ಬೆಂಗಳೂರು: ಸಿಎಂ ಸಿದ್ದರಾಮಯ್ಯ ಸರ್ಕಾರದ ಮಹತ್ವದ ಅನ್ನಭಾಗ್ಯ ಯೋಜನೆಗೆ ಇಂದು ಚಾಲನೆ ನೀಡಲಾಗಿದೆ. ಐದು ಕೆಜಿ ಅಕ್ಕಿ, ಇನ್ನುಳಿದ ಐದು ಕೆಜಿ ಅಕ್ಕಿಯ ಹಣ ನೇರ ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡುವ ಯೋಜನೆಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಸಂಜೆ ಚಾಲನೆ ನೀಡಿದ್ದಾರೆ.
15 ದಿನಗಳಲ್ಲಿ ಬಿಪಿಎಲ್ ಕಾರ್ಡುದಾರರ ಖಾತೆಗೆ ಹಣ ನೇರವಾಗಿ ವರ್ಗಾವಣೆಯಾಗಲಿದೆ ಎಂದು ಆಹಾರ ಸಚಿವ ಮುನಿಯಪ್ಪ ತಿಳಿಸಿದ್ದಾರೆ. ಇನ್ನು ಕರ್ನಾಟಕದಲ್ಲಿ 1.28 ಕೋಟಿ ಕುಟುಂಬಗಳು ಪಡಿತರ ಚೀಟಿಯನ್ನು ಹೊಂದಿದೆ. ಅದರಲ್ಲಿ ಶೇಕಡ 99% ರಷ್ಟು ಜನ ಆಧಾರ್ ಕಾರ್ಡ್ ಗೆ ಬ್ಯಾಂಕ್ ಅಕೌಂಟ್ ಲಿಂಕ್ ಮಾಡಿಸಿವೆ.
ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳ ಎಲ್ಲಾ ಸದಸ್ಯರಿಗೂ 10 ಕೆ.ಜಿ. ಅಕ್ಕಿ ಕೊಡುವುದಾಗಿ ಘೋಷಣೆ ಮಾಡಲಾಗಿತ್ತು. ಅಕ್ಕಿ ಪೂರೈಕೆಯಲ್ಲಿ ಕೊರತೆಯಾದ ಕಾರಣ 5 ಕೆ.ಜಿ. ಮತ್ತು ಉಳಿದ 5 ಕೆ.ಜಿ. ಅಕ್ಕಿಯ ಬದಲಾಗಿ ಹಣ ಕೊಡುವುದಾಗಿ ಸರ್ಕಾರ ಹೇಳಿದೆ. ಪ್ರತಿ ಕೆ.ಜಿ. ಅಕ್ಕಿಗೆ 34 ರೂಪಾಯಿಗಳಂತೆ ಬಿಪಿಎಲ್ ಕಾರ್ಡ್ ಕುಟುಂಬದ ಪ್ರತಿ ಸದಸ್ಯರಿಗೆ 170 ರೂಪಾಯಿ ಸಿಗಲಿದೆ.