ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 20 : ಪ್ರಸ್ತುತ ಸಮಾಜಕ್ಕೆ ಇಂಗ್ಲಿಷ್ ಕಲಿಕೆ ಅತ್ಯಗತ್ಯವಾಗಿದ್ದು ಬಾಲ್ಯದಲ್ಲೇ ಇಂಗ್ಲಿಷ್ ಭಾಷಾ ಜ್ಞಾನವನ್ನು ಬೆಳೆಸಿಕೊಳ್ಳುವುದರಿಂದ ಕೀಳರಿಮೆ ಮನೋಭಾವನೆಯಿಂದ ಹೊರಬರಲು ಸಾಧ್ಯ ಎಂದು ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ಯೋಗೀಶ್ ಸಹ್ಯಾದ್ರಿ ಎಜುಕೇಷನ್ ಟ್ರಸ್ಟ್, ಜಿಲ್ಲಾ ಕುರುಬರ ಸಂಘ ಹಾಗೂ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಐಯುಡಿಪಿ ಲೇಔಟ್ ಗಾಂಧಿನಗರದ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ಇಂಗ್ಲಿಷ್ ಕಾರ್ಯಾಗಾರದ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಇಂಗ್ಲಿಷ್ ಭಾಷಾ ಜ್ಞಾನದ ಕೊರತೆಯಿಂದ ಇಂದಿನ ಯುವಪೀಳಿಗೆ ಅದ್ಭುತವಾದ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ವಿದ್ಯಾರ್ಥಿಗಳು ತಮ್ಮ ಮಾತೃಭಾಷೆಯನ್ನು ಹಾಗು ಕನ್ನಡ ಭಾಷೆಯನ್ನು ಕಡೆಗಣಿಸದೆ ಜಗತ್ತಿನ ಮೇರು ಭಾಷೆಗಳಲ್ಲಿ ಒಂದಾದ ಇಂಗ್ಲಿಷ್ ಭಾಷೆಯನ್ನು ಕಲಿಯುವುದರಿಂದ ಪ್ರಪಂಚದ ಯಾವುದೇ ಭಾಗದಲ್ಲಿ ಅವಕಾಶಗಳನ್ನು ತಮ್ಮದಾಗಿಸಿಕೊಳ್ಳಬಹುದು ಎಂದು ತಿಳಿಸಿದರು.
ಯೋಗೀಶ್ ಸಹ್ಯಾದ್ರಿ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರ ಅವರು ಈ ರೀತಿಯ ಉಪಯುಕ್ತ ಕಲಿಕಾ ಕಾರ್ಯಾಗಾರವನ್ನು ನಗರದ ಪ್ರತಿಷ್ಟಿತ ಹಾಗು ಮುಂದುವರೆದ ಬಡಾವಣೆಗಳಲ್ಲಿ ಆಯೋಜಿಸುವ ಬದಲಾಗಿ ಇಂಥಹ ಶೈಕ್ಷಣಿಕವಾಗಿ ಹಿಂದುಳಿದಿರುವ ಭಾಗಗಳಲ್ಲಿ ಆಯೋಜನೆ ಮಾಡಿರುವುದಕ್ಕೆ ಅಭಿನಂದನೆಗಳನ್ನು ತಿಳಿಸಿದರು. ಬ್ರಿಟಿಷರು ತಮ್ಮ ಆಳ್ವಿಕೆಯ ಕಾಲದಲ್ಲಿ ಇಂಗ್ಲಿಷ್ ಭಾಷೆಯನ್ನು ವಿಶ್ವದ ಅನೇಕ ದೇಶಗಳಲ್ಲಿ ಬಿತ್ತರಿಸಿ ಹೋಗಿರುವುದರಿಂದ ಜಾಗತಿಕ ಭಾಷೆಯಾಗಿ ಬೆಳೆದು ಇದೀಗ ಎಲ್ಲೆಡೆ ಸಾಮಾನ್ಯ ಭಾಷೆಯಾಗಿ ಮಾರ್ಪಾಡಾಗಿದೆ. ಈ ಕಾರ್ಯಾಗಾರದ ಮೂಲಕ ಸರಳ ಭಾಷಾ ಪ್ರಾವೀಣ್ಯತೆಯನ್ನು ಬೆಳೆಸಿಕೊಂಡು ಸಹ್ಯಾದ್ರಿ ಅವರ ತಮ್ಮೆಲ್ಲರಿಗೂ ಇಂಗ್ಲಿಷ್ ಕಲಿಸುವ ಕನಸನ್ನು ನನಸು ಮಾಡಬೇಕು ಎಂದು ಆಶೀರ್ವದಿಸಿದರು.
ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಎ ಮುರುಳಿ, ಜ್ಞಾನದ ಸಂಪತ್ತು ಮನುಷ್ಯನಿಗೆ ಅತ್ಯವಶ್ಯಕ. ಉತ್ತಮ ರಾಷ್ಟ್ರವನ್ನು ನಿರ್ಮಾಣ ಮಾಡಬೇಕಾದರೆ ಪ್ರತಿಭಾವಂತ ವಿದ್ಯಾರ್ಥಿಗಳನ್ನು ತಯಾರು ಮಾಡಬೇಕಾಗುತ್ತದೆ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಇಂಗ್ಲಿಷ್ ಕಲಿಕೆಯು ಬಹಳ ಮುಖ್ಯವಾಗಿದೆ. ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿರಬೇಕು ಮತ್ತು ಅವರ ಭಾವನೆಗಳನ್ನು ಅರ್ಥ ಮಾಡಿಕೊಂಡು ಪಾಠ ಮಾಡುವುದು ಒಳ್ಳೆಯದು. ಅಂಥಹ ಶಿಕ್ಷಕರ ಸಾಲಿನಲ್ಲಿ ಯೋಗೀಶ್ ಸಹ್ಯಾದ್ರಿ ಸಹ ನಿಲ್ಲುತ್ತಾರೆ. ಹಾಗೆಯೇ ವಿದ್ಯಾರ್ಥಿಗಳು ಗುರುಗಳಿಗೆ ತಮ್ಮ ಅಮೂಲ್ಯ ಸಮಯವನ್ನು ಸಮರ್ಪಣೆ ಮಾಡಬೇಕು ಎಂದು ಮಕ್ಕಳಿಗೆ ಕಿವಿಮಾತು ಹೇಳಿದ ಅವರು ಸಮಾಜದಲ್ಲಿ ನಾವು ಅನೇಕ ರೀತಿಯ ಹೋರಾಟಗಳನ್ನು ಗಮನಿಸಿದ್ದೇವೆ. ಆದರೆ ಮುಖ್ಯವಾಗಿ ಮಕ್ಕಳಿಗೆ ಅತ್ಯುತ್ತಮ ಶಿಕ್ಷಣವನ್ನು ನೀಡುವ ಶಾಲೆಗಳ ಸ್ಥಾಪನೆಗಾಗಿ ಹೋರಾಟಗಳು ನಡೆಯಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಪನ್ಮೂಲ ವ್ಯಕ್ತಿ ಹಾಗು ಸಹ್ಯಾದ್ರಿ ಇಂಗ್ಲಿಷ್ ಅಕಾಡೆಮಿಯ ಅಧ್ಯಕ್ಷ ಯೋಗೀಶ್ ಸಹ್ಯಾದ್ರಿ, ಸಮಾಜದಲ್ಲಿ ಹಿಂದುಳಿದಿರುವ ಮಕ್ಕಳಿಗೆ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ, ವಿಶೇಷವಾಗಿ ಕೊಳಚೆ ಪ್ರದೇಶಗಳ ಮಕ್ಕಳಿಗೆ ಉಚಿತವಾಗಿ ಇಂಗ್ಲಿಷ್ ಕಲಿಸಿಕೊಡುವ ಕಾರ್ಯವನ್ನು ಸುಮಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವುದಾಗಿ ಹೇಳಿದರು. ಕನ್ನಡದ ಮೂಲಕ ಇಂಗ್ಲಿಷ್ ಹೇಳಿಕೊಡುವುದರಿಂದ ಮಾತೃಭಾಷೆಯ ಬಗೆಗಿನ ಅಭಿಮಾನ ಹಾಗು ಅನ್ಯ ಭಾಷೆಯ ಬಗೆಗಿನ ಆಸಕ್ತಿ ಉಲ್ಬಣವಾಗುತ್ತದೆ ಎಂದು ತಿಳಿಸಿದರು. ಈ ರೀತಿಯ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲು ಶಿಕ್ಷಣ ಇಲಾಖೆ, ಸಂಘ ಸಂಸ್ಥೆಗಳು ಹಾಗೂ ವಿದ್ಯಾರ್ಥಿ-ಪೋಷಕರ ಸಹಕಾರದಿಂದ ಸಾಧ್ಯವಾಗುತ್ತಿದೆ. ನನ್ನ ಕೊನೆಯುಸಿರಿರುವವರೆಗೂ ಮಕ್ಕಳ ಜ್ಞಾನಾರ್ಜನೆಗೆ ಶ್ರಮಿಸುವ ಸಂಕಲ್ಪ ಮಾಡಿರುವುದಾಗಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಗರಸಭೆ ಮಾಜಿ ಅಧ್ಯಕ್ಷ ಹೆಚ್ ಮಂಜಪ್ಪ ಅವರು ಉಚಿತ ಇಂಗ್ಲಿಷ್ ಕಾರ್ಯಾಗಾರಗಳು ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿರದೆ ಗ್ರಾಮೀಣ ಪ್ರದೇಶಗಳಲ್ಲಿಯೂ ಸಹ ಜರುಗಬೇಕಿದೆ. ಬಡ ಮಕ್ಕಳಿಗೆ ಸಹ್ಯಾದ್ರಿ ಅವರ ನಿಸ್ವಾರ್ಥ ಶಿಕ್ಷಣ ಸೇವೆ ನಿರಂತರವಾಗಿ ಮುಂದುವರೆಯಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಶಿಶು ಅಭಿವೃದ್ಧಿ ಅಧಿಕಾರಿ ಲೋಕೇಶಪ್ಪ ಮಾತನಾಡಿದರು. ಉಪನ್ಯಾಸಕ ಎಸ್ ಎಚ್ ಷಫೀಉಲ್ಲಾ ಕಾರ್ಯಕ್ರಮ ನಿರೂಪಣೆ ಮಾಡಿದರು. ಕುರುಬ ಸಮುದಾಯದ ಮುಖಂಡರಾದ ಮೃತ್ಯುಂಜಯ, ಮಾಳೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಬ್ಬಂದಿ, ಗಾಂಧೀನಗರದ ಮುಖಂಡರು, ನಿವಾಸಿಗಳು, ಮಕ್ಕಳು, ಪೋಷಕರು ಹಾಜರಿದ್ದರು.