ್ಕೆ ಜೆಡಿಎಸ್.ಪಕ್ಷ ಹಾಗೂ ವೈಯಕ್ತಿಕವಾಗಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹಾಗೂ ಹೆಚ್.ಡಿ.ಕುಮಾರಸ್ವಾಮಿ ಇವರುಗಳ ಕೊಡುಗೆಯಿರುವುದರಿಂದ ವರಿಷ್ಠರು ನನ್ನ ಮೇಲೆ ಇಟ್ಟಿರುವ ನಿರೀಕ್ಷೆಗೆ ತಕ್ಕಂತೆ ಪಕ್ಷವನ್ನು ಸಂಘಟಿಸುತ್ತೇನೆಂಬ ವಿಶ್ವಾಸ ವ್ಯಕ್ತಪಡಿಸಿದರು.
ಜೆಡಿಎಸ್.ಜಿಲ್ಲಾಧ್ಯಕ್ಷ ಡಿ.ಯಶೋಧರ ಬಿ.ಕಾಂತರಾಜ್‍ವರಿಗೆ ನೇಮಕಾತಿ ಪತ್ರ ವಿತರಿಸಿ ಮಾತನಾಡುತ್ತ ಪಕ್ಷದ ವರಿಷ್ಠರು ನಮ್ಮ ಜಿಲ್ಲೆಗೆ ಸಮರ್ಥ ನಾಯಕತ್ವ ನೀಡುವ ಉದ್ದೇಶದಿಂದ ಬಿ.ಕಾಂತರಾಜ್‍ರವರನ್ನು ಜೆಡಿಎಸ್.ರಾಜ್ಯ ಉಪಾಧ್ಯಕ್ಷರನ್ನಾಗಿ ನೇಮಕಗೊಳಿಸಿದ್ದಾರೆ. ಈಗಿನಿಂದಲೇ ಪಕ್ಷದ ನಾಯಕತ್ವ ವಹಿಸಿಕೊಂಡು ಮುಂದಿನ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ತಕ್ಕಪಾಠ ಕಲಿಸಿ ಜಿಲ್ಲೆಯಲ್ಲಿ ಹೊಸ ಸಂಚಲನ ಸೃಷ್ಠಿಸುವಂತೆ ಸಲಹೆ ನೀಡಿದರು.
ರಾಜಕೀಯ ಮೀಸಲಾತಿ ಸಿಕ್ಕಿದ್ದಕ್ಕಾಗಿ ರಾಜ್ಯದಲ್ಲಿ ಹದಿನೈದರಿಂದ ಇಪ್ಪತ್ತು ನಾಯಕ ಜನಾಂಗದ ಶಾಸಕರುಗಳಿದ್ದಾರೆ. ಇಲ್ಲದಿದ್ದರೆ ನಾಯಕ ಸಮಾಜವನ್ನು ಯಾರು ಕೇಳುತ್ತಿರಲಿಲ್ಲ. ಮೈಚಳಿ ಬಿಟ್ಟು ಹೊರಗೆ ಬನ್ನಿ ಸರ್ಕಾರಿ ನೌಕರಿಯಲ್ಲಿದ್ದ ಟಿ.ರಘುಮೂರ್ತಿ ಚಳ್ಳಕೆರೆ ವಿಧಾನಸಭೆಯಿಂದ ಸ್ಪರ್ಧಿಸಿ ಶಾಸಕರಾಗಿದ್ದಾರೆಂದರೆ ನೀವು ಏಕೆ ಶಾಸಕರಾಗಬಾರದು, ಚಳ್ಳಕೆರೆ, ಮೊಳಕಾಲ್ಮುರು ಕ್ಷೇತ್ರದಿಂದಲಾದರೂ ಸ್ಪರ್ಧಿಸಿ. ಚಿತ್ರದುರ್ಗದಿಂದ ಸ್ಪರ್ಧಿಸಲು ಯಾರದು ಅಡ್ಡಿಯಿಲ್ಲ. ಒಟ್ಟಾರೆ ನೀವು ಶಾಸಕರಾಗುವುದನ್ನು ನೋಡುವ ಆಸೆ ನಮ್ಮೆಲ್ಲರದು ಎಂದು ಬಿ.ಕಾಂತರಾಜ್‍ರವರನ್ನು ಹಾರೈಸಿದರು.
ಪಕ್ಷ ನಿಮ್ಮೊಟ್ಟಿಗಿದೆ. ಜಿಲ್ಲೆಯನ್ನು ನಾಯಕರ ಭದ್ರಕೋಟೆಯನ್ನಾಗಿ ಮಾಡುವ ಹೊಣೆಗಾರಿಕೆಯನ್ನು ಪಕ್ಷದ ವರಿಷ್ಠರು ನಿಮ್ಮ ಹೆಗಲಿಗೆ ಹಾಕಿದ್ದಾರೆ. ಕ್ರಿಯಾಶೀಲರಾಗಿ, ಉತ್ಸಾಹಿಗಳಾಗಿ ದಿಟ್ಟತನದಿಂದ ಕೆಲಸ ಮಾಡಿ ಪಕ್ಷ ನಿಮ್ಮೊಟ್ಟಿಗಿದೆ ಎಂದು ತಾಕೀತು ಮಾಡಿದರು.
ಜೆಡಿಎಸ್.ರಾಜ್ಯ ಕಾರ್ಯದರ್ಶಿ ಮಠದಹಟ್ಟಿ ವೀರಣ್ಣ, ಜಿಲ್ಲಾ ಕಾರ್ಯಾಧ್ಯಕ್ಷ ಜಿ.ಬಿ.ಶೇಖರ್, ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಡಿ.ಗೋಪಾಲಸ್ವಾಮಿ ನಾಯಕ, ಚಿತ್ರದುರ್ಗ ತಾಲ್ಲೂಕು ಅಧ್ಯಕ್ಷ ತಿಮ್ಮಣ್ಣ, ಹಿರಿಯೂರು ತಾಲ್ಲೂಕು ಅಧ್ಯಕ್ಷ ಹನುಮಂತರಾಯಪ್ಪ, ಹೊಳಲ್ಕೆರೆ ತಾಲ್ಲೂಕು ಅಧ್ಯಕ್ಷ ಪರಮೇಶ್ವರಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಗೀತಮ್ಮ, ನಗರಸಭೆ ಸದಸ್ಯ ನಸ್ರುಲ್ಲಾ, ಮಾಜಿ ಸದಸ್ಯ ತಿಪ್ಪೇಸ್ವಾಮಿ, ಚಂದ್ರಶೇಖರ್, ಮೆದೇಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವಿಜಯಕುಮಾರ್, ಜಾನುಕೊಂಡ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಿಜಲಿಂಗಪ್ಪ, ಗುರುಸಿದ್ದಪ್ಪ ಜೆ.ಎನ್.ಕೋಟೆ. ಕಾಟಿಹಳ್ಳಿ ಕರಿಯಪ್ಪ ಇನ್ನು ಮೊದಲಾದವರು ವೇದಿಕೆಯಲ್ಲಿದ್ದರು.
ಮದಕರಿನಾಯಕ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಸಂದೀಪ್, ಸೂರಪ್ಪ, ನಗರಸಭೆ ಮಾಜಿ ಸದಸ್ಯ ಈ.ಮಂಜುನಾಥ್ ಬಿ.ಕಾಂತರಾಜ್‍ರವರನ್ನು ಅಭಿನಂದಿಸಿದರು. ಜೆಡಿಎಸ್.ವಿದ್ಯಾರ್ಥಿ ಘಟಕದ ಅಬ್ಬು, ಪ್ರಸನ್ನ ಪೊಲೀಸ್ ಭೇಟೆ ಸೇರಿದಂತೆ ಅಪಾರ ಅಭಿಮಾನಿಗಳು ಅಭಿನಂದನಾ ಸಮಾರಂಭದಲ್ಲಿ ಹಾಜರಿದ್ದರು.