ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಚಿತ್ರದುರ್ಗ,(ನ.24): ನಗರಸಭೆ, ಜಿಲ್ಲಾ ಪಂಚಾಯಿತಿ ಸೇರಿದಂತೆ ಸ್ಥಳೀಯ ಸರ್ಕಾರಗಳ ಅನುದಾನದಲ್ಲಿ ಕ್ರೀಡಾಭಿವೃದ್ಧಿಗೆ ಶೇ.2 ರಷ್ಟು ಹಣ ಮೀಸಲಿಡುವಂತೆ ಸರ್ಕಾರ ಬಹಳ ದಿನಗಳ ಹಿಂದೆಯೇ ಆದೇಶ ಹೊರಡಿಸಿದೆ. ಈ ಅನುದಾನದ ಸದ್ಬಳಕೆಯಾಗಬೇಕು ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.
ನಗರದ ವೀರ ವನಿತೆ ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಂಯುಕ್ತ ಆಶ್ರಯದಲ್ಲಿ 14, 17 ವರ್ಷ ವಯೋಮತಿಯೊಳಗಿನ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ ಬಾಲಕಿಯರ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಹಾಗೂ ವಿμÉೀಶ ಚೇತನ ಮಕ್ಕಳ ಅಥ್ಲೆಟಿಕ್ಸ್ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ಮಕ್ಕಳಿಗೆ ಕ್ರೀಡಾ ಕೂಟದಲ್ಲಿ ಪಾಲ್ಗೊಳ್ಳಲು ಮೂಲಭೂತ ಸೌಕರ್ಯಗಳ ಕೊರತೆಯಿದೆ. ಶಾಲೆಗಳಲ್ಲಿ ದೈಹಿಕ ಶಿಕ್ಷಕರ ಕೊರತೆಯಿದೆ. ನೇಮಕಾತಿ ಮಾಡಿ ಇದನ್ನು ಸರಿಪಡಿಸಬೇಕಿದೆ.
ಆರ್ಥಿಕವಾಗಿ ತೊಂದರೆ ಇರುವ ಮಕ್ಕಳು ಕ್ರೀಡಾಕೂಟದಲ್ಲಿ ಸಾಧನೆ ತೊರುವುದು ಕಷ್ಟವಾಗುತ್ತದೆ. ಸ್ಥಳೀಯ ಸರ್ಕಾರಗಳಿಂದ ಕಟ್ಟುನಿಟ್ಟಾಗಿ ಕ್ರೀಡಾಭಿವೃದ್ಧಿ ಅನುದಾನ ಸಂಗ್ರಹಿಸಿ, ಕ್ರೀಡಾಪಟುಗಳಿಗೆ ಟ್ರಾಕ್ ಸೂಟ್, ಶೂ, ನೀ ಕ್ಯಾಪ್ ಗಳನ್ನು ವಿತರಿಸಬೇಕು. ಶಾಲೆಗಳಲ್ಲಿ ನೀಡುತ್ತಿರುವ ಬಿಸಿ ಊಟದ ಜೊತೆ ಜಿಲ್ಲಾ ಮಟ್ಟ ಹಾಗೂ ರಾಜ್ಯ ಮಟ್ಟದ ಕ್ರೀಡಾಪಟುಗಳಿಗೆ ಹೆಚ್ಚಿನ ಪೌಷ್ಠಿಕ ಆಹಾರ ನೀಡಬೇಕು. ಕ್ರೀಡೆಗಳಲ್ಲಿ ಉತ್ತಮ ಸಾಧನೆ ತೋರಿದವರಿಗೆ ಕಾಲೇಜು ಪ್ರವೇಶಾತಿಯಲ್ಲಿ ಶುಲ್ಕ ವಿನಾಯತಿ ನೀಡಬೇಕು ಎಂದರು.
50 ಹಾಗೂ 60ರ ದಶಕದಲ್ಲಿ ಚಿತ್ರದುರ್ಗ ಜಿಲ್ಲೆಯಿಂದ ಮೈಸೂರು ಅಂತರ್ ವಿ.ವಿ.ಕ್ರೀಡಾ ಪಂದ್ಯಾವಳಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಪಟುಗಳು ಆಯ್ಕೆ ಆಗುತ್ತಿದ್ದರು. ಕ್ರೀಡೆಯಲ್ಲಿ ಹೆಸರು ಹೊಂದಿದ್ದ ಜಿಲ್ಲೆಯ ಪ್ರಾತಿನಿಧ್ಯ ಇಂದು ಅಂತಾರಾಷ್ಟ್ರೀಯ ಹಾಗೂ ರಾಷ್ಟ್ರೀಯ ಕ್ರೀಡೆಗಳಲ್ಲಿ ಇಲ್ಲದಂತಾಗಿದೆ. ಇದನ್ನು ಹೋಗಲಾಡಿಸಿ ಕ್ರೀಡೆಗೆ ಉತ್ತೇಜನ ನೀಡಬೇಕು. ಕ್ರೀಡಾ ಮೀಸಲಾತಿ ಹೆಚ್ಚಿಸುವ ಕೆಲಸವಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.
ಸಣ್ಣ ಪುಟ್ಟ ರಾಷ್ಟ್ರಗಳು ಒಲಂಪಿಕ್ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ತೋರಿಸುತ್ತಿವೆ. ಭಾರತವು ಕ್ರೀಡೆಯಲ್ಲಿ ಮುಂದುವರೆಯಲು ಪಕ್ಷಾತೀತವಾಗಿ ಎಲ್ಲರೂ ಶ್ರಮಿಸಬೇಕಿದೆ. ಕ್ರೀಡೆಯಲ್ಲಿ ದೇಶದ ಸಾಧನೆ ಮಾಡಿದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಗೌರವ ಹೆಚ್ಚಾಗುತ್ತದೆ. ದೇಶಪ್ರೇಮ ಹೆಚ್ಚಾಗುತ್ತದೆ.
ಪ್ರಧಾನಿ ನರೇಂದ್ರ ಮೋದಿ ಖೇಲೋ ಇಂಡಿಯಾ ಅಭಿಯಾನ ಪ್ರಾರಂಭಿಸಿ ಕ್ರೀಡಾಪಟುಗಳಿಗೆ ಸ್ಪೂರ್ತಿ ತುಂಬುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಭಾರತ ಓಲಂಪಿಕ್, ಕಾಮನ್ ವೆಲ್ತ್, ಏಷಿಯನ್ ಕ್ರೀಡಾಕೂಟಗಳಲ್ಲಿ ಉತ್ತಮ ಸಾಧನೆ ತೋರಿ, ಪದಕಗಳನ್ನು ಜಯಸುತ್ತಿದೆ. ಶೂಟಿಂಗ್, ಕುಸ್ತಿ,ಬ್ಯಾಟಮಿಟನ್, ಜಿಮ್ನಾಸ್ಟಿಕ್ ಸ್ಪರ್ಧೆಗಳ ಜೊತೆಗೆ ಜಾವಲಿನ್ ಥ್ರೋ ನಂತಹ ಅಥ್ಲೆಟಿಕ್‍ಗಳಲ್ಲಿ ಪದಕ ಜಯಿಸಿದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಜಿ.ಪಂ.ಸಿಇಓ ಎಂ.ಎಸ್.ದಿವಾಕರ್, ಕ್ರೀಡಾ ಪಟುಗಳಲ್ಲಿ ಶಿಸ್ತು ಮೂಡಿಸುವ ಕೆಲಸವಾಗಬೇಕು. ಮಕ್ಕಳು ಕ್ರೀಡಾ ಸ್ಪೂರ್ತಿಯಿಂದ ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕು. ಸೋಲು ಗೆಲವುಗಳನ್ನು ಸಮಾನವಾಗಿ ಸ್ವೀಕರಿಸಬೇಕು. ಜಿಲ್ಲಾ ಮಟ್ಟದಲ್ಲಿ ವಿಜೇತರಾದವರು ರಾಜ್ಯಮಟ್ಟದಲ್ಲಿ ಭಾಗವಹಿಸಿ ಜಿಲ್ಲೆಗೆ ಒಳ್ಳೆಯ ಹೆಸರು ತರಬೇಕು ಎಂದರು.
ಜಿಲ್ಲಾ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟ ಎರೆಡು ದಿನಗಳ ಕಾಲ ನಡೆಯಲಿದೆ.ಕುಮಾರಿ ಸ್ವಾತಿ ಕ್ರೀಡಾ ಪ್ರತಿಜ್ಞೆಯನ್ನು ಬೋಧಿಸಿದಳು. ಜಿಲ್ಲೆಯ ಆರು ತಾಲೂಕುಗಳಿಂದ ಆಗಮಿಸಿದ ಕ್ರೀಡಾಪಟುಗಳು ವಿವಿಧ ಕ್ರೀಡೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ಸಂದರ್ಭದಲ್ಲಿ ಸಿ.ಟಿ.ಇ ಪದನಿಮಿತ್ತ ಸಹ ನಿರ್ದೇಶಕ ಹಾಗೂ ಪ್ರಾಂಶುಪಾಲ ಹೆಚ್.ಮಂಜುನಾಥ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ರವಿಶಂಕರ್ ರೆಡ್ಡಿ, ಜಿಲ್ಲಾ ದೈಹಿಕ ಪರಿವೀಕ್ಷಕ ಪರುಶುರಾಮಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.