ಸುದ್ದಿಒನ್, ಚಿತ್ರದುರ್ಗ, ಫೆ. 04: ಸ್ವಾತಂತ್ರ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದ, ಗಾಂಧೀಜಿಗೆ ದೇಗುಲು ನಿರ್ಮಿಸಿ ಮಹಾತ್ಮನಿಗೆ ಪೂಜೆ ಸಲ್ಲಿಸುತ್ತಿರುವ ತುರುವನೂರು ಗ್ರಾಮ ವಿಶ್ವದಾಖಲೆ ಭೂಪಟದಲ್ಲಿ ರಾರಾಜಿಸಲು ದಿನಗಣನೆ ಆರಂಭವಾಗಿದೆ.
ತುರುವನೂರು ಗ್ರಾಮದಲ್ಲಿ ಫೆ.13ರಂದು ಆಂಜನೇಯ ಸ್ವಾಮಿ ಜಾತ್ರೆ ನಡೆಯಲಿದ್ದು, ಈ ಜಾತ್ರೋತ್ಸವವನ್ನು ಸ್ಮರಣೀಯಗೊಳಿಸಲು ಬೆಂಗಳೂರಿನಲ್ಲಿರುವ ತುರುವನೂರು ಗ್ರಾಮದ ಇಂಜಿನಿಯರ್ ಆಗಿರುವ ದಂಪತಿ ಸಿದ್ಧತೆ ಕೈಗೊಂಡಿದ್ದಾರೆ. ನಮ್ಮ ಊರು ವಿಶ್ವದ ಭೂಪಟದಲ್ಲಿ ದಾಖಲಾಗಬೇಕೆಂಬ ಆಸೆಯಿಂದ ಎಂ.ಮಂಜುನಾಥ್ ರೆಡ್ಡಿ, ಸಿ.ಎಂ.ಪ್ರತಿಮಾ ರೆಡ್ಡಿ ದಂಪತಿ ನೇತೃತ್ವದ ತಂಡ ಸಾಹಸದ ಕೆಲಸಕ್ಕೆ ಕೈ ಹಾಕಿದ್ದು, 100 ಮಂದಿ ಸದಸ್ಯರು ಬೆಂಬಲವಾಗಿ ನಿಂತಿದ್ದಾರೆ.
ತುರುವನೂರು ಗ್ರಾಮದಲ್ಲಿ ಕಡಬನಕಟ್ಟೆ ರಸ್ತೆ ಮಾರ್ಗದಲ್ಲಿ ಐದು ಎಕರೆ ಜಾಗದಲ್ಲಿ 9 ಲಕ್ಷ ರೂಪಾಯಿ ವೆಚ್ಚದಲ್ಲಿ ಹನುಮಾನ್ ಕಲಾಕೃತಿ ಫೆ.8ರಂದು ಹೊರಹೊಮ್ಮಲಿದ್ದು, ಈಗಾಗಲೇ
ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಹನುಮಾನ್ ಕಲಾಚಿತ್ರ ತೀವ್ರ ಆಕರ್ಷಣೆಯಾಗಿದೆ. ಈಗಾಗಲೇ ಐದು ಎಕರೆ ಜಾಗವನ್ನು ಸ್ವಚ್ಛಗೊಳಿಸಿದ್ದು, 100ಕ್ಕೂ ಹೆಚ್ಚು ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಫೆ.8ರ ಶನಿವಾರದ ದಿನಗಣನೆಗೆ ಸಹಸ್ರಾರು ಸಂಖ್ಯೆಯ ಜನರು ದೃಶ್ಯ ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ.
ಬೆಂಗಳೂರಿನಲ್ಲಿ ಎಸ್‌ಎಐ ಕಾಡ್ ಕಂಪನಿ ಸ್ಥಾಪಿಸಿಕೊಂಡು ಹಲವು ಮಂದಿಗೆ ಉದ್ಯೋಗ ನೀಡಿರುವ ತಂಡಕ್ಕೆ ಹುಟ್ಟೂರಿನಲ್ಲಿ ಏನಾದ್ರೂ ಸೇವೆ ಮೂಲಕ ಆತ್ಮಸಂತೃಪ್ತಿ ಪಡೆಯಬೇಕೆಂಬ ಛಲವೇ ಹನುಮಾನ್ ಕಲಾಕೃತಿ ಹೊರಹೊಮ್ಮಲು ದಿನಗಣನೆ ಆಗಿರುವುದು.
ಐದು ಎಕರೆಯಲ್ಲಿ ರಂಗೋಲಿ ರೀತಿ ಗೆರೆ ಹಾಕಲಾಗುತ್ತದೆ, ಬಳಿಕ ಈರುಳ್ಳಿ ಸೇರಿ ವಿವಿಧ ತರಕಾರಿಗಳನ್ನು ಅವುಗಳ ಮೇಲಿಡಲಾಗುತ್ತದೆ. ನಂತರ ಈ ದೃಶ್ಯವನ್ನು ನೋಡುವುದೇ ಸೌಭಾಗ್ಯ. ಅದರಲ್ಲೂ ಡ್ರೋನ್ ಕ್ಯಾಮೆರಾದ ಮೂಲಕ ಸೆರೆ ಹಿಡಿಯುವ ದೃಶ್ಯ ರೋಮಾಂಚನ. ಈ ನಿಟ್ಟಿನಲ್ಲಿ ಈಗಾಗಲೇ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಈ ಕಲಾಕೃತಿ ನೋಬೆಲ್ ವರ್ಲ್ಡ್ ರೆಕಾರ್ಡ್ನಲ್ಲಿ (ವಿಶ್ವಮಟ್ಟದಲ್ಲಿ) ದಾಖಲಾಗುವುದು ಸಾಧ್ಯತೆ ಹೆಚ್ಚು ಇದೆ.
ಎಂಟನೂರು ಮಾಡಲ್‌ಗಳು: ಈಗಾಗಲೇ ನಾವು 800 ಮಾಡೆಲ್‌ಗಳನ್ನು ರಚಿಸಿದ್ದೇವೆ. ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಹನುಮಾನ್ ಕಲಾಕೃತಿ ಅಂತಿಮಗೊಳಿಸಲಾಗಿದೆ. ನಮ್ಮ ತಂಡದಲ್ಲಿ 100 ಮಂದಿ ಇದ್ದೇವೆ. ಈ ಕಾರ್ಯಕ್ಕೆ ಸ್ವಯಂ ಸೇವಕರಾಗಲು ಇಚ್ಛಿಸುವವರು ನೋಂದಣಿ (9901995109) ಮಾಡಿಸಿಕೊಳ್ಳಬಹುದು. ಅವರೆಲ್ಲರಿಗೂ ಅಂತಾರಾಷ್ಟ್ರೀಯ ಮಟ್ಟದ ಪ್ರಮಾಣ ಪತ್ರ ವಿತರಿಸಲಾಗುವುದು.
ಫೆಬ್ರವರಿ.18ರಂದು ಗ್ರಾಮಕ್ಕೆ ಸಿಎಂ ಸಿದ್ದರಾಮಯ್ಯ ಆಗಮಿಸುತ್ತಿದ್ದು, ಅಲ್ಲಿಯವರೆಗೆ ಕಲಾಕೃತಿಯನ್ನು ಉಳಿಸಿಕೊಳ್ಳಲು ಚಿಂತನೆ ನಡೆಸಲಾಗಿದೆ. ಹಗಲು-ರಾತ್ರಿ ಶ್ರಮಪಟ್ಟು ಒಂದೂವರೆ ವರ್ಷದ ಬಳಿಕ ರೂಪಕೊಟ್ಟಿದ್ದೇವೆ. ಇದು ದೇವರಿಗೆ ನಾವು ಸಲ್ಲಿಸುವ ಭಕ್ತಿ. ಆರು ಮಂದಿ ಇಂಜಿನಿಯರ್‌ಗಳ ತಂಡ ಕೆಲಸ ಮಾಡುತ್ತಿದೆ ಎನ್ನುತ್ತಾರೆ ಎಂ.ಸಿ.ಪ್ರತಿಮಾರೆಡ್ಡಿ.
ಇಡೀ ವಿಶ್ವವೇ ತುರುವನೂರು ಗ್ರಾಮದತ್ತ ಗಮನಹರಿಸಲಿದೆ. ಅಂತಹ ಬೃಹತ್ ಹನುಮಾನ್ ಕಲಾಕೃತಿ ಭೂತಾಯಿ ಮಡಲಲ್ಲಿ ಮೂಡಲಿದೆ. ವಿಶ್ವದ ಅತಿದೊಡ್ಡ ಆಂಜನೇಯ ಕಲಾಕೃತಿ ನಿರ್ಮಾಣಕ್ಕೆ ಮಾನಸಿಕವಾಗಿ ಸಿದ್ಧಗೊಂಡಿದ್ದೇವೆ. ಗ್ರಾಮಸ್ಥರ ಸಹಕಾರ ಅದ್ವಿತೀಯವಾಗಿದೆ. ಗೆದ್ದೇ ಗೆಲ್ಲುತ್ತೇವೆ ಎಂಬ ಆತ್ಮವಿಶ್ವಾಸ ನಮಲ್ಲಿದೆ ಎನ್ನುತ್ತಾರೆ ಎಂ.ಮಂಜುನಾಥ್ ರೆಡ್ಡಿ.
ಮಂಜುನಾಥ್ ರೆಡ್ಡಿ ತಂಡ ತನ್ನ ಇತಿಮಿತಿಯಲ್ಲಿ ಸ್ವಂತ ಹಣ ವೆಚ್ಚ ಮಾಡಿ ಕಾರ್ಯ ಮಾಡುತ್ತಿದೆ. ವಿಶ್ವದಾಖಲೆ ಆಗುವುದು ಖಚಿತ. ನಿರೀಕ್ಷೆಗೂ ಮೀರಿ ಭಕ್ತರ ಬೆಂಬಲ ದೊರೆಯುತ್ತಿದೆ ಎನ್ನುತ್ತಾರೆ ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಂಯೋಜಕ ಎಸ್.ಆರ್.ಪ್ರಭಂಜನ್.