ಚಿತ್ರದುರ್ಗ, (ಮೇ.31): ಶಿಸ್ತು ಮತ್ತು ಶ್ರದ್ಧೆ ಇದ್ದಲ್ಲಿ ಕಲಿಕೆ ನಿರಂತರವಾಗಿರುತ್ತದೆ. ಅಭ್ಯಾಸ ಎಂಬುದು ಹರಿಯುವ ನೀರಾಗಿರಬೇಕೇ ಹೊರತು ನಿಂತ ನೀರಾಗಬಾರದು. ಜಗತ್ತಿನ ಆಗುಹೋಗುಗಳ ಬಗ್ಗೆ ಅಪಾರವಾದ ಜ್ಞಾನ ಸಂಪಾದಿಸಬೇಕು ಎಂದು ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಪ್ರವಾಚಕಿ ಸುಜಾತ ಅಭಿಪ್ರಾಯಪಟ್ಟರು.
ನಗರದ ಕೋಟೆರಸ್ತೆ ಶ್ರೀ ರಾಘವೇಂದ್ರ ಶಿಕ್ಷಣ ಮಹಾವಿದ್ಯಾಲಯದ ಆವರಣದಲ್ಲಿ ಏರ್ಪಡಿಸಿದ್ದ ಸ್ವಾಗತ, ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಶಿಕ್ಷಣಾರ್ಥಿಗಳು ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸುವ ಜವಾಬ್ದಾರಿಯನ್ನು ಬೆಳೆಸಿಕೊಳ್ಳಬೇಕು. ತರಬೇತಿಯ ಹಂತದಲ್ಲಿ ಸಾಹಿತ್ಯಿಕ ಮತ್ತು ಸಾಂಸ್ಕøತಿಕ ಕಲಿಕೆಯ ಬೋಧನ ಪ್ರಕ್ರಿಯೆಯಲ್ಲಿ ಆಸಕ್ತಿಯಿಂದ ಪಾಲ್ಗೊಳ್ಳಬೇಕು ಎಂದರು.
ಶ್ರೀವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಡಾ.ಇ.ರುದ್ರಮುನಿ ಮಾತನಾಡಿ ವಿಶ್ವವಿದ್ಯಾಲಯದ ಮಾರ್ಗಸೂಚಿಯಂತೆ ಪಠ್ಯಕ್ರಮದ ಅಂಶಗಳನ್ನು ಅನುಸರಿಸಿ ಶಿಕ್ಷಣ ಪಡೆಯಬೇಕು ಎಂದರು.
ಎಸ್‍ಆರ್‍ಎಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಹಾಗೂ ಸಿಂಡಿಕೇಟ್ ಸದಸ್ಯ ಡಾ.ಟಿ.ಎಸ್.ರವಿ ಮಾತನಾಡಿ ಸಮಾಜಮುಖಿ ಶಿಕ್ಷಣ ಪ್ರಶಿಕ್ಷಣಾರ್ಥಿಗಳ ಗಮನದ ಕೇಂದ್ರೀಕೃತವಾಗಿರಬೇಕು ಎಂದರು.
ನಿವೃತ್ತ ವಲಯ ಅರಣ್ಯಾಧಿಕಾರಿ ಹೆಚ್.ರಾಮಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಸೀಡ್ ವಿದ್ಯಾಸಂಸ್ಥೆ ಕಾರ್ಯದರ್ಶಿ ಹೆಚ್.ಶ್ರೀನಿವಾಸ್, ಪ್ರಾಚಾರ್ಯ ಡಾ.ಎ.ಜಿ.ಬಸವರಾಜಪ್ಪ ಮಾತನಾಡಿದರು.
ಉಪನ್ಯಾಸಕರಾದ ಮಹಾಂತೇಶ್, ಡಾ.ಕೆ. ಮೋಹನ್‍ಕುಮಾರ್, ಪಾತಲಿಂಗಪ್ಪ, ಸ್ವಾತಿ ಪಾಳೇಗಾರ, ಹೇಮಲತ ಮುಂತಾದವರು ಉಪಸ್ಥಿತರಿದ್ದರು. ಹೆಚ್ಚು ಅಂಕ ಗಳಿಸಿದ ಪ್ರಶಿಕ್ಷಣಾರ್ಥಿಗಳಾದ ಕಾವ್ಯ.ಡಿಎಸ್ ಮತ್ತು ಮೇಘ.ಹೆಚ್ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ರಂಗ ನಿರ್ದೇಶಕ ಕೆಪಿಎಂ.ಗಣೇಶಯ್ಯ ನಿರೂಪಿಸಿ, ವಂದಿಸಿದರು. ಮಹಾಲಕ್ಷ್ಮಿ ಮತ್ತು ಸೌಮ್ಯ ಪ್ರಾರ್ಥಿಸಿದರು.