ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.14 : ಭದ್ರಾಮೇಲ್ದಂಡೆ ಯೋಜನೆಯನ್ನು ಶೀಘ್ರವಾಗಿ ಜಾರಿಗೊಳಿಸುವಂತೆ ಜಿಲ್ಲಾ ಪಂಚಾಯಿತಿ ಎದುರು ಕೇಂದ್ರ ಸರ್ಕಾರದ ವಿರುದ್ದ ಕಳೆದ ಹತ್ತು ದಿನಗಳಿಂದ ಧರಣಿ ನಡೆಸುತ್ತಿರುವ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ, ಅಖಂಡ ಕರ್ನಾಟಕ ರೈತ ಸಂಘ, ಜನಪರ, ಪ್ರಗತಿಪರ, ದಲಿತಪರ ಸಂಘಟನೆಗಳಿಂದ ಚಳ್ಳಕೆರೆ ಗೇಟ್‍ನಲ್ಲಿ ಬುಧವಾರ ಸಾರ್ವಜನಿಕ ಜಾಗೃತಿ ಸಭೆ ನಡೆಯಿತು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ ಸಭೆಯನ್ನುದ್ದೇಶಿಸಿ ಮಾತನಾಡುತ್ತ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬದ್ದತೆಯಿಂದ ಕೆಲಸ ಮಾಡಿ ಪಾರ್ಲಿಮೆಂಟ್ ಚುನಾವಣೆಯೊಳಗೆ ಜಿಲ್ಲೆಗೆ ಭದ್ರಾಮೇಲ್ದಂಡೆ ಯೋಜನೆಯಿಂದ ನೀರು ಹರಿಸದಿದ್ದರೆ ಹಳ್ಳಿ ಹಳ್ಳಿಗೆ ತಿರುಗಿ ಬಿಜೆಪಿ. ವಿರುದ್ದ ಮತ ಚಲಾಯಿಸುವಂತೆ ಜನತೆಯಲ್ಲಿ ಜಾಗೃತಿ ಮೂಡಿಸಿ ಅಧಿಕಾರದಿಂದ ತೊಲಗಿಸಲಾಗುವುದೆಂದು ಎಚ್ಚರಿಕೆ ನೀಡಿದರು.
ಸುಳ್ಳು ಭರವಸೆಗಳನ್ನು ನೀಡಿ ಎರಡನೆ ಬಾರಿಗೆ ದೇಶದ ಪ್ರಧಾನಿಯಾಗಿರುವ ನರೇಂದ್ರಮೋದಿ ಕೈಗೊಂಡ ಹದಿನಾಲ್ಕು ತೀರ್ಮಾನಗಳು ಹುಸಿಯಾಗಿವೆ. ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿಗೆ ಲಕ್ಷಾಂತರ ಮಂದಿ ಮನೆ, ಜಮೀನುಗಳನ್ನು ಕಳೆದುಕೊಂಡು ನಿರ್ಗತಿಕರಾದಾಗ ಮಾನವೀಯತೆಯಿಂದಲಾದರು ಪ್ರಧಾನಿ ಬಂದು ಕಷ್ಟ ಕೇಳಲಿಲ್ಲ. ರಾಮನ ಹೆಸರಿನಲ್ಲಿ ರಾಜಕಾರಣ ಮಾಡುವುದನ್ನು ಬಿಟ್ಟು ಬರಗಾಲಕ್ಕೆ ಸಿಲುಕಿರುವ ಚಿತ್ರದುರ್ಗ ಜಿಲ್ಲೆಯ ರೈತರು ಜನಸಾಮಾನ್ಯರನ್ನು ಸಂಕಷ್ಟದಿಂದ ಪಾರು ಮಾಡಲಿ. ಹಿರಿಯೂರಿನ ವಾಣಿವಿಲಾಸ ಸಾಗರಕ್ಕೆ ಭದ್ರೆ ನೀರು ಹರಿಯಬೇಕು.
ಕೇಂದ್ರ ಮಂತ್ರಿ ಎ.ನಾರಾಯಣಸ್ವಾಮಿ ಹಾಗೂ ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ಇವರುಗಳು ಧರಣಿ ನಡೆಯುತ್ತಿರುವ ಸ್ಥಳಕ್ಕೆ ಆಗಮಿಸಿ ಕಣ್ಣೊರೆಸುವ ಮಾತುಗಳನ್ನಾಡಿದರೆ ವಿನಃ ಕೇಂದ್ರದಿಂದ ಐದು ಸಾವಿರದ ಮುನ್ನೂರು ಕೋಟಿ ರೂ.ಗಳನ್ನು ಬಿಡುಗಡೆಗೊಳಿಸುವ ಯಾವ ಭರವಸೆಯನ್ನು ನೀಡಲಿಲ್ಲ. ಪ್ರಧಾನಿ ಮೋದಿ ಎದುರು ನಿಂತು ಜಿಲ್ಲೆಯ ಸಮಸ್ಯೆಗಳನ್ನು ಮನವರಿಕೆ ಮಾಡುವ ತಾಕತ್ತು ಉಳಿಸಿಕೊಂಡಿಲ್ಲ. ಇಂತಹ ಸಂಸದರುಗಳಿಗೆ ಈ ಬಾರಿಯ ಪಾರ್ಲಿಮೆಂಟ್ ಚುನಾವಣೆಯಲ್ಲಿ ಸೋಲಿಸಿ ಮನೆಗೆ ಕಳಿಸಲಾಗುವುದೆಂದು ಗಡುವು ನೀಡಿದರು.
ಮುತ್ತಿನಕೊಪ್ಪ ಬಳಿ ಫಸ್ಟ್ ಪ್ಯಾಕೇಜ್‍ನಲ್ಲಿ ಎರಡು ಕಡೆ ಲಿಫ್ಟ್ ಕೆಲಸ ನಡೆದಿಲ್ಲ. ಅಬ್ಬಿನಹೊಳೆ ಸಮೀಪ 1.6 ಕಿ.ಮೀ.ನಷ್ಟು ಕಾಲುವೆ ಕೆಲಸ ನಿಂತಿದೆ. ಭೂಮಿ ಕಳೆದುಕೊಳ್ಳುವ ರೈತರು ಹೆಚ್ಚಿನ ಪರಿಹಾರ ಕೇಳುತ್ತಿದ್ದಾರೆಂಬ ನೆಪವೊಡ್ಡಿ ಕೆಲಸ ನಿಲ್ಲಿಸುವುದು ಸರಿಯಲ್ಲ. ಇದರಿಂದ ಬಯಲುಸೀಮೆ ಚಿತ್ರದುರ್ಗ ಜಿಲ್ಲೆಯ ರೈತರ ಬದುಕಿಗೆ ಕೊಳ್ಳಿ ಇಟ್ಟಂತಾಗುತ್ತದೆ. ಯಾವುದೇ ರಾಜಕಾರಣ ಬೆರೆಸುವುದು ಬೇಡ. ತ್ವರಿತವಾಗಿ ಕೆಲಸ ಪೂರ್ಣಗೊಳಿಸಿ ಜಿಲ್ಲೆಗೆ ನೀರು ಹರಿಸಬೇಕೆನ್ನುವುದು ನಮ್ಮ ಬೇಡಿಕೆ. ಇದಕ್ಕೆ ಪ್ರತಿಯೊಬ್ಬರ ಬೆಂಬಲ ಅತ್ಯವಶ್ಯಕ ಎಂದು ಈಚಘಟ್ಟದ ಸಿದ್ದವೀರಪ್ಪ ಕೋರಿದರು.
ರೈತ ಮುಖಂಡರುಗಳಾದ ಬಸವರಾಜಪ್ಪ, ರಾಮರೆಡ್ಡಿ, ಬೋರೇಶ್, ಶಶಿಧರ್, ಪ್ರಸನ್ನಕುಮಾರ್, ರಂಗಸ್ವಾಮಿ, ತುಳಜಮ್ಮ, ಬಸವಲಿಂಗಮ್ಮ. ನಾಗತಿಹಳ್ಳಿ ನಿರಂಜನ್. ಅಲೆಮಾರಿ ಅರೆಅಲೆಮಾರಿ ಜನಾಂಗದ ಜಿಲ್ಲಾಧ್ಯಕ್ಷ ಎಸ್.ಲಕ್ಷ್ಮಿಕಾಂತ್ ಇನ್ನು ಅನೇಕರು ಜಾಗೃತಿ ಸಭೆಯಲ್ಲಿ ಭಾಗವಹಿಸಿದ್ದರು.