ಸುದ್ದಿಒನ್ : 26/11 ಮುಂಬೈ ದಾಳಿಯ ಮಾಸ್ಟರ್ ಮೈಂಡ್ ತಹಾವೋರ್ ರಾಣಾನನ್ನು NIA ಅಧಿಕಾರಿಗಳು ಭಾರತಕ್ಕೆ ಕರೆತಂದಿದ್ದಾರೆ. ಅಮೆರಿಕದಿಂದ ವಿಶೇಷ ವಿಮಾನವೊಂದು ದೆಹಲಿಯ ಪಾಲಂ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ರಾಣಾನನ್ನು ಗುಂಡು ನಿರೋಧಕ ವಾಹನದಲ್ಲಿ ಭಾರತ ಸರ್ಕಾರದ ರಾಷ್ಟ್ರೀಯ ತನಿಖಾ ಸಂಸ್ಥೆಯ ಕಚೇರಿಗೆ ಕರೆದೊಯ್ಯಲಾಯಿತು. SWAT ಕಮಾಂಡೋ ತಂಡವು ಭದ್ರತೆಯನ್ನು ಮೇಲ್ವಿಚಾರಣೆ ಮಾಡುತ್ತಿದೆ. ರಾಣಾನನ್ನು ಪಟಿಯಾಲ ಹೌಸ್ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುವುದು. ವಿಚಾರಣೆಗಾಗಿ ಎನ್‌ಐಎ ರಾಣಾನನ್ನು ಕಸ್ಟಡಿಗೆ ಪಡೆಯುವ ಸಾಧ್ಯತೆಯಿದೆ. ತಹಾವೂರ್ ರಾಣಾ ತನಿಖೆಗಾಗಿ NIA ಅಧಿಕಾರಿಗಳು ವಿಶೇಷ ತಂಡಗಳನ್ನು ರಚಿಸಿದ್ದಾರೆ. ಎನ್‌ಐಎ ಕಚೇರಿಯ ಬಳಿ ಬಿಎಸ್‌ಎಫ್ ಪಡೆಗಳೊಂದಿಗೆ ಭದ್ರತೆ ಒದಗಿಸಲಾಗಿದೆ.

ರಾಣಾನನ್ನು ಹೇಗೆ ವಿಚಾರಣೆ ನಡೆಸಬೇಕು ಎಂಬುದರ ಕುರಿತು NIA ಅಧಿಕಾರಿಗಳು ಪ್ರಮುಖ ಸಭೆ ನಡೆಸಿದ್ದಾರೆ. ಏತನ್ಮಧ್ಯೆ, ತಹಾವೋರ್ ರಾಣಾ ಅವರನ್ನು ಅಮೆರಿಕದ ಅಧಿಕಾರಿಗಳು NIA ಗೆ ಹಸ್ತಾಂತರಿಸಿದರು. ರಾಣಾ ವಿಚಾರಣೆಗಾಗಿ ದೆಹಲಿ ಎನ್‌ಐಎ ಕಚೇರಿಯಲ್ಲಿ ವಿಶೇಷ ಕೊಠಡಿಯೊಂದನ್ನು ಸಿದ್ದಪಡಿಸಿದ್ದಾರೆ. 12 ಅಧಿಕಾರಿಗಳು ರಾಣಾನನ್ನು ವಿಚಾರಣೆ ಮಾಡಲಿದ್ದಾರೆ. ಮತ್ತೊಂದೆಡೆ, ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಿದ್ದಕ್ಕೆ ಅಂದಿನ ಸೈನಿಕರು ಸಂತೋಷ ವ್ಯಕ್ತಪಡಿಸಿದರು. ಮುಂಬೈ ದಾಳಿಯ ಸಮಯದಲ್ಲಿ ಎನ್ಎಸ್ಜಿ ಕಮಾಂಡೋ ಸುರೇಂದ್ರ ಸಿಂಗ್ ಪ್ರತಿ-ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಈ ಕಾರ್ಯಾಚರಣೆಯಲ್ಲಿ ಇಬ್ಬರು ಭಯೋತ್ಪಾದಕರನ್ನು ಕೊಂದಿದ್ದರು. ರಾಣಾನನ್ನು ತಕ್ಷಣವೇ ಗಲ್ಲಿಗೇರಿಸಬೇಕೆಂದು ಸುರೇಂದ್ರ ಒತ್ತಾಯಿಸಿದರು.

ಪಾಕಿಸ್ತಾನ ಮೂಲದ ಕೆನಡಾ ಪ್ರಜೆ ತಹಾವೋರ್ ರಾಣಾ, 26/11 ಮುಂಬೈ ದಾಳಿಯ ಪ್ರಮುಖ ಮಾಸ್ಟರ್ ಮೈಂಡ್ ಎಂದು ಆರೋಪಿಸಲಾಗಿದೆ. ಲಾಸ್ ಏಂಜಲೀಸ್ ಜೈಲಿನಲ್ಲಿದ್ದ ಆತನನ್ನು ಭಾರತಕ್ಕೆ ಹಸ್ತಾಂತರ ಮಾಡಬೇಕೆಂದು ಗಂಭೀರ ಪ್ರಯತ್ನಗಳನ್ನು ಮಾಡಿತ್ತು. ಭಾರತಕ್ಕೆ ತನ್ನನ್ನು ಹಸ್ತಾಂತರ ಮಾಡಬಾರದು ಎಂದು ರಾಣಾ ಫೆಡರಲ್ ನ್ಯಾಯಾಲಯಗಳು ಮತ್ತು ಸ್ಯಾನ್ ಫ್ರಾನ್ಸಿಸ್ಕೋದ ಯುಎಸ್ ನ್ಯಾಯಾಲಯದ ಮೊರೆ ಹೋಗಿದ್ದ. ಆದರೆ ನ್ಯಾಯಾಲಯಗಳಲ್ಲಿ ಆತನಿಗೆ ಹಿನ್ನಡೆಯಾಗಿದ್ದು ಅಂತಿಮವಾಗಿ ಭಾರತಕ್ಕೆ ಹಸ್ತಾಂತರಿಸಲಾಯಿತು.
ಮುಂಬೈ ಸ್ಫೋಟದ ಮಾಸ್ಟರ್ ಮೈಂಡ್ ಎಂದು ನಂಬಲಾಗಿರುವ ಪಾಕಿಸ್ತಾನಿ-ಅಮೆರಿಕನ್ ಭಯೋತ್ಪಾದಕ ಡೇವಿಡ್ ಕೋಲ್ಮನ್ ಹೆಡ್ಲಿಯೊಂದಿಗೆ ರಾಣಾ ಸಂಪರ್ಕವನ್ನು NIA ಈಗಾಗಲೇ ಗುರುತಿಸಿದೆ. 26/11 ದಾಳಿಗೂ ಮುನ್ನ ಹೆಡ್ಲಿ ಎಂಟು ಬಾರಿ ಭಾರತಕ್ಕೆ ಭೇಟಿ ನೀಡಿದ್ದ. ಆ ಸಮಯದಲ್ಲಿ ರಾಣಾ ಮತ್ತು ಹೆಡ್ಲಿ 231 ಬಾರಿ ಭೇಟಿ ಮಾಡಿದ್ದರು ಎಂದು NIA ಹೇಳಿದೆ. ಮುಂಬೈನಲ್ಲಿ ನಡೆದ 26/11 ಭಯೋತ್ಪಾದಕ ದಾಳಿಯಲ್ಲಿ ಬಂಧಿಸಲ್ಪಟ್ಟ ಸುಮಾರು 16 ವರ್ಷಗಳ ನಂತರ, ರಾಣಾ ಭಾರತಕ್ಕೆ ಕರೆತರಲು ಹಾದಿ ಸುಗಮವಾಗಿದೆ. ಇದರೊಂದಿಗೆ, ಅಧಿಕಾರಿಗಳು ಆತನಿಂದ ಹೆಚ್ಚಿನ ವಿವರಗಳನ್ನು ಸಂಗ್ರಹಿಸಲು ತನಿಖೆ ನಡೆಸಲಿದ್ದಾರೆ.

