ಬೇರೆ ಜಾತಿಯವರು ಮಾದಿಗ ಪ್ರಮಾಣ ಪತ್ರ ಪಡೆದು ಒಳ ಮೀಸಲಾತಿ ಸೌಲಭ್ಯ ಪಡೆದರೆ ಕಾನೂನು ಕ್ರಮ

3 Min Read

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ. ನ. 12 : ನಮ್ಮ ಜಾತಿಯವರನ್ನು ಬಿಟ್ಟು ಬೇರೆ ಜಾತಿಯವರು ಮಾದಿಗ ಎಂದು ಪ್ರಮಾಣ ಪತ್ರವನ್ನು ಪಡೆದು ಒಳ ಮೀಸಲಾತಿಯಲ್ಲಿ ಸೌಲಭ್ಯವನ್ನು ಪಡೆಯುವುದು ಕಂಡು ಬಂದರೆ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಾಜಿ ಸಚಿವರಾದ ಹೆಚ್.ಅಂಜನೇಯ ಎಚ್ಚರಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಒಳ ಮೀಸಲಾತಿ ಜಾರಿಗೆ ಸಂಬಂಧಪಟ್ಟಂತೆ ಜಾತಿ ಪ್ರಮಾಣ ಪತ್ರ ಪಡೆಯಲು ಈ ಹಿಂದೆ ಕೆಲವು ಆತಂಕಗಳಿದ್ದವು ಈಗ ಆ ಗೊಂದಲಗಳನ್ನು ನಿವಾರಣೆ ಮಾಡಲಾಗಿದೆ.ರಾಜ್ಯದಲ್ಲಿ ನಡೆದ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಸಮೀಕ್ಷೆಯಲ್ಲಿ 45 ಲಕ್ಷ ಜನ ಎ.ಕೆ, ಎ.ಡಿ, ಆದಿ ಆಂಧ್ರ ಎಂದು ನಮೂದಿಸಿದ್ದು ಇವರು ಮೂಲ ಜಾತಿಯನ್ನು ನಮೂದಿಸಿಲ್ಲ. 4.75 ಲಕ್ಷ ಜನ ತಮ್ಮ ಜಾತಿಯನ್ನು ನಮೂದಿಸಿಲ್ಲ. ಎ.ಕೆ, ಎ.ಡಿ, ಆದಿ ಆಂಧ್ರರವರು ಮಾದಿಗ ಎಂದು ಜಾತಿ ಪ್ರಮಾಣ ಪತ್ರ ಪಡೆಯಲು ಅವಕಾಶವನ್ನು ಕಲ್ಪಿಸಲಾಗಿದೆ ಎಂದರು.

ಕಾಂತರಾಜ್ ಆಯೋಗವು ಮಾದಿಗ ಜನಾಂಗವನ್ನು ‘ಎ’ ಗುಂಪು, ಹೊಲಯ, ಲಂಬಾಣಿ, ಛಲವಾದಿ ಸಮುದಾಯಗಳನ್ನ ‘ಬಿ’ ಗುಂಪುಗಳೆಂದು ಗುರುತಿಸಿದೆ.ಇದರಲ್ಲಿ ಕೆಲವು ಜನ ಮಾದಿಗ ಎಂದು ತಪ್ಪಾಗಿ ನಮೂದಿಸಿ ಜಾತಿ ಪ್ರಮಾಣವನ್ನು ಪಡೆಯುವುದರ ಮೂಲಕ ಒಳ ಮೀಸಲಾತಿಯನ್ನು ಪಡೆಯುವ  ಹುನ್ನಾರವನ್ನು ನಡೆಸಿದ್ದಾರೆ.. ಇದಕ್ಕೆ ನಾವು ಅವಕಾಶ ನೀಡುವುದಿಲ್ಲ.ಇದಕ್ಕಾಗಿ ಮಾದಿಗ ಜಾಗೃತಿ ಕಾವಲು ಸಮಿತಿಯನ್ನು ರಚನೆ ಮಾಡುವುದರ ಮೂಲಕ ನಮ್ಮ ಜಾತಿಯವರನ್ನು ಬಿಟ್ಟು ಬೇರೆ ಜಾತಿಯವರು ಮಾದಿಗ ಎಂದು ಪ್ರಮಾಣ ಪತ್ರವನ್ನು ಪಡೆದು ಒಳ ಮೀಸಲಾತಿಯಲ್ಲಿ ಸೌಲಭ್ಯವನ್ನು ಪಡೆಯುವುದು ಕಂಡು ಬಂದರೆ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಕಳೆದ 35 ವರ್ಷಗಳಿಂದ ಮಾದಿಗರು ಸೌಲಭ್ಯ ವಂಚಿತರಾಗಿದ್ದಾರೆ ಈಗ ನ್ಯಾಯಾಲಯದ ಮೂಲಕ ಅವಕಾಶ ಮಾಡಿ ಸರ್ಕಾರ ಒಳ ಮೀಸಲಾತಿಯನ್ನು ತಯಾರಿಸಿದೆ.. ಅದನ್ನು ಪಡೆಯಲು ಎಲ್ಲಾ ಮಾದಿಗರು ಮುಂದಾಗಬೇಕು.ಅಲೇಮಾರಿ ಜನಾಂಗಕ್ಕೆ ಶೇ 1% ರಷ್ಟು ಮೀಸಲಾತಿಯನ್ನು ಕಾಂತರಾಜ್ ಆಯೋಗ ತನ್ನ ವರದಿಯಲ್ಲಿ ನೀಡಿತ್ತು ಆದರೆ ಸರ್ಕಾರ ನೀಡಿಲ್ಲ ಆದರೂ ಸಹ ಅಲೆಮಾರಿಗಳಿಗೆ ಶೇ 1% ರಷ್ಟು ಮೀಸಲಾತಿಯನ್ನು ನೀಡಲಾಗುವುದು.ಅಲೆಮಾರಿ ನಿಗಮ ಸ್ಥಾಪನೆ ಮಾಡಿ ವಿಶೇಷ ಪ್ಯಾಕೇಜ್ ಗಳನ್ನು ನೀಡುವುದರ ಮೂಲಕ ಅವರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು ಅವರನ್ನು ಮುಖ್ಯವಾಹಿನಿಗೆ ತರುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

ಕಳೆದ ಹಲವಾರು ವರ್ಷಗಳಿಂದ ನಮ್ಮ ಸಮುದಾಯದವರು ಅವಕಾಶ ಸಿಗದೇ ಜಿಗುಪ್ಸೆ ಹೊಂದಿದ್ದರು ಈಗ ಒಳ ಮೀಸಲಾತಿ ಜಾರಿಯಿಂದ ವಿವಿಧ ರೀತಿಯ ಸೌಲಭ್ಯಗಳು ಸಿಗಲಿವೆ.ವೈದ್ಯಕೀಯ ಹುದ್ದೆಗಳಲ್ಲಿ ಇರುವಂತಹ ಉನ್ನತ ಹುದ್ದೆಗಳು ಸಹ ಮಾದಿಗ ಸಮುದಾಯಕ್ಕೆ ಲಭ್ಯವಾಗಲಿವೆ.. ನಮ್ಮ ಜನಾಂಗದಲ್ಲಿ ಅಭ್ಯರ್ಥಿಗಳು ಸಿಗದೇ ಇರುವ ಸಂದರ್ಭದಲ್ಲಿ ಬೇರೆ ಜನಾಂಗದವರಿಗೆ ಹಂಚಿಕೆ ಮಾಡಲಾಗುವುದು ಎಂದು ಅಂಜನೇಯ ಹೇಳಿದರು.

ಸಚಿವ ಸಂಪುಟ ಪುನರ್ ರಚನೆ ವಿಚಾರವಾಗಿ ಮಾತನಾಡಿ, ಸಿ.ಎಂ ಹಾಗೂ ಹೈಕಮಾಂಡ್ ಬಿಟ್ಟ ವಿಚಾರವಾಗಿದೆ.. ಯಾವಾಗ ಆಗುತ್ತೋ ಗೊತ್ತಿಲ್ಲ.ಹೈಕಮಾಂಡ್ ತೀರ್ಮಾನವೇ ಅಂತಿಮ.ಸಚಿವ ಸಂಪುಟದಲ್ಲಿ ಯಾರು ಇರಬೇಕು.ಯಾರು ಇರಬಾರದು ಎಂದು ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದರು.

ವಿಮಾನ ನಿಲ್ದಾಣದಲ್ಲಿ ಮುಸ್ಲಿಂರು ನಮಾಜ್ ಮಾಡಿರುವುದಕ್ಕೆ ಪ್ರತಿಕ್ರಿಯಿಸಿ ಅವರು ಯಾರಿಗೂ ಸಹ ತೊಂದರೆ ಮಾಡಿಲ್ಲ. ತಮಗಾಗಿ ಹಾಗೂ ತಮ್ಮ ಕುಟುಂಬದ ಮನಶಾಂತಿಗಾಗಿ ಮೌನವಾಗಿ ಪ್ರಾರ್ಥನೆ ಮಾಡಿದ್ದಾರೆ. ನೀವು ಸಹ ಋಷಿ ಮುನಿಗಳ ತರಹ ಮನಶಾಂತಿಗಾಗಿ, ಕಷ್ಟಗಳ ನಿವಾರಣೆಗಾಗಿ ಧ್ಯಾನ ಮಾಡಿ. ಬೇರೆಯವರಿಗೆ ತೊಂದರೆಯಾಗದಂತೆ ಪ್ರಾರ್ಥನೆ ಮಾಡಿ ಎಂದ ಅವರು ನಾನು ಹಿಂದು, ಮುಸ್ಲಿಂ, ಕ್ರೈಸ್ತ ಪ್ರೇಮಿಯಾಗಿದ್ದೇನೆ.. ಯಾರ ವಿರೋಧಿಯಲ್ಲ. ಯಾರ ಧರ್ಮದ ಭಾವನೆಗಳನ್ನು ಕೆರಳಿಸುವುದಿಲ್ಲ.ಅವರ ಸುಧಾರಣೆಗಾಗಿ ಕೆಲಸ ಮಾಡುತ್ತೇನೆ ಎಂದರು.

Share This Article
Enable Notifications OK No thanks