ವರದಿ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಚಿತ್ರದುರ್ಗ, (ಜ.23) : ಗುಂಡೇರಿ ಕಾವಲು ಮಹಾತ್ಮಗಾಂಧಿ ಕೋಆಪರೇಟಿವ್ ಸೊಸ್ಯಟಿಗೆ ನೀಡಲಾಗಿರುವ ನಾಲ್ಕುನೂರು ಎಕರೆ, ವನಕೆ ಮರಡಿ ಕಾವಲು ಸಾಮೂಹಿಕ ಸೇವಾ ಸಹಕಾರ ಸಂಘಕ್ಕೆ ನೀಡಿರುವ 1125.25 ಎಕರೆ, ತಾಳಿಕಟ್ಟೆ ಕಾವಲು ಕಾರ್ಯವಲ್ಲಭಾಸ್ಕರಿ ಬೇಸಾಯ ಸಂಘಕ್ಕೆ ನೀಡಿರುವ 807.34 ಎಕರೆ, ಅರೇಹಳ್ಳಿ ಕಾವಲು ನೆಹರೂ ಸಾಮೂಹಿಕ ವ್ಯವಸಾಯ ಸಹಕಾರ ಸಂಘಕ್ಕೆ ನೀಡಿರುವ 453.36 ಎಕರೆ ಜಮೀನುಗಳನ್ನು ರದ್ದುಪಡಿಸಿ ಅರಣ್ಯ ಮತ್ತು ಕಂದಾಯ ಇಲಾಖೆಗೆ ಸೇರಿದ ಜಮೀನುಗಳಲ್ಲಿ ಮೂರು ತಲೆಮಾರಿನಿಂದಲೂ ಉಳುಮೆ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಬಡವರು ನಿರಾಶರಾಗುವುದು ಬೇಡ. ಎಲ್ಲರಿಗೂ ಜಮೀನು ಕೊಡುವ ಕೆಲಸ ನಡೆಯುತ್ತಿದೆ ಎಂದು ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಅಭಯದ ಭರವಸೆ ನೀಡಿದರು.
ಹೊಳಲ್ಕೆರೆಯ ಚಿಕ್ಕಜಾಜೂರು ರಸ್ತೆಯಲ್ಲಿರುವ ಮೈರಾಡ ಸಭಾ ಭವನದಲ್ಲಿ ಸೋಮವಾರ ಅಧಿಕಾರಿಗಳ ಜೊತೆ ಬಗರ್‍ಹುಕುಂ ಸಕ್ರಮೀಕರಣ ಸಮಿತಿ ಸಭೆ ನಡೆಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಎಂ.ಚಂದ್ರಪ್ಪ ಹೊಳಲ್ಕೆರೆ ಕ್ಷೇತ್ರಾದ್ಯಂತ ಫಾರಂ ನಂ.50, 53, 57 ರಲ್ಲಿ 12 ಸಾವಿರದ 192 ಅರ್ಜಿಗಳು ಸಲ್ಲಿಕೆಯಾಗಿದ್ದು.
ಇಷ್ಟೊಂದು ಜಮೀನು ನೀಡಲು ಕಂದಾಯ ಇಲಾಖೆಯಲ್ಲಿ ಇಲ್ಲ. ಸರ್ಕಾರದ ನಿಯಮದ ಪ್ರಕಾರ ಯಾವ್ಯಾವುದು ಕೊಡಬೇಕು ಎನ್ನುವುದನ್ನು ಅಧಿಕಾರಿಗಳಿಂದ ಸರ್ವೆ ನಡೆಸಿ ನಂತರ ನ್ಯಾಯಯುತವಾಗಿ ಜಮೀನಿಲ್ಲದ ಬಡವರನ್ನು ಗುರುತಿಸಿ ಭೂಮಿ ನೀಡಲಾಗುವುದು ಯಾರು ಆತಂಕಕ್ಕೊಳಗಾಗುವುದು ಬೇಡ ಎಂದು ಧೈರ್ಯ ಹೇಳಿದರು.
ಹೊಳಲ್ಕೆರೆ ಕ್ಷೇತ್ರಾದ್ಯಂತ 121 ಹಳ್ಳಿಗಳಿಂದ ಅರ್ಜಿಗಳು ಸಲ್ಲಿಕೆಯಾಗಿದ್ದು, ನಲವತ್ತು ಹಳ್ಳಿಗಳಲ್ಲಿ ಸರ್ಕಾರಿ ಜಮೀನು ಗುರುತಿಸಲಾಗಿದೆ. ಸದ್ಯಕ್ಕೆ ಎಂಟು ಹಳ್ಳಿಗಳಿಂದ 121 ಫಲಾನುಭವಿಗಳನ್ನು ಗುರುತಿಸಿ ಜಮೀನು ನೀಡಲಾಗುವುದು. ಉಳುಮೆಗೆ ಭೂಮಿಯೇ ಇಲ್ಲದ ಬಡವರನ್ನು ಗುರುತಿಸಿ ಜಮೀನು ನೀಡಲು 232 ಹಳ್ಳಿಗಳಲ್ಲಿ ತ್ವರಿತವಾಗಿ ಸರ್ವೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.
ತಾಳ್ಯ, ಗಟ್ಟಿಹೊಸಹಳ್ಳಿ, ತಿರುಮಲಾಪುರ, ಕುಮ್ಮಿನಘಟ್ಟ, ಕಸವನಹಳ್ಳಿ, ಮಲಸಿಂಗನಹಳ್ಳಿ, ಮದ್ದೇರು ಸೇರಿದಂತೆ ಎಂಟು ಹಳ್ಳಿಗಳಲ್ಲಿ ಬಡವರಿಗೆ ಜಮೀನು ನೀಡುವ ಕೆಲಸ ಚುರುಕಿನಿಂದ ನಡೆಯುತ್ತಿದೆ. ಎಲ್ಲೆಲ್ಲಿ ಉಳುಮೆ ಮಾಡಿದ್ದಾರೆನ್ನುವುದನ್ನು ಮುಂದಿನ ದಿನಗಳಲ್ಲಿ ಸರ್ವೆ ಮಾಡಲಾಗುವುದು. ಫಾರಂ ನಂ.50, 53 ರಲ್ಲಿ ಅರ್ಜಿ ಸಲ್ಲಿಸಿರುವವರಿಗೆ ರಾಜ್ಯ ಸರ್ಕಾರ ಕೆಲವೊಂದು ನಿಬಂಧನೆಗಳನ್ನು ಸಡಿಲಗೊಳಿಸಿದೆ. ಕಳೆದ ಮೂರು ವರ್ಷದ ಹಿಂದೆ ಮುನ್ನೂರು ಎಕರೆ ಜಮೀನನ್ನು ಜಾನುವಾರುಗಳ ಮೇವಿಗೆ ಮೀಸಲಿಡುವಂತೆ ರಾಜ್ಯ ಸರ್ಕಾರ ಆದೇಶಿಸಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಜಾನುವಾರುಗಳ ಸಂಖ್ಯೆ ಕಡಿಮೆಯಾಗಿದೆ. ಈ ಸಂಬಂಧ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿಸದ್ದೇನೆ. ಫಾರಂ ನಂ.57 ರಲ್ಲಿಯೂ ಅರ್ಜಿ ಸಲ್ಲಿಸಿರುವವರಿಗೆ ರಿಯಾಯಿತಿ ನೀಡುವಂತೆ ಸಭೆ ನಡೆಸಿದ್ದೇನೆ. ಜಾನುವಾರುಗಳನ್ನು ಮೇವಿಗಾಗಿ ಅಡವಿಗೆ ಕಳಿಸುವುದು ಕಡಿಮೆಯಾಗಿದೆ. ಮನೆಯಲ್ಲಿಯೇ ಸಾಕುವ ವ್ಯವಸ್ಥೆಯಿರುವುದನ್ನು ಸರ್ಕಾರದ ಗಮನಕ್ಕೆ ತಂದಿದ್ದೇನೆಂದು ಮಾಹಿತಿ ನೀಡಿದರು.
ಹೊಳಲ್ಕೆರೆ ಕ್ಷೇತ್ರದಲ್ಲಿ ಉಳುಮೆ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಬಡವರು ನಿರಾಶರಾಗುವುದು ಬೇಡ. ಜಮೀನಿಲ್ಲದ ಎಸ್.ಸಿ, ಎಸ್ಟಿಗಳನ್ನು ಗುರುತಿಸಿ ಖಾಸಗಿ ಜಮೀನು ಖರೀಧಿಸಿ ನೀಡಲಾಗುವುದು. ಎಲ್ಲೆಲ್ಲಿ ಅರಣ್ಯ ಪ್ರದೇಶದಲ್ಲಿ ಉಳುಮೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೋ ಅಂತಹವರುಗಳನ್ನು ಒಕ್ಕಲೆಬ್ಬಿಸಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದ ಶಾಸಕ ಎಂ.ಚಂದ್ರಪ್ಪ ಜಿಲ್ಲಾಧಿಕಾರಿ ಹಂತದಲ್ಲಿಯೇ ಸರ್ವೆ ನಡೆಸಿ ಸೊಸೈಟಿಗಳಿಗೆ ನೀಡಿರುವ ಕಾವಲು ಜಮೀನುಗಳನ್ನು ರದ್ದುಪಡಿಸಿ ಬಡವರಿಗೆ ಹಂಚಿಕೆ ಮಾಡಲಾಗುವುದು ಎಂದು ಆಶ್ವಾಸನೆ ಕೊಟ್ಟರು. ಸರ್ವೆಗೆ ಅಧಿಕಾರಿಗಳು ಹೋಗುವಾಗ ಬಗರ್‍ಹುಕುಂ ಸಮಿತಿ ಸದಸ್ಯರುಗಳ ಗಮನಕ್ಕೆ ತಂದು ಜೊತೆಯಲ್ಲಿ ಕರೆದುಕೊಂಡು ಹೋಗಬೇಕು ಎಂದು ಸೂಚಿಸಿರುವುದಾಗಿ ತಿಳಿಸಿದರು.
ಉದ್ಯೋಗ ಖಾತ್ರಿಯಲ್ಲಿ ಕೂಲಿ ಮಾಡುವ ಬಡವರಿಗೂ ನ್ಯಾಯ ಒದಗಿಸುವುದು ನಮ್ಮ ಆದ್ಯ ಕರ್ತವ್ಯ. ಗುಂಡೇರಿ ಕಾವಲು, ವನಕೆ ಮರಡಿ ಕಾವಲು, ತಾಳಿಕಟ್ಟೆ ಕಾವಲು, ಅರೇಹಳ್ಳಿ ಕಾವಲಿನಲ್ಲಿ ನೂರಾರು ವರ್ಷಗಳಿಂದ ಜಮೀನು ಉಳುಮೆ ಮಾಡಿಕೊಂಡು ಬರುತ್ತಿರುವವರ ಸಮಸ್ಯೆಗಳ ಕುರಿತು ಇನ್ನೆರಡು ಮೂರು ತಿಂಗಳಿನಲ್ಲಿ ವಿಧಾನಸಭೆ ಅಧಿವೇಶನದಲ್ಲಿ ಮಂಜೂರಾತಿ ಪಡೆದು ಭೂಮಿ ನೀಡುತ್ತೇವೆ. ಗುತ್ತಿಗೆ ಪದ್ದತಿಯಡಿ ಜಮೀನು ಮಾಡಿಕೊಂಡು ಜೀವನ ಸಾಗಿಸುತ್ತಿರುವವರ ಸ್ಥಿತಿಗತಿಗಳನ್ನು ವಿಧಾನಸಭೆ ಅಧಿವೇಶನದಲ್ಲಿ ಪ್ರಸ್ತಾಪಿಸಿ ಸರ್ಕಾರದ ಕಣ್ತೆರೆಸಿದ್ದೇನೆ. 1969 ರೂಲ್ ಪ್ರಕಾರ ಬಡವರಿಗೆ ಜಮೀನು ಕೊಡುವ ಕೆಲಸ ಪ್ರಾಮಾಣಿಕವಾಗಿ ನಡೆಯುತ್ತಿದೆ ಎಂದರು.
ತಹಶೀಲ್ದಾರ್ ರಮೇಶಾಚಾರಿ, ಚಿತ್ರದುರ್ಗ ತಹಶೀಲ್ದಾರ್ ಜಿ.ಹೆಚ್.ಸತ್ಯನಾರಾಯಣ, ಬಗರ್‍ಹುಕುಂ ಸಮಿತಿ ಸದಸ್ಯರುಗಳಾದ ದಗ್ಗೆಶಿವಪ್ರಕಾಶ್, ಕೃಷ್ಣಮೂರ್ತಿ, ಅಂಗಡಿ ಹಾಲಮ್ಮ, ಪ್ರಶಾಂತ್, ಪಣಿಯಪ್ಪ ಸೇರಿದಂತೆ ಕಂದಾಯ ಇಲಾಖೆಯವರು ಸಭೆಯಲ್ಲಿ ಭಾಗವಹಿಸಿದ್ದರು.