ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜನವರಿ. 12 : ಭ್ರಷ್ಟ, ದುಷ್ಟರ ಧೂಳು ಜಾಡಿಸುವ ಕೆಲಸ ಮಾಡುವಂತೆ ಕೆಂಧೂಳಿ ವಾರ ಪತ್ರಿಕೆಗೆ ಸಾಹಿತಿ ಡಾ.ಬಿ.ಎಲ್.ವೇಣು ಹಾರೈಸಿದರು.
ಪತ್ರಕರ್ತರ ಭವನದಲ್ಲಿ ಭಾನುವಾರ ಕೆಂಧೂಳಿ ವಾರ ಪತ್ರಿಕೆಯ 200 ನೇ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು.
ಮುದ್ರಣ ಮಾಧ್ಯಮಕ್ಕಿರುವ ಬದ್ದತೆ, ಎಲೆಕ್ಟ್ರಾನಿಕ್ ಮಾಧ್ಯಮಕ್ಕಿಲ್ಲದಂತಾಗಿದೆ. ತುತ್ತೂರಿಗಳಾಗಿ ಕೆಲಸ ಮಾಡುತ್ತಿರುವುದು ದೊಡ್ಡ ದುರಂತ. ಹಾಗಾಗಿ ಮುದ್ರಣ ಮಾಧ್ಯಮ ಇನ್ನು ಘನತೆ ಕಾಪಾಡಿಕೊಂಡು ಬಂದಿದೆ. ಕೆಂಧೂಳಿ ವಾರ ಪತ್ರಿಕೆ ನ್ಯಾಯದ ಪರ, ದಲಿತರ ಪರವಾಗಿ ನಿಂತಿದೆ.
ಬಂಡಾಯದ ದಿನಗಳಲ್ಲಿ ಬರಹಗಾರರಿಗೆ ಜಾಗವಿತ್ತು. ಈಗ ಎಲ್ಲವೂ ಜಾತಿಯಿಂದ ಗುರುತಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜಕಾರಣಿಗಳು, ಮಠಾಧೀಶರು ಇರುವತನಕ ಜಾತಿ ನಿರ್ಮೂಲನೆಯಾಗುವುದಿಲ್ಲ. ಸಂವಿಧಾನ ಎಲ್ಲರನ್ನು ಸಮಾನವಾಗಿ ಕಾಣುತ್ತಿದೆ. ಮುಸಲ್ಮಾನರಿಗೆ ನೀಡಿರುವ ಓಟನ್ನು ಕಿತ್ತುಕೊಳ್ಳಬೇಕೆಂದು ಒಬ್ಬ ಸ್ವಾಮಿ ಹೇಳಿದರೆ
ಮತ್ತೊಬ್ಬ ರಾಜಕಾರಣಿ ಮುಸಲ್ಮಾನರ ಜೊತೆ ಹಿಂದುಗಳು ಯಾವುದೇ ರೀತಿಯ ವ್ಯವಹಾರವಿಟ್ಟುಕೊಳ್ಳಬಾರದೆಂದು ಫರ್ಮಾನು ಹೊರಡಿಸುತ್ತಾರೆ. ದೇಶದ ಸ್ವಾತಂತ್ರಕ್ಕಾಗಿ ಬ್ರಿಟೀಷರ ವಿರುದ್ದ ಮುಸಲ್ಮಾನರೂ ಹೋರಾಡಿದ್ದಾರೆನ್ನುವುದನ್ನು ಮೊದಲು ಅರ್ಥಮಾಡಿಕೊಂಡರೆ ಒಳ್ಳೆಯದು ಎಂದರು.
ಕೆಂಧೂಳಿ ವಾರ ಪತ್ರಿಕೆ ನೂರು ವಸಂತಗಳನ್ನು ದಾಟಲಿ, ಅದಕ್ಕಾಗಿ ಪತ್ರಿಕೆಗೆ ಚಂದಾದಾರರು ಜಾಸ್ತಿಯಾಗಬೇಕು. ಸರ್ಕಾರ ಮತ್ತು ಖಾಸಗಿಯವರು ಜಾಹಿರಾತುಗಳನ್ನು ನೀಡುವ ಮೂಲಕ ಪ್ರೋತ್ಸಾಹಿಸಬೇಕೆಂದರು.
ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಕೆಂಧೂಳಿ ಡಿಜಿಟಲ್ ಮೀಡಿಯಾ ಉದ್ಘಾಟಿಸಿ ಮಾತನಾಡುತ್ತ ಡಿಜಿಟಲ್ ಮೀಡಿಯಾ ಬಂದ ಮೇಲೆ ಪತ್ರಿಕೆಗಳು ಆತಂಕದಲ್ಲಿವೆ. ಟಿ.ವಿ.ಹಾವಳಿಯ ನಡುವೆಯೂ ಓದುಗರ ಸಂಖ್ಯೆ ಕಡಿಮೆಯಾಗಿಲ್ಲ. ಸ್ವಾತಂತ್ರ್ಯಾ ನಂತರ ಅಭಿವೃದ್ದಿ ಪತ್ರಿಕೋದ್ಯಮವಿತ್ತು. ಮುದ್ರಣ ಮಾಧ್ಯಮ ಸ್ವಂತಿಕೆ ಉಳಿಸಿಕೊಂಡು ಬರುತ್ತಿದೆ. ಕೆಂಧೂಳಿ ವಾರಪತ್ರಿಕೆ ಧೂಳೆಬ್ಬಿಸುವ ಕೆಲಸ ಮಾಡಬೇಕು. ಒಳ್ಳೆಯ ಪತ್ರಿಕೆ, ಪತ್ರಕರ್ತ ಇಂದಿನ ಸಮಾಜಕ್ಕೆ ಬೇಕು. ಸರ್ಕಾರ ದಾರಿ ತಪ್ಪಿಸಿದಾಗ ಎಚ್ಚರಿಸಿ ಸರಿದಾರಿಗೆ ತರುವ ಜವಾಬ್ದಾರಿ ಪತ್ರಿಕೆಗಳ ಮೇಲಿದೆ ಎಂದು ಹೇಳಿದರು.
ಹಿರಿಯ ಪತ್ರಕರ್ತ ಸುಭಾಷ್ ಹೂಗಾರ್ ಮಾತನಾಡಿ ಟಿ.ವಿ.ಗಳಲ್ಲಿ ಧಾರವಾಹಿ, ಬಿಗ್‍ಬಾಸ್ ನೋಡುವವರಿದ್ದಾರೆ. ನ್ಯೂಸ್ ನೋಡುವವರನ್ನು ಹುಡುಕಬೇಕಾಗಿದೆ. ಪತ್ರಿಕೋದ್ಯಮ ಉಳಿದೆಲ್ಲಾ ವೃತ್ತಿಯಂತಲ್ಲ. ವಿಭಿನ್ನವಾಗಿರಬೇಕು. ವಿಪರ್ಯಾಸವೆಂದರೆ. ಈಗಿನ ಪತ್ರಿಕೋದ್ಯಮ ವ್ಯಾಪಾರೀಕರಣವಾಗಿದೆ. ಹಾಗಾಗಿ ಮುದ್ರಣ ಮಾಧ್ಯಮದ ಘನತೆ ದಿನೆ ದಿನೆ ಕುಗ್ಗುತ್ತಿದೆ. ಆವಿಷ್ಕಾರ ತಂತ್ರಜ್ಞಾನ ಬೆಳವಣಿಗಯಾಗಿದೆ. ಪತ್ರಿಕೆಗಳ ಪ್ರಸಾರ ಕುಸಿಯುತ್ತಿದೆ. ಜನರ, ಓದುಗರ ಪರವಾಗಿರುವ ಪತ್ರಿಕೋದ್ಯಮ ಜೀವಂತವಾಗಿರುತ್ತದೆ ಎಂದರು.
ಲಕ್ಷ್ಮಿನಾರಾಯಣ ಮಾತನಾಡುತ್ತ ಪತ್ರಿಕೆ ನಡೆಸುವುದು ಕಷ್ಟಕರವಾಗಿರುವ ಇಂದಿನ ಕಾಲದಲ್ಲಿ ಕೆಂಧೂಳಿ ವಾರ ಪತ್ರಿಕೆ ತನ್ನದೆ ಆದ ವೈಶಿಷ್ಟತೆಯನ್ನು ಉಳಿಸಿಕೊಂಡು ಬರುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದೆ.
ಸಾಹಿತಿ ಮತ್ತು ಪತ್ರಕರ್ತ ಆರ್.ಜಿ.ಹಳ್ಳಿ ನಾಗರಾಜ್, ಪತ್ರಕರ್ತರುಗಳಾದ ಹೆಚ್.ಲಕ್ಷ್ಮಣ್, ನರೇನಹಳ್ಳಿ ಅರುಣ್‍ಕುಮಾರ್, ಕೆಂಧೂಳಿ ವಾರ ಪತ್ರಿಕೆ ಸಂಪಾದಕ ತುರುವನೂರು ಮಂಜೂನಾಥ್, ಕರ್ನಾಟಕ ಸ್ಟೇಟ್ ಡಿಜಿಟಲ್ ಮೀಡಿಯಾ ಅಸೋಸಿಯೇಷನ್ ಅಧ್ಯಕ್ಷ ಹನುಮೇಶ್ ಕೆ.ಯಾವಗಲ್ ವೇದಿಕೆಯಲ್ಲಿದ್ದರು.