ಪಾಟ್ನಾ: ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ಪ್ರಸ್ತುತ ಪಾಟ್ನಾದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಯಾದವ್ ಅವರ ಕಿರಿಯ ಪುತ್ರ ತೇಜಸ್ವಿ ಯಾದವ್‌ಗೆ ಕರೆ ಮಾಡಿ ಅವರ ಆರೋಗ್ಯ ಸ್ಥಿತಿಯನ್ನು ವಿಚಾರಿಸಿದ್ದಾರೆ. ಮತ್ತು ಅನಾರೋಗ್ಯದಿಂದ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಧಾನಿ ಹಾರೈಸಿದ್ದಾರೆ ಎಂದು ಆರ್‌ಜೆಡಿ ರಾಜ್ಯ ವಕ್ತಾರ ಚಿತ್ರಂಜನ್ ಗಗನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಭಾನುವಾರ ಲಾಲು ಪ್ರಸಾದ್ ಅವರು ತಮ್ಮ 10 ಸರ್ಕ್ಯುಲರ್ ರಸ್ತೆಯ ನಿವಾಸದ ಮೆಟ್ಟಿಲಿನಿಂದ ಕೆಳಗೆ ಬಿದ್ದು ಅವರ ಬಲ ಭುಜದ ಮೂಳೆ ಮುರಿತವಾಗಿದೆ. ಇದಲ್ಲದೆ, ಅವರು ಮೂತ್ರಪಿಂಡ ಮತ್ತು ಶ್ವಾಸಕೋಶದ ಸೋಂಕು ಮತ್ತು ರಕ್ತದೊತ್ತಡ ಮತ್ತು ಇತರ ಕಾಯಿಲೆಗಳಿಂದ ಬಳಲುತ್ತಿದ್ದಾರೆ.
ಅವರನ್ನು ಪಾರಸ್ ಆಸ್ಪತ್ರೆಯ ಐಸಿಯುಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ. ಇದಕ್ಕೂ ಮುನ್ನ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಮತ್ತು ಎಲ್‌ಜೆಪಿ (ರಾಮ್ ವಿಲಾಸ್) ಅಧ್ಯಕ್ಷ ಚಿರಾಗ್ ಪಾಸ್ವಾನ್ ಅವರು ಆರ್‌ಜೆಡಿ ಮುಖ್ಯಸ್ಥರನ್ನು ಭೇಟಿಯಾಗಿ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲು ಹಾರೈಸಿದರು.
ಬಿಜೆಪಿ ನಾಯಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಕೂಡ, “ಲಾಲು ಪ್ರಸಾದ್ ಯಾದವ್ ಶೀಘ್ರ ಗುಣಮುಖರಾಗಲಿ ಮತ್ತು ಅವರು ಶೀಘ್ರ ಮನೆಗೆ ಮರಳಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ. ರಾಜ್ಯ ಸರ್ಕಾರ ಅವರನ್ನು ನೋಡಿಕೊಳ್ಳಬೇಕು ಮತ್ತು ಅಗತ್ಯವಿದ್ದರೆ ಅವರನ್ನು ಕಳುಹಿಸಲು ಸಾರಿಗೆ ವ್ಯವಸ್ಥೆ ಮಾಡಬೇಕು ಎಂದಿದ್ದಾರೆ.
ರಾಜ್ಯ ರಸ್ತೆ ನಿರ್ಮಾಣ ಸಚಿವ ನಿತಿನ್ ನವೀನ್ ಕೂಡ ಪಾರಸ್ ಆಸ್ಪತ್ರೆಗೆ ಆಗಮಿಸಿ ತೇಜಸ್ವಿ ಯಾದವ್ ಅವರನ್ನು ಭೇಟಿಯಾಗಿದ್ದಾರೆ.