ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಂಚಿಕೇರಿಯ ನಿವಾಸಿ, ರೀಲ್ಸ್ ಮೂಲಕ ರಾಜ್ಯಾದ್ಯಂತ ಜನಪ್ರಿಯರಾಗಿದ್ದ ಲಕ್ಷ್ಮೀ ನಾಯ್ಕ್ ಅಜ್ಜಿ (93) ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.ಡ್ರಾಮಾ ಜೂನಿಯರ್ ಖ್ಯಾತಿಯ ಮೊಮ್ಮಗ ಸೂರಜ್ ಜೊತೆ ಸೇರಿ ಸ್ಥಳೀಯ ಭಾಷೆಯಲ್ಲಿ ರೀಲ್ಸ್ ಮಾಡುತ್ತಿದ್ದ ಲಕ್ಷ್ಮೀ ನಾಯ್ಕ್ ಅಜ್ಜಿ, ತಮ್ಮ ಸರಳ ಅಭಿನಯ ಮತ್ತು ಮಾತಿನ ಶೈಲಿಯಿಂದ ಅಪಾರ ಅಭಿಮಾನಿಗಳನ್ನು ಗಳಿಸಿದ್ದರು.
ಮೊಮ್ಮಗ ಸೂರಜ್ ಹೇಳಿಕೊಟ್ಟಂತೆ ಅವರು ಪಾತ್ರ ನಿರ್ವಹಿಸುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಶೇಷ ಗುರುತಿಸಿಕೊಂಡಿದ್ದರು.
ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ನಿಧನ ಹೊಂದಿದ್ದಾರೆ. ಅವರ ಅಗಲಿಕೆಗೆ ಅಭಿಮಾನಿಗಳು ಹಾಗೂ ಸ್ಥಳೀಯರು ಆಳವಾದ ಸಂತಾಪ ಸೂಚಿಸಿದ್ದಾರೆ.

ಅಜ್ಜಿಯನ್ನು ಕಳೆದುಕೊಂಡ ನೋವಿನಲ್ಲಿ ಸೂರಜ್ ಕಣ್ಣೀರಿನಲ್ಲಿ ಮುಳುಗಿದ್ದು, ಕುಟುಂಬಸ್ಥರು ಹಾಗೂ ಬಂಧುಬಳಗದಲ್ಲಿ ಶೋಕದ ವಾತಾವರಣ ಮನೆಮಾಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಲಕ್ಷ್ಮೀ ನಾಯ್ಕ್ ಅಜ್ಜಿ ಅವರ ನೆನಪಿನಲ್ಲಿ ಭಾವಪೂರ್ಣ ಸಂದೇಶಗಳು ಹರಿದುಬರುತ್ತಿವೆ.
















