ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 02 : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಇಂದು ಚಿತ್ರದುರ್ಗಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಭೇಟಿ ವೇಳೆ ಹಲವು ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದಾರೆ. ಆ ಕಾರ್ಯಕ್ರಮದ ವಿವರದ ಕಂಪ್ಲೀಟ್ ಮಾಹಿತಿ ಇಲ್ಲಿದೆ.
ಬೆಳಗ್ಗೆ 11 ಗಂಟೆಗೆ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆಗಮಿಸಲಿದ್ದಾರೆ. ಬಳಿಕ 12 ಗಂಟೆಗೆ ಜಿ.ಪಂ ಕಚೇರಿಯಲ್ಲಿ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ ನಡೆಸಲಿದ್ದಾರೆ. ಮಧ್ಯಾಹ್ನ 3:30ಕ್ಕೆ ಬಾಲ ಮಂದಿರಕ್ಕೆ ಭೇಟಿ ನೀಡುತ್ತಾರೆ. 4:30ಕ್ಕೆ ಕಬೀರಾನಂದ ಆಶ್ರಮಕ್ಕೆ ತೆರಳಲಿದ್ದಾರೆ.
ಅಷ್ಟೇ ಅಲ್ಲದೆ ರಾಷ್ಟ್ರನಾಯಕ ದಿ.ಎಸ್ ನಿಜಲಿಂಗಪ್ಪ ನವರ ಮನೆಗೆ ಭೇಟಿ ನೀಡುವ ಸಾಧ್ಯತೆ ಇದೆ. ಚಿತ್ರದುರ್ಗದ ಜಿಲ್ಲಾಧಿಕಾರಿ ನಿವಾಸ ಬಳಿ ಎಸ್. ನಿಜಲಿಂಗಪ್ಪ ಅವರ ಮನೆ ಇದೆ. ರಾಜ್ಯ ಸರ್ಕಾರ ಎಸ್ ನಿಜಲಿಂಗಪ್ಪ ಮನೆ ಖರೀದಿಗೆ ಈ ಹಿಂದೆ ಯತ್ನಿಸಿತ್ತು. ಇಲ್ಲಿ ಮ್ಯೂಸಿಯಂ ಮಾಡಬೇಕೆಂದುಕೊಂಡಿತ್ತು. ಆದರೆ ಮ್ಯೂಸಿಯಂ ನಿರ್ಮಾಣ ಯೋಜನೆ ದಶಕದಿಂದ ನೆನೆಗುದಿಗೆ ಬಿದ್ದಿದೆ. ಈ ಹಿನ್ನೆಲೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಬಿ.ಸಿ ಚಂದ್ರಶೇಖರ್, ಮುರುಳೀಧರ್ ಹಾಲಪ್ಪ ಭೇಟಿ ನೀಡುವ ಸಾಧ್ಯತೆ ಇದೆ.
ಕೆಪಿಸಿಸಿಯಿಂದ ನಿಜಲಿಂಗಪ್ಪ ಮನೆ ಖರೀದಗೆ ಸಿದ್ಧತೆ ನಡೆಯುತ್ತಿದೆ ಎಂಬ ಮಾಹಿತಿ ಇದೆ. ಈ ಸಂಬಂಧ ಎಸ್. ನಿಜಲಿಂಗಪ್ಪ ಪುತ್ರ ಕಿರಣ್ ಜೊತೆ ಒಂದು ಸುತ್ತಿನ ಮಾತುಕತೆ ಆಗಿದೆ ಎನ್ನಲಾಗಿದೆ. ಕೆಪಿಸಿಸಿ ಉಪಾಧ್ಯಕ್ಷ ಮುರುಳೀಧರ್ ಹಾಲಪ್ಪ ಅವರು ನಿನ್ನೆ ಖಾಸಗಿ ಹೋಟೆಲ್‌ನಲ್ಲಿ ಮಾತುಕತೆ ನಡೆಸಿದ್ದಾರಂತೆ. ಎಸ್ ನಿಜಲಿಂಗಪ್ಪ ವಾಸವಿದ್ದ ಮನೆಯ ಆವರಣದಲ್ಲೇ ಜಿಲ್ಲಾ ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕೆ ಪ್ಲಾನ್ ಕೂಡ ನಡೀತಾ ಇದೆ ಎಂದು ಕಾಂಗ್ರೆಸ್ ಪಕ್ಷದ ಉನ್ನತ ಮೂಲಗಳಿಂದ ಈ ಮಾಹಿತಿ ಲಭ್ಯವಾಗಿದೆ.