ಅಡಿಕೆಗೆ ಬಡಿದ ಎಲೆಚುಕ್ಕೆ ರೋಗ : ಸದನದಲ್ಲಿ ಎಸ್ ಎಸ್ ಮಲ್ಲಿಕಾರ್ಜುನ್ ಹೇಳಿದ್ದೇನು..?

suddionenews
1 Min Read

ಬೆಳಗಾವಿ: ಚಳಿಗಾಲದ ಅಧಿವೇಶನದಲ್ಲಿ ತೋಟಗಾರಿಕಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅಡಿಕೆ ಬೆಳೆಗಾರರ ಸಂಕಷ್ಟದ ಬಗ್ಗೆ ಮಾತನಾಡಿದ್ದಾರೆ. ಎಲೆ ಚುಕ್ಕೆ ರೋಗದಿಂದ ಎಷ್ಟು ನಷ್ಟವಾಗಿದೆ ಎಂಬುದನ್ನು ತಿಳಿಸಿದ್ದಾರೆ.

ಎಲೆಚುಕ್ಕೆ ರೋಗದಿಂದ ರಾಜ್ಯದಲ್ಲಿ ಸುಮಾರು 53,977 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಅಡಿಕೆ ಬೆಳೆ ಹಾನಿಯಾಗಿದೆ. ಎಲೆ ಚುಕ್ಕೆ ರೋಗವೂ ಮೂರು ವಿಧದ ಶಿಲೀಂದ್ರದಿಂದ ಹರಡುತ್ತದೆ. ನೆಲಕ್ಕೆ ಬಿದ್ದ ಗರಿಗಳಲ್ಲಿ ಶಿಲೀಂದ್ರ ಬೆಳವಣಿಗೆಯಾಗುತ್ತದೆ‌. ಮಳೆಹನಿಗಳ ಚಿಮ್ಮುವಿಕೆಯಿಂದ ಶಿಲೀಂದ್ರಗಳು ಗಾಳಿಯಲ್ಲಿ ಸೇರಿ ಇತರೆ ತೋಟಗಳಿಗೂ ಹರಡುತ್ತವೆ. ತೇವಭರಿತ ಬಿಸಿಲಿನ ವಾತಾವರಣ ಹಾಗೂ ಹೆಚ್ಚಿನ ಆದ್ರತೆಯ ವಾತಾವರಣದಲ್ಲಿ ರೊಇಗ ತೀವ್ರವಾಗಿ ಹರಡುತ್ತಿದೆ. ರೋಗ ಹರಡದಂತೆ ನಿಯಂತ್ರಣ ಮಾಡಲು ಸರ್ಕಾರ ಶಿವಮೊಗ್ಗ ತೋಟಗಾರಿಕಾ ವಿಶ್ವ ವಿದ್ಯಾಲಯದ ತಜ್ಞರ ನೇತೃತ್ವದ ತಂಡ ರಚನೆ ಮಾಡಿದ್ದು, ಸಂಶೋಧನೆಗೆ 50 ಲಕ್ಷ ಅನುದಾನ ಒದಗಿಸಿದೆ.

 

2023-24ನೇ ಸಾಲಿನಲ್ಲಿ 6.250 ಹೆಕ್ಟೇರ್ ಪ್ರದೇಶದ 12,300 ಅಡಿಕೆ ಬೆಳೆಗಾರರಿಗೆ 2.50 ಕೋಟಿ ಅನುದಾನವನ್ನು ನೀಡಲಾಗಿದೆ. ಸಾಂಪ್ರದಾಯಿಕವಾಗಿ ಅಡಿಕೆ ಬೆಳೆಯುವ ಪ್ರದೇಶದಲ್ಲಿ ಅಡಿಕೆ ಬೆಳೆ ಕಟಾವು ಹಾಗೂ ಸಿಂಪರಣೆಗಾಗಿ ದೋಟಿ ಖರೀದಿಸಲು ಕೃಷಿ ಯಾಂತ್ರೀಕರಣ ಯೋಜನೆಯಡಿ, ಸಾಮಾನ್ಯ ವರ್ಗದವರಿಗೆ ಶೇಕಡ 40ರಷ್ಟು ಹಾಗೂ ಪರಿಶಿಷ್ಟ ಜಾತಿ/ಪಂಗಡದವರಿಗೆ ಶೇ.50ರಷ್ಡು ಸಹಾಯಧನ ನೀಡಲಾಗುತ್ತದೆ. ರೋಗದ ಅಧ್ಯಯನಕ್ಕಾಗಿ ಕೇಂದ್ರ ಸರ್ಕಾರ ನೇಮಿಸಿರುವ ವೈಜ್ಞಾನಿಕ ತಂಡ ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿ, ತಾಂತ್ರಿಕ ಸಲಹೆಗಳನ್ನು ನೀಡಿದೆ. ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ ಅವರ ಮೂಲಕ ಸರ್ಕಾರಕ್ಕೆ 225.73 ಕೋಟಿ ಪರಿಹಾರ ನೀಡಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಎಸ್.ಎಸ್.ಮಲ್ಲಿಕಾರ್ಜುನ್ ಅವರು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *