ಬೆಂಗಳೂರು: ಹಿರಿಯ ನಟಿ ಲೀಲಾವತಿ ಬೆಂಗಳೂರು ಹೊರವಲಯ ಸೋಲದೇವನಹಳ್ಳಿಯಲ್ಲಿ ನೆಲೆಸಿದಾಗಿನಿಂದಲೂ ಅಲ್ಲಿನ ಜನರಿಗೆ ಅನುಕೂಲವಾಗುವಂತ ಸಮಾಜಮುಖಿ ಕೆಲಸಗಳನ್ನೇ ಮಾಡುತ್ತಾ ಇದ್ದಾರೆ. ಈಗಾಗಲೇ ಪ್ರಾಥಮಿಕ ಆಸ್ಪತ್ರೆಯನ್ನು ಕಟ್ಟಿಸಿದ್ದಾರೆ. ಇದೀಗ ಪಶು ಸಂಗೋಪನ ಆಸ್ಪತ್ರೆಯನ್ನು ಕಟ್ಟಿಸಿದ್ದಾರೆ. ಇದರ ಉದ್ಘಾಟನೆಯನ್ನು ಡಿಸಿಎಂ ಡಿಕೆ ಶಿವಕುಮಾರ್ ನೆರವೇರಿಸಿದ್ದಾರೆ.
ಲೀಲಾವತಿ ಅವರಿಗೆ ಪ್ರಾಣಿ, ಪಕ್ಷಿಗಳೆಂದರೆ ಬಲು ಪ್ರೀತಿ. ಅದಕ್ಕಾಗಿಯೇ ಸೋಲದೇವನಹಳ್ಳಿಯಲ್ಲಿ ಒಂದು ಪಶುಸಂಗೋಪನ ಆಸ್ಪತ್ರೆಯನ್ನು ಕಟ್ಟಿಸಿದ್ದಾರೆ. ಇಂದು ಅವರ ಕನಸಿನ ಆಸ್ಪತ್ರೆ ಉದ್ಘಾಟನೆಗೊಂಡಿದೆ. ಇದು ಲೀಲಾವತಿ ಅವರಿಗೆ ಇನ್ನಷ್ಟು ಸಂತಸ ನೀಡಿದೆ.
ಲೀಲಾವತಿಯವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ತೀರಾ ಸಣ್ಣವಾಗಿದ್ದು, ಹೆಚ್ಚಿನ ಊಟ, ತಿಂಡಿ ತಿನ್ನುವುದಕ್ಕೂ ಕಷ್ಟವಾಗಿದೆ. ಹಿರಿಯ ನಟಿಯನ್ನು ನೋಡಲು ಸ್ಯಾಂಡಲ್ ವುಡ್ ನಟ ನಟಿಯರು ಸೋಲದೇವನಹಳ್ಳಿಯ ತೋಟದ ಮನೆಗೆ ಭೇಟಿ ನೀಡುತ್ತಿದ್ದಾರೆ. ಇತ್ತಿಚೆಗಷ್ಟೇ ಅರ್ಜುನ್ ಸರ್ಜಾ ಭೇಟಿ ನೀಡಿ, ಆರೋಗ್ಯ ವಿಚಾರಿಸಿದ್ದರು. ಬಳಿಕ ನಿನ್ನೆಯಷ್ಟೇ ನಟ ದರ್ಶನ್ ಕೂಡ ಲೀಲಾವತಿ ಅವರನ್ನು ಭೇಟಿ ಮಾಡಿ ಬಂದಿದ್ದಾರೆ.
ಹಿರಿಯ ನಟಿ ಅವರ ಮಹದಾಸೆ ಪಶುಸಂಗೋಪನೆಯ ಆಸ್ಪತ್ರೆಯಾಗಿತ್ತು. ಅವರ ಆರೋಗ್ಯ ಬೇರೆ ದಿನೇ ದಿನೇ ಕ್ಷೀಣಿಸುತ್ತಿದೆ. ಅವರ ಆಸೆಯಂತೆ ಸರ್ಕಾರವೂ ಸ್ಪಂದಿಸಿದ್ದು, ಬೆಂಗಳೂರಿನ ಥಣೀಸಂಧ್ರದ ಆಸ್ಪತ್ರೆಯನ್ನು ಸರ್ಕಾರ ಸೋಲದೇವನಹಳ್ಳಿಗೆ ಶಿಫ್ಟ್ ಮಾಡಲಾಗಿದೆ.