ವರದಿ ಮತ್ತು ಫೋಟೋ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಚಿತ್ರದುರ್ಗ,(ನ.06) : ಜಾತಿ ಕಾಲಂನಲ್ಲಿ ಪಂಚಮಸಾಲಿ ಎಂದು ಬರೆಸುವಂತೆ ಜಾಗೃತಿ ಮೂಡಿಸುವುದಕ್ಕಾಗಿ ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಪ್ರವಾಸ ಮಾಡುತ್ತಿದ್ದೇವೆಂದು ಹರಿಹರ ಪಂಚಮಸಾಲಿ ಮಠದ ವಚನಾನಂದ ಸ್ವಾಮೀಜಿ ತಿಳಿಸಿದರು.
ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸ್ವಾಮೀಜಿ ವೀರಶೈವ ಪಂಚಮಸಾಲಿಗಳಿಗೆ ಮೀಸಲಾತಿ ಸಿಗಬೇಕೆಂದು ಕಳೆದ 28 ವರ್ಷಗಳಿಂದ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಮೀಸಲಾತಿ ಇಲ್ಲದ ಕಾರಣ ನಮ್ಮ ಜನಾಂಗದ ಮಕ್ಕಳು ವೈದ್ಯಕೀಯ ಸೀಟಿನಿಂದ ವಂಚಿತರಾಗಿದ್ಧಾರೆ.
ಪಿ.ಎಸ್.ಐ.ಹುದ್ದೆ ಪಡೆಯುವಲ್ಲಿ ವಿಫಲರಾಗಿದ್ದಾರೆ. ಪ್ರತಿಭೆಗಳನ್ನು ಚಿವುಟುವ ಕೆಲಸವಾಗುತ್ತಿರುವುದರಿಂದ ಪ್ರಾಣ ಬಿಟ್ಟೇವು. ಮೀಸಲಾತಿಯನ್ನು ಬಿಡುವುದಿಲ್ಲ ಎಂದು ಸರ್ಕಾರಕ್ಕೆ ಎಚ್ಚರಿಸಿದರು.
ಕೇಂದ್ರ ಓಬಿಸಿ. ಮೀಸಲಾತಿ ಅಂತಿಮ ಹಂತಕ್ಕೆ ತಲುಪಿದೆ. ಕೇಂದ್ರ ಹಿಂದುಳಿದ ವರ್ಗಗಳ ಆಯೋಗಕ್ಕೆ 900 ಪುಟುಗಳ ದಾಖಲು ನೀಡಿದ್ದೇವೆ. ಹಾಗಾಗಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಶಿಫಾರಸ್ಸು ಮಾಡಿದೆ. ಇದರಿಂದ ನಮಗೆ ಶೇ.27 ರಷ್ಟು ಮೀಸಲಾತಿ ಸಿಗುತ್ತದೆ.
ನಾಗಮೋಹನ್‍ದಾಸ್ ವರದಿಯನ್ವಯ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳಿಗೆ ಮೀಸಲಾತಿಯನ್ನು ಹೆಚ್ಚಿಸಿದೆ. ಅದೇ ರೀತಿ ಜೈಪ್ರಕಾಶ್ ಹೆಗಡೆರವರು ಇನ್ನೊಂದು ತಿಂಗಳೊಳಗೆ ವರದಿ ಕೊಟ್ಟ ನಂತರ ಪಂಚಮಸಾಲಿಗಳಿಗೆ ಮೀಸಲಾತಿ ಕೊಡಬೇಕು. ರಾಜ್ಯದ ಮುಖ್ಯಮಂತ್ರಿ, ಅನೇಕ ಸಚಿವರು ಹಾಗೂ ಕೇಂದ್ರದ ಕೆಲವು ಸಚಿವರ ಜೊತೆ ಚರ್ಚಿಸಿದ್ದೇವೆಂದು ಹೇಳಿದರು.
ಯಾವುದೇ ಒಂದು ಜಾತಿಗೆ ಮೀಸಲಾತಿ ನೀಡಬೇಕಾದರೆ ಕುಲಶಾಸ್ತ್ರ ಅಧ್ಯಯನ ಆಗಲೇಬೇಕು. ಅದರಂತೆ ರಾಜ್ಯದ ಹದಿನೆಂಟು ಜಿಲ್ಲೆಗಳಲ್ಲಿ ಅಧ್ಯಯನವಾಗಿದೆ. ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಪಂಚಮಸಾಲಿಗಳ ಪ್ರತಿ ಮನೆ ಮನೆಗೆ ಭೇಟಿ ನೀಡಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕವಾಗಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ ಎಂದು ತಿಳಿಸಿದರು.
ಮಹಾರಾಷ್ಟ್ರದಲ್ಲಿ ನಮ್ಮ ಸಮಾಜದವರಿಗೆ ಅನ್ಯಾಯವಾದಂತೆ ಕರ್ನಾಟಕದಲ್ಲಿ ಮೀಸಲಾತಿಯಿಂದ ವಂಚನೆಯಾಗಲು ಬಿಡುವುದಿಲ್ಲ. ಅದಕ್ಕಾಗಿ ವಕೀಲರುಗಳ ತಂಡ ಕಟ್ಟಿಕೊಂಡು ರಾಜ್ಯದ ಪ್ರತಿ ಜಿಲ್ಲೆಗಳಿಗೆ ಹೋಗಿ ಪಂಚಮಸಾಲಿಗಳಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ. ರಾಜ್ಯ ಮತ್ತು ಕೇಂದ್ರ ಸರ್ಕಾರವೂ ಪಂಚಮಸಾಲಿಗಳಿಗೆ ಮೀಸಲಾತಿ ಕೊಡಲು ಸಿದ್ದವಿದೆ. ಅದಕ್ಕಾಗಿ ಜಾತಿ ಕಾಲಂನಲ್ಲಿ ಪಂಚಮಸಾಲಿ ಎಂದು ಬರೆಸುವಂತೆ ವೀರಶೈವ ಪಂಚಮಸಾಲಿಗಳಲ್ಲಿ ಮನವಿ ಮಾಡಿದರು.
ವೀರಶೈವ ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಜೆ.ಶಿವಪ್ರಕಾಶ್, ತಾಲ್ಲೂಕು ಅಧ್ಯಕ್ಷ ಬಸವರಾಜಪ್ಪ, ಕಾರ್ಯದರ್ಶಿ ಪ್ರಕಾಶ್, ನರೇಂದ್ರಬಾಬು, ವಿಶ್ವನಾಥ್ ಇನ್ನು ಮುಂತಾದವರು ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.