ಚಿತ್ರದುರ್ಗ,(ಮೇ.18) : ರಾಜ್ಯದ ಗೋಸಂಪತ್ತಿನ ರಕ್ಷಣೆಗಾಗಿ ಸರ್ಕಾರ 31 ಹೊಸ ಗೋಶಾಲೆಗಳನ್ನು ತೆರೆಯಲು ನಿರ್ಧರಿಸಿದೆ. ಚಿತ್ರದುರ್ಗ ಜಿಲ್ಲೆಗೆ ಒಟ್ಟು 4 ಗೋಶಾಲೆಗಳ ಅವಶ್ಯಕತೆಯಿದೆ. ಇದರಲ್ಲಿ ಚಳ್ಳಕೆರೆ ತಾಲೂಕಿನ ಕುರುಡಿಹಳ್ಳಿಯಲ್ಲಿ ಒಂದು ಗೋಶಾಲೆ ಕಾರ್ಯನಿರ್ವಹಿಸುತ್ತಿದೆ. ಇದಕ್ಕೆ ಪೂರಕವಾಗಿ 3 ಹೊಸ ಗೋಶಾಲೆಗಳನ್ನು ಜಿಲ್ಲಾ ವ್ಯಾಪ್ತಿಯಲ್ಲಿ ತೆರೆಯಲಾಗುವುದು. ಗೋಶಾಲೆಗಳಿಗೆ ಅಗತ್ಯವಿರುವ ಸೂಕ್ತ ಭೂಮಿಯನ್ನು ವಾರದಲ್ಲಿ ಗುರುತಿಸಿ ಮಂಜೂರು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧುವಾರ ಜರುಗಿದ ಜಿಲ್ಲಾ ಪ್ರಾಣಿ ದಯಾ ಸಂಘದ ಸಭೆಯ ಅಧ್ಯಕ್ಷೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿನ ಅಮೃತ ಕಾವಲು ಪ್ರದೇಶ ಒತ್ತುವರಿಯಾಗದಂತೆ ಅಧಿಕಾರಿಗಳು ಕ್ರಮ ವಹಿಸಬೇಕು. ಉಚ್ಛನ್ಯಾಯಾಲಯ ಈ ಕುರಿತು ಸ್ಪಷ್ಟ ನಿರ್ದೇಶನ ನೀಡಿದೆ. ರೇಖಲಗೆರೆ ಕಾವಲು ಪ್ರದೇಶವನ್ನು ನೆಡುತೋಪುವಾಗಿ ಪರಿವರ್ತಿಸಲು ಸರ್ಕಾರ ಮಂಜೂರು ಮಾಡಿದೆ. ಅನ್ಯ ಕಾರ್ಯಗಳಿಗೆ ಕಾವಲು ಪ್ರದೇಶವನ್ನು ಬಳದಂತೆ ಅಧಿಕಾರಿಗಳು ನಿಗಾವಹಿಸಬೇಕು ಎಂದರು.
ಖಾಸಗಿ ಗೋಶಾಲೆ ನಡೆಸುವವರು ಗೋ ಹತ್ಯಾ ನಿಷೇಧ ಕಾಯ್ದೆಯಡಿ ರಕ್ಷಿಸಿದ ಜಾನುವಾರುಗಳಿಗೆ ಆಶ್ರಯ ಒದಗಿಸಬೇಕು. ಇಲ್ಲವಾದರೆ ಖಾಸಗಿ ಗೋಶಾಲೆಗಳಿಗೆ ಸರ್ಕಾರ ನೀಡುತ್ತಿರುವ ಸಹಾಯಧನವನ್ನು ತಡೆ ಹಿಡಿಯಲಾಗುವುದು ಎಂದು ಎಚ್ಚರಿಕೆ ನೀಡಿದರು.
ಚಿತ್ರದುರ್ಗ ತಾಲೂಕು ಸಿಂಗಾಪುರ ಬಳಿ 35 ಎಕರೆ ಜಮೀನು ಇದೆ. ಇದರಲ್ಲಿ ಒಂದು ಗೋಶಾಲೆ ತೆರೆಯಲು ಅಗತ್ಯವಿರುವ 10 ಎಕರೆ ಜಾಗವನ್ನು ಸಂಬಧಿಸಿದ ತಹಶೀಲ್ದಾರ್ ಹಾಗೂ ಪಶು ಇಲಾಖೆ ಉಪನಿರ್ದೇಶಕರು ಜಂಟಿಯಾಗಿ ಪರಿಶೀಲನೆ ನಡೆಸಿ ವರದಿ ನೀಡಿ. ಮೊಳಕಾಲ್ಮೂರು ಹಾಗೂ ಹಿರಿಯೂರು ತಾಲೂಕುಗಳಲ್ಲಿ ಗೋಶಾಲೆಗೆ ಜಮೀನು ಗುರುತಿಸುವ ಕೆಲಸವಾಗಬೇಕು. ಬರಗಾಲಕ್ಕೆ ತುತ್ತಾಗುವ ಪ್ರದೇಶದಲ್ಲಿ ಗೋಶಾಲೆ ತೆರೆಯಲು ಅಧಿಕಾರಿಗಳು ಅಗತ್ಯ ಕ್ರಮ ವಹಿಸಬೇಕು. ಹೊಸದುರ್ಗ ಹಾಗೂ ಹೊಳಲ್ಕೆರೆ ತಾಲೂಕುಗಳಿಗೆ ಸಂಬಂಧ ಪಟ್ಟ ತಹಶೀಲ್ದಾರರು ಸಹ ಜಾಗ ಗುರುತಿಸಿ ವರದಿ ನೀಡಬೇಕು ಎಂದು ಸೂಚನೆ ನೀಡಿದರು.
ಕಾತ್ರಾಳ್ ಕೆರೆ ಬಳಿಯ ಆದಿಚುಂಚನಗಿರಿ ಗೋಶಾಲೆಯ ನಿರ್ವಾಹಕರಾದ ನಿರಂಜನ್ ಮೂರ್ತಿ ಸಭೆಯಲ್ಲಿ ಮಾತನಾಡಿ, ಸರ್ಕಾರ ಎನ್.ಡಿ.ಆರ್.ಎಫ್ ಮಾರ್ಗಸೂಚಿ ಅನುಸಾರ ಪ್ರತಿ ಜಾನುವಾರುವಿಗೆ ನೀಡುತ್ತಿರುವ ಸಹಾಯಧನ ಹೆಚ್ಚಿಸಲು ಮನವಿ ಮಾಡಿದರು. ಕೋವಿಡ್ ಸಂದರ್ಭದಲ್ಲಿ ಗೋಶಾಲೆಗಳಿಗೆ ಯಾವುದೇ ಸಹಾಯಧನ ಬಂದಿರುವುದಿಲ್ಲ. ಬಾಕಿ ಸಹಾಯಧನವನ್ನು ಸಹ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.
ಪಶು ಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ಎಸ್.ಕಲ್ಲಪ್ಪ ಮಾತನಾಡಿ. ಎನ್.ಡಿ.ಆರ್.ಎಫ್ ಅಡಿ ನೀಡುತ್ತಿರುವ ಸಹಾಯಧನ ಹೆಚ್ಚಿಸುವ ಕುರಿತು ಕೇಂದ್ರ ಸರ್ಕಾರ ಮಟ್ಟದಲ್ಲಿ ಚಿಂತನೆ ನಡೆಸಲಾಗಿದೆ. ಸದ್ಯ ಎನ್.ಡಿ.ಆರ್.ಎಫ್ ಮಾರ್ಗಸೂಚಿ ಅನುಸಾರ ದಿನ ಒಂದಕ್ಕೆ ಪ್ರತಿ ಜಾನುವಾರಿಗೆ 70 ರೂಪಾಯಿಗಳನ್ನು ನಿರ್ವಹಣೆ ವೆಚ್ಚವೆಂದು ನಿಗದಿಪಡಿಸಲಾಗಿದೆ. ಇದರಲ್ಲಿ ಶೇ.25 ರಷ್ಟು ಹಣವನ್ನು ಖಾಸಗಿ ಗೋಶಾಲೆಗಳಿಗೆ ಜಾನುವಾರು ಸಂಖ್ಯೆ ಆಧರಿಸಿ ಸಹಾಯಧನವಾಗಿ ನೀಡಲಾಗುತ್ತದೆ ಎಂದು ತಿಳಿಸಿದರು.
ಸಭೆಯಲ್ಲಿ ಪ್ರಸಕ್ತ ವರ್ಷಕ್ಕೆ 10 ಗೋಶಾಲೆಗಳಿಗೆ ಸಹಾಯಧನ ನೀಡಲು ಅನುಮೋದನೆ ನೀಡಲಾಯಿತು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ನಂದಿನಿದೇವಿ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಪಾಲಿ ಕ್ಲಿನಿಕ್ ಉಪನಿರ್ದೇಶಕ ಡಾ.ಪ್ರಸನ್ನ, ಚಿತ್ರದುರ್ಗ ತಹಶೀಲ್ದಾರ್ ಸತ್ಯನಾರಾಯಣ, ವಕೀಲರು ಹಾಗೂ ಜಿಲ್ಲಾ ಪ್ರಾಣಿ ಕಲ್ಯಾಣ ಅಧಿಕಾರಿ ದೇವಿಪ್ರಸಾದ್, ಜಿಲ್ಲೆಯ ಎಲ್ಲ ತಾಲ್ಲೂಕಿನ ಮುಖ್ಯ ಪಶು ವೈದ್ಯಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.